ಬಳ್ಳಾರಿ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ವಚ್ಚ ಭಾರತ ಅಭಿಯಾನ ವರದಾನವಾಗಿದ್ದು, ಬಳ್ಳಾರಿಯನ್ನು ಸ್ವಚ್ಛ ನಗರವನ್ನಾಗಿಸಲು ನಾಗರಿಕರು ಕೈಜೋಡಿಸಬೇಕು ಎಂದು ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಕರೆ ನೀಡಿದರು.
ಬಳ್ಳಾರಿ ಹಾಗೂ ಕಲಬುರ್ಗಿಯ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಾನಗರ ಪಾಲಿಕೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಶ್ರೀ ಜಗದ್ಗುರು ಸಿದ್ದೇಶ್ವರ ಪ್ರೌಢ ಶಾಲೆ ಇವರ ಸಹಯೋಗದೊಂದಿಗೆ ಶನಿವಾರ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಆಯೋಜಿಸಿದ್ದ ಸ್ವಚ್ಚ ಭಾರತ ಅಭಿಯಾನ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತ ಸರ್ಕಾರದ ಸ್ವಚ್ಚ ಭಾರತ ಮಿಷನ್ ಯೋಜನೆಯು ಬಯಲು ಮಲ ವಿಸರ್ಜನೆ ತೊಡೆದು ಹಾಕುವುದು ಹಸಿರುವ ಮತ್ತು ಒಣ ಕಸವನ್ನು ವಿಂಗಡಿಸಿ ಪಾಲಿಕೆಯ ವಾಹನಗಳಿಗೆ ನೀಡಲು ಜನರನ್ನು ಉತ್ತೇಜಿಸುವುದು, ಘನತ್ಯಾಜ್ಯ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ನಿರ್ಮಿಸುವುದು, ನಗರ ಪ್ರದೇಶಗಳಲ್ಲಿರುವ ಬಹು ಅಂತಸ್ಸಿನ ಕಟ್ಟಡಗಳಲ್ಲಿ ಹಾಗೂ ಮನೆ ಮನೆಗಳಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಮರು ಬಳಕೆಗೆ ಮುಂದಾಗುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ ಎಂದು ಅವರು ಹೇಳಿದರು.
ಸಾರ್ವಜನಿಕರು ರಸ್ತೆಯಲ್ಲಿ ಕಸವನ್ನು ಹಾಕದೇ ಡಸ್ಟ್‍ಬಿನ್‍ಗೆ ಹಾಕಿ. ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿ. ನಮ್ಮ ನಗರವನ್ನು ಸ್ವಚ್ಛ ನಗರವನ್ನಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ.ಹನುಮಂತಪ್ಪ ಅವರು ಮಾತನಾಡಿ ಜನರು ಸ್ವಚ್ಚತೆಯ ಕಡೆಗೆ ಗಮನಹರಿಸಿದ್ದಲ್ಲಿ ಅವರ ಆರೋಗ್ಯ ಉತ್ತಮವಾಗಿರುತ್ತದೆ. ಈ ದಿಸೆಯಲ್ಲಿ ಪಾಲಿಕೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದೆ. ಸ್ವಚ್ಚ ಭಾರತ ಅಭಿಯಾನದಿಂದಾಗಿ ಅನೇಕ ಜನರ ಆರೋಗ್ಯ ಸುಧಾರಣೆಯಾಗಿದೆ ಎಂದರು.
ಮಹಾನಗರ ಪಾಲಿಕೆಯ ಪರಿಸರ ಅಭಿಯಂತರರಾದ ಟಿ.ಶ್ರೀನಿವಾಸ ಅವರು ಮಾತನಾಡಿ, ನಗರದಲ್ಲಿ ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರ ಹಾಗೂ ನಗರದ ಸೌಂದರ್ಯತೆ ಹಾಳಾಗುತ್ತಿದೆ ಹಾಗೂ ವಾಯು ಮಾಲಿನ್ಯ ಉಂಟಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಪ್ಲಾಸ್ಟೀಕ್ ಬಳಕೆಯನ್ನು ನಿಷೇಧಿಸಿ ಸ್ವಚ್ಚತೆಯ ಬಗ್ಗೆ ಗಮನಹರಿಸಿ ಎಂದರು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಜಾಗೃತಿ ಜಾಥಾಕ್ಕೆ ಮಹಾನಗರ ಪಾಲಿಕೆ ಸದಸ್ಯ ಶಾಸಾಬ್ ಅವರು ಚಾಲನೆ ನೀಡಿದರು. ಶಾಲಾ ಮಕ್ಕಳಿಗಾಗಿ ಚಿತ್ರ ಕಲಾ ಸ್ಪರ್ಧೆ, ಭಾಷಣ ಸ್ಪರ್ಧೆ ಹಾಗೂ ರಸಪ್ರಶ್ನೆ ಆಯೋಜಿಸಲಾಯಿತು. ವಿಜೇತರಿಗೆ ಬಹಮಾನಗಳನ್ನು ವಿತರಿಸಲಾಯಿತು.
ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ಉಪನಿರ್ದೇಶಕರಾದ ಡಾ.ಜಿ.ಡಿ.ಹಳ್ಳಿಕೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಪ್ರಚಾರ ಸಹಾಯಕ ಎನ್.ರಾಮಕೃಷ್ಣ ಅವರು ಸ್ವಾಗತಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಜಿ. ಖಲೀಲ್ ಸಾಬ್, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಚಾರಕಿ ಮಂಜುಳಾ, ಶ್ರೀ ಜಗದ್ಗುರು ಸಿದ್ದೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಈರಮ್ಮ ಸೇರಿದಂತೆ ಇತರೆ ಗಣ್ಯವ್ಯಕ್ತಿಗಳು, ಶಾಲಾ ವಿದ್ಯಾರ್ಥಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
