ಜೈಪುರ
’50 ವರ್ಷಗಳ ಹಿಂದೆಯೇ ಬಡತನ ನಿರ್ಮೂಲನೆ ಮಾಡುವುದಾಗಿ ಕಾಂಗ್ರೆಸ್ ಗ್ಯಾರಂಟಿ ನೀಡಿತ್ತು. ಆ ಗ್ಯಾರಂಟಿ ಇಂದಿಗೂ ಈಡೇರಿಲ್ಲ. ಬಡವರನ್ನು ಹಾದಿ ತಪ್ಪಿಸುವುದೇ ಕಾಂಗ್ರೆಸ್‌ನ ನೀತಿ’ ಎಂದು ಪ್ರಧಾನಿ ನರೇಂದ್ರ ಮೋದಿ ಕುಟುಕಿದ್ದಾರೆ.
ಕೇಂದ್ರ ಸರ್ಕಾರದ ಒಂಬತ್ತು ವರ್ಷಗಳ ಸಂಭ್ರಮಾಚರಣೆ ಅಂಗವಾಗಿ ರಾಜಸ್ಥಾನದ ಅಜ್ಮೀರ್‌ನಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್ ಬಡವರಿಗೆ ದ್ರೋಹ ಬಗೆದಿದೆ. ತನ್ನ ಆಡಳಿತಾವಧಿಯಿಂದಲೂ ಬಡವರನ್ನು ಹಾದಿ ತಪ್ಪಿಸುವ ನೀತಿ ಅಳವಡಿಸಿಕೊಂಡು ಬರುತ್ತಿದೆ. ‘ಕೈ’ ಆಡಳಿತ ಇರುವ ರಾಜಸ್ಥಾನದಲ್ಲಿಯೂ ಜನರು ಸಮಸ್ಯೆಗಳಿಂದ ನರಳುತ್ತಿದ್ದಾರೆ’ ಎಂದು ದೂರಿದರು.
2014ಕ್ಕೂ ಮೊದಲು ರಿಮೋಟ್ ಕಂಟ್ರೋಲ್‌ನಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿತ್ತು. ಆ ವೇಳೆ ದೇಶದ ಜನರು ಭ್ರಷ್ಟಾಚಾರದ ವಿರುದ್ಧ ಬೀದಿಗಿಳಿದು ಹೋರಾಡುತ್ತಿದ್ದರು. ಪ್ರಮುಖ ನಗರಗಳ ಮೇಲೆ ಉಗ್ರರ ದಾಳಿ ನಡೆದಿತ್ತು ಎಂದು ಟೀಕಿಸಿದರು.
ಕಾಂಗ್ರೆಸ್ ತನ್ನ ಅವಧಿಯಲ್ಲಿ ಪೋಷಿಸಿದ ಭ್ರಷ್ಟಾಚಾರವು ದೇಶದ ರಕ್ತವನ್ನು ಹೀರಿದೆ. ಇದರಿಂದ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಯಿತು ಎಂದು ದೂರಿದ ಅವರು, ‘ಪ್ರಸ್ತುತ ವಿಶ್ವದಾದ್ಯಂತ ಜನರು ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ. ದೇಶದಲ್ಲಿ ಬಡತನವು ನಿರ್ಮೂಲನೆಯ ಹಂತದಲ್ಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ ಎಂದರು.