ಮೈಸೂರು:
ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಜಿಟಿ ದೇವೇಗೌಡ ಅವರು, ತಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ತಾಕತ್ ನಾಯಕರಿಗೆ ಇಲ್ಲ ಎಂದು ಬುಧವಾರ ಪಕ್ಷದ ನಾಯಕರ ವಿರುದ್ಧ ಗುಡುಗಿದ್ದಾರೆ.
ಇಂದು ಮೈಸೂರಿನ ರಾಮಲಲ್ಲಾ ಮೂರ್ತಿ ಕೆತ್ತಲು ಶಿಲೆ ದೊರೆತ ಸ್ಥಳದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತಾಡಿದ ದೇವೇಗೌಡ ಅವರು, ಶ್ರೀರಾಮನ ಸನ್ನಿಧಿಯಲ್ಲಿ ಮಾತಾಡುತ್ತಿದ್ದೇನೆ, ಯಾವುದೇ ಪಕ್ಷದ ನಾಯಕರು ಪಕ್ಷ ಸೇರುವ ಆಮಿಶದೊಂದಿಗೆ ನನ್ನನ್ನು ಸಂಪರ್ಕಿಸಿಲ್ಲ ಮತ್ತು ನಾನು ಸಹ ಯಾವುದೇ ಪಕ್ಷ ಸೇರುತ್ತಿಲ್ಲ ಎಂದು ಹೇಳಿದರು.
ಇದೇ ವೇಳೆ ಪಕ್ಷದಿಂದ ಉಚ್ಚಾಟನೆ ವಿಚಾರವಾಗಿ ಮಾತನಾಡಿದ ಜಿಟಿ ದೇವೇಗೌಡ ಅವರು, ನಾನು ಬೇರೆ ಯಾವುದೇ ಪಕ್ಷದ ಸಭೆಗಳಲ್ಲಿ ಭಾಗವಹಿಸಿಲ್ಲ. ನನ್ನ ಮೇಲೆ ಆಗಲಿ ಯತ್ನಾಳ್ ಮೇಲೆ ಆಗಲಿ ಕ್ರಮ ಕೈಗೊಳ್ಳಲು ನಾಯಕರಿಗೆ ಧಂ ಬೇಕು. ಪಕ್ಷದಿಂದ ಸಸ್ಪೆಂಡ್ ಮಾಡೋಕೆ ಅಥವಾ ಉಚ್ಚಾಟನೆ ಮಾಡೋಕೆ ತಾಖತ್ ಇರಬೇಕು ಎಂದರು.
ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ತಾಕತ್ ನಾಯಕರಲಿಲ್ಲ. ಪಕ್ಷ ಕಟ್ಟುವ ತಾಕತ್ ಇರೋನು ಸಸ್ಪೆಂಡ್ ಮಾಡುತ್ತಾನೆ. ಆದರೆ ನಾಯಕರಿಗೆ ಈ ತಾಕತ್ ಇಲ್ಲ. ಅದಕ್ಕೆ ಉಚ್ಚಾಟನೆ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇನ್ನು ಮೂಡಾ ಹಗರಣ ವಿಚಾರವಾಗಿ ಮಾತನಾಡಿದ ದೇವೇಗೌಡ, ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯವಿಲ್ಲ. ಯಾವ ಪಕ್ಷದ ಯಾವ ನಾಯಕರ ಮೇಲೆ ಎಷ್ಟು ಎಫ್ಐಆರ್ ಗಳಿವೆ ಗೊತ್ತಾ? ಸಿದ್ದರಾಮಯ್ಯ ರಾಜೀನಾಮೆ ಯಾಕೆ ಕೊಡಬೇಕು. ನ್ಯಾಯಾಲಯದ ತೀರ್ಮಾನ ಬರಲಿ. ಆಮೇಲೆ ನೋಡೋಣಾ, ತಮ್ಮ ಪಕ್ಷದಲ್ಲಿ ಯಾರ ಮೇಲೆ ಎಷ್ಟು ಎಫ್ಐಆರ್ ಗಳಿವೆ ಎಂಬುದನ್ನು ನಾಯಕರುಗಳು ಮೊದಲು ನೋಡಿಕೊಂಡು ನಂತರ ಸಿದ್ದರಾಮಯ್ಯರ ರಾಜೀನಾಮೆ ಕೇಳಲಿ ಎಂದು ಹೇಳಿದರು.
