ಚಿತ್ರದುರ್ಗ
ಜಿಲ್ಲೆಯ ಎಲ್ಲ ಆರೂ ತಾಲ್ಲೂಕುಗಳನ್ನು ಬರ ಪೀಡಿತ ಎಂದು ಈಗಾಗಲೆ ಘೋಷಿಸಲಾಗಿದ್ದು, ಬರ ಪರಿಹಾರ ಕಾರ್ಯಗಳಿಗೆ ಚುನಾವಣಾ ನೀತಿ ಸಂಹಿತೆಯ ಅಡ್ಡಿ ಇರುವುದಿಲ್ಲವಾದ್ದರಿಂದ ಕುಡಿಯುವ ನೀರು, ಕೂಲಿಕಾರರಿಗೆ ಉದ್ಯೋಗ ಹಾಗೂ ಜಾನುವಾರುಗಳಿಗೆ ಮೇವು ಪೂರೈಸುವುದಕ್ಕೆ ಮೊದಲ ಆದ್ಯತೆ ನೀಡಿ ಎಂದು ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಜಿಲ್ಲೆಯ ಬರ ಪರಿಹಾರ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸದ್ಯ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಬರ ಪರಿಹಾರ ಕಾರ್ಯಗಳನ್ನು ಅಧಿಕಾರಿಗಳು ನೀತಿ ಸಂಹಿತೆಯ ನೆಪವೊಡ್ಡಿ ನಿರ್ಲಕ್ಷಿಸುವಂತಿಲ್ಲ. ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ವಿಫಲವಾದ ಕಾರಣದಿಂದಾಗಿ, ನೀರಿನ ತೀವ್ರ ಕೊರತೆ ಇದೆ. ಅಲ್ಲದೆ, ಅಂತರ್ಜಲ ಮಟ್ಟವೂ ಕುಸಿದಿದೆ. ಬಹಳಷ್ಟು ಕಡೆಗಳಲ್ಲಿ ಬೋರ್‍ವೆಲ್‍ಗಳು ವಿಫಲವಾಗುತ್ತಿವೆ. ಹೀಗಾಗಿ ಅಧಿಕಾರಿಗಳು ಈ ವಿಚಾರದಲ್ಲಿ ಗಂಭೀರವಾಗಿ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು
ಜಿಲ್ಲೆಯಲ್ಲಿ ಈಗಾಗಲೆ ಚಳ್ಳಕೆರೆ- 29, ಚಿತ್ರದುರ್ಗ-30, ಹಿರಿಯೂರು-22, ಹೊಳಲ್ಕೆರೆ-12, ಹೊಸದುರ್ಗ-06 ಹಾಗೂ ಮೊಳಕಾಲ್ಮುರು ತಾಲ್ಲೂಕಿನ 18 ಗ್ರಾಮಗಳು ಸೇರಿದಂತೆ 117 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಹಾಗೂ 11 ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು, ಜನರಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿರುವುದು ಕೇವಲ ತಾತ್ಕಾಲಿಕ ಪರಿಹಾರವಾಗಿದ್ದು, ಅಧಿಕಾರಿಗಳು, ಇಂತಹ ಗ್ರಾಮಗಳಿಗೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದರು
ಜಿಲ್ಲೆಯಲ್ಲಿ ಸದ್ಯ ಕುಡಿಯುವ ನೀರು ಪೂರೈಕೆಯ ಯಾವುದೇ ಕಾಮಗಾರಿಗಳು ಪೂರ್ಣಗೊಂಡಿದ್ದಲ್ಲಿ, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಉದ್ಘಾಟನೆ ಸಮಾರಂಭಕ್ಕಾಗಿ ಕಾಯದೆ, ಮೊದಲು ಜನರಿಗೆ ನೀರು ನೀಡುವ ಕಾರ್ಯ ಪ್ರಾರಂಭಿಸಿ. ಬರುವ ಜೂನ್ ತಿಂಗಳಿನವರೆಗಿನ ಅವಧಿಯನ್ನು ಗುರಿಯಾಗಿಸಿಕೊಂಡು, ನೀರು ಪೂರೈಕೆಗೆ ಯೋಜನೆ ಸಿದ್ಧಪಡಿಸಿಕೊಳ್ಳಿ. ಒಟ್ಟಾರೆ ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರು, ಕೂಲಿಕಾರರಿಗೆ ಸಮರ್ಪಕ ಉದ್ಯೋಗ ಹಾಗೂ ಜಾನುವಾರುಗಳಿಗೆ ಅಗತ್ಯವಿರುವಷ್ಟು ಮೇವು ಪೂರೈಕೆ ಕಾರ್ಯ ಕೈಗೊಳ್ಳುವ ಮೂಲಕ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಶಿವಯೋಗಿ ಕಳಸದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉದ್ಯೋಗದ ಅಗತ್ಯ ಹೆಚ್ಚಿದೆ :
ಜಿಲ್ಲೆಯ ಎಲ್ಲ ತಾಲ್ಲೂಕುಗಳ ಬರಪೀಡಿತವಾಗಿದ್ದು, ಕೂಲಿ ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗದ ಅಗತ್ಯವಿದೆ. ಹೀಗಾಗಿ ಉದ್ಯೋಗಖಾತ್ರಿ ಯೋಜನೆಯನ್ನು ಜಿಲ್ಲೆಯಲ್ಲಿ ಹೆಚ್ಚು, ಹೆಚ್ಚು ಬಳಸಿಕೊಳ್ಳಬೇಕಿದೆ. ಕೃಷಿ, ರೇಷ್ಮೆ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಯವರು ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗ ನೀಡುವಂತಹ ಕಾಮಗಾರಿಗಳನ್ನು ನಡೆಸಿ, ಉದ್ಯೋಗಖಾತ್ರಿಯಡಿ ಅದನ್ನು ಬಳಸಿ, ಮಾನವ ದಿನಗಳನ್ನು ಸೃಜಿಸಬೇಕು ಎಂದು ಶಿವಯೋಗಿ ಕಳಸದ ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು, ಜಿಲ್ಲೆಯಲ್ಲಿ ಈ ವರ್ಷ 17 ಸಾವಿರ ಕುಟುಂಬಗಳಿಗೆ 100 ದಿನಗಳ ಉದ್ಯೋಗ ನೀಡಲಾಗಿದೆ. ಪ್ರತಿ ಗ್ರಾಮ ಪಂಚಾಯತ್‍ನಲ್ಲಿಯೂ ಸಮುದಾಯ ಆಧಾರಿತ ಕನಿಷ್ಟ 3 ಕಾಮಗಾರಿಗಳನ್ನು ತಕ್ಷಣ ಪ್ರಾರಂಭಿಸುವಂತೆ ನಿರ್ದೇಶನ ನೀಡಲಾಗಿದೆ.
ಈ ವರ್ಷ ಉದ್ಯೋಗಖಾತ್ರಿ ಯೋಜನೆಯಡಿ 1 ಸಾವಿರ ಕೆರೆಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಕಳೆದ 20 ದಿನಗಳ ಕೂಲಿ ಮೊತ್ತ 38 ಕೋಟಿ ರೂ. ಜಿಲ್ಲೆಗೆ ಬಿಡುಗಡೆಯಾಗುವುದು ಬಾಕಿ ಇದೆ. ಸಾಮಗ್ರಿ ವೆಚ್ಚ ಕಳೆದ 1 ವರ್ಷದಿಂದ ಸುಮಾರು 118 ಕೋಟಿ ರೂ. ಅನುದಾನ ಬರುವುದು ಬಾಕಿ ಇದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 5 ಗೋಶಾಲೆಗಳು ಹಾಗೂ 5 ಮೇವು ಬ್ಯಾಂಕ್ ಪ್ರಾರಂಭಿಸಲಾಗಿದೆ. ಗೋಶಾಲೆಗಳಲ್ಲಿ ಸುಮಾರು 4500 ಜಾನುವಾರುಗಳಿಗೆ ಮೇವು ನೀಡಲಾಗುತ್ತಿದ್ದು, ಈ ಬಾರಿ ಮೇವು ಖರೀದಿಗೆ ಟೆಂಡರ್ ಕರೆದು, ಸಮರ್ಪಕವಾಗಿ ಮೇವು ಒದಗಿಸುವಂತೆ ಕ್ರಮಕೈಗೊಳ್ಳಲಾಗಿದೆ.
ಗೋಶಾಲೆಗಳಲ್ಲಿ ಅಗತ್ಯ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ವಿವರಿಸಿದರು. ಗೋಶಾಲೆಗಳಿಗೆ ಪೂರೈಸಲಾಗುವ ಮೇವು, ಸೌಲಭ್ಯಗಳ ವ್ಯವಸ್ಥೆ, ಖರ್ಚು-ವೆಚ್ಚಗಳ ವಿವರವನ್ನು ಜಿಲ್ಲೆಯ ವೆಬ್‍ಸೈಟ್‍ನಲ್ಲಿ ಪ್ರಕಟಿಸುವ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳಿ ಎಂದು ಪ್ರಾದೇಶಿಕ ಆಯುಕ್ತರು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಸವರಾಜು, ಮುಖ್ಯ ಯೋಜನಾಧಿಕಾರಿ ಶಶಿಧರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರು, ಜಂಟಿಕೃಷಿ ನಿರ್ದೇಶಕ ಲಕ್ಷ್ಮಣ್, ತೋಟಗಾರಿಕೆ ಉಪನಿರ್ದೇಶಕಿ ಸವಿತಾ, ನಗರಸಭೆ ಪೌರಾಯುಕ್ತ ಚಂದ್ರಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ