ದಾವಣಗೆರೆ:
ರಾಜ್ಯದ ಬರ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರದ ನೆರವು ಅವಶ್ಯವಾಗಿ ಬೇಕಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ನಗರದ ಐಟಿಐ ಕಾಲೇಜಿನ ಹೆಲಿ ಪ್ಯಾಡ್‍ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬರಗಾಲಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೇಂದ್ರ ಬರ ಅಧ್ಯಯನ ತಂಡವು ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ತಂಡದ ವರದಿ ಆಧರಿಸಿ, ಕೇಂದ್ರ ಸರ್ಕಾರ ನೀಡುವ ಆರ್ಥಿಕ ನೆರವನ್ನು ಕಾದು ನೋಡುತ್ತೇನೆ ಎಂದರು.
ಈಗಾಗಲೇ ಕೇಂದ್ರ ಬರ ಅಧ್ಯಯನ ತಂಡವು ರಾಜ್ಯದ ಕೋಲಾರ, ಬಳ್ಳಾರಿ ಮತ್ತಿತರೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ನ.18ರಂದು ದಾವಣಗೆರೆ ಜಿಲ್ಲೆಗೂ ತಂಡವು ಭೇಟಿ ನೀಡಿ, ಇಲ್ಲಿನ ಬೆಳೆ ಹಾನಿ, ವಾಸ್ತವ ಪರಿಸ್ಥಿತಿಯನ್ನು ಅಧ್ಯಯನ ನಡೆಸಲಿದೆ. ಬರ ಅಧ್ಯಯನ ತಂಡವು ಕೇಂದ್ರಕ್ಕೆ ಏನು ವರದಿ ನೀಡುತ್ತದೋ ಕಾದು ನೋಡೋಣ ಎಂದ ಅವರು, ರಾಜ್ಯದ 100ಕ್ಕೂ ಹೆಚ್ಚು ತಾಲೂಕುಗಳು ಬರ ಪೀಡಿತವೆಂದು ಘೋಷಿಸಲ್ಪಟ್ಟಿದ್ದು, ಈ ತಾಲೂಕುಗಳಲ್ಲಿ ಕುಡಿಯುವ ನೀರು ಪೂರೈಸಲು 50 ಲಕ್ಷ ರೂ.ವರೆಗಿನ ಕಾಮಗಾರಿ ಕೈಗೊಳ್ಳಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸೂಚಿಸಿದ್ದೇವೆ. ಅತಿವೃಷ್ಟಿ ಸಂದರ್ಭದಲ್ಲಿ 250 ಕೋಟಿ ಅನುದಾನವನ್ನು ರಾಜ್ಯ ಸರ್ಕಾರವೇ ನೀಡಿ, ಅಗತ್ಯ ಪರಿಹಾರ ಕ್ರಮ ಕೈಗೊಂಡಿದೆ ಎಂದು ಮಾಹಿತಿ ನೀಡಿದರು.
ಅವಕಾಶವಿದ್ದಾಗ ಮುಖ್ಯಮಂತ್ರಿ ಸ್ಥಾನಕ್ಕೆ ತಾವೂ ಆಕಾಂಕ್ಷಿ ಎಂಬ ಪರಮೇಶ್ವರ್ ಹೇಳಿಕೆಯಲ್ಲಿ ತಪ್ಪೇನಿಲ್ಲ. ಅದನ್ನು ಬೇರೆ ರೀತಿ ಅರ್ಥೈಸುವ ಅಗತ್ಯವೂ ಇಲ್ಲ. ಮುಖ್ಯಮಂತ್ರಿ ಸ್ಥಾನ ಯಾರಿಗೂ ಶಾಶ್ವತವಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಈ ರಾಜ್ಯದಲ್ಲಿ ಅದೆಷ್ಟೋ ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಸಮರ್ಥರಾದ ಸಾಕಷ್ಟು ಜನರಿದ್ದು, ಅಂತಹವರಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೂಡ ಒಬ್ಬರು. ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ಒಪ್ಪಿದರೆ ತಾವೂ ಮುಖ್ಯಮಂತ್ರಿ ಸ್ಥಾನಕ್ಕೆ ಅಪೇಕ್ಷಿತರೆಂದು ಪರಮೇಶ್ವರ್ ಅನಿಸಿಕೆ ವ್ಯಕ್ತಪಡಿಸಿರುವುದರಲ್ಲಿ ತಪ್ಪೇನೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ರಚನೆಯಾಗಿದೆ. ಇದರಿಂದಲೇ ಅಭಿವೃದ್ಧಿ ಕೆಲಸವಾಗುವುದಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಸಮಸ್ಯೆಗಳನ್ನು ಗಮನಿಸಿ, ಆದ್ಯತೆ ಮೇಲೆ ಕೆಲಸ ಮಾಡಬೇಕೆಂಬ ಬದ್ಧತೆ ಇದ್ದರೆ ಮಂಡಳಿಗಿಂತಲೂ ಪರಿಣಾಮಕಾರಿಯಾಗಿ ಸರ್ಕಾರ, ಇಲಾಖೆಗಳಿಂದಲೇ ಕೆಲಸ ಮಾಡಬಹುದು ಎಂಬುದು ನನ್ನ ಅಭಿಪ್ರಾಯ ಎಂದು ಅವರು ಇದೇ ವೇಳೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯತ್ ಸಿಇಒ ಎಸ್.ಅಶ್ವತಿ, ಜೆಡಿಎಸ್ ಹಿರಿಯ ಮುಖಂಡ ಟಿ.ದಾಸಕರಿಯಪ್ಪ, ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಮುಖಂಡರಾದ ಹೊದಿಗೆರೆ ರಮೇಶ್, ಗಣೇಶ್ ಟಿ. ದಾಸಕರಿಯಪ್ಪ, ಟಿ.ಅಸ್ಗರ್, ಹರಪನಹಳ್ಳಿ ಪರಮೇಶಪ್ಪ, ಸಿ.ಕಡತಿ ಅಂಜಿನಪ್ಪ, ಎ.ವೈ.ಕೃಷ್ಣಮೂರ್ತಿ, ಹೆಚ್.ಸಿ.ಗುಡ್ಡಪ್ಪ, ಬಾತಿ ಶಂಕರ್, ದೊಡ್ಡಮನಿ ಪಕೃದ್ದೀನ್, ದಾದಾಪೀರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








