ಬಳ್ಳಾರಿ:
ಕೃಷಿ ವಾಣಿಜ್ಯ ಹಾಗೂ ಆಹಾರ ಸಂಸ್ಕರಣಾ ನೀತಿ, ಕೈಗಾರಿಕಾ ನೀತಿಗಳ ಕುರಿತು ಕಾರ್ಯಾಗಾರ
ಬಳ್ಳಾರಿಯಲ್ಲಿ ವಿವಿಧ ರೀತಿಯ ಕೈಗಾರಿಕೆಗಳನ್ನು ಸ್ಥಾಪಿಸಲು ಸ್ಥಳೀಯ ಉದ್ಯಮಿಗಳು ಮುಂದೆ ಬಂದಿದ್ದು, 646 ಕೋಟಿ ರೂ.ಬಂಡವಾಳದ ಕೈಗಾರಿಕೆಗಳಿಗೆ ಜಿಲ್ಲಾಡಳಿತ ಈಗಾಗಲೇ ಅನುಮೋದನೆ ನೀಡಿದೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದರು.
ಜಿಲ್ಲಾಡಳಿತ,ಜಿಲ್ಲಾ ಕೈಗಾರಿಕಾ ಕೇಂದ್ರ,ಕೃಷಿ,ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಹೋಟಲ್ ಅಲ್ಲಂನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕೃಷಿ ವಾಣಿಜ್ಯ ಹಾಗೂ ಆಹಾರ ಸಂಸ್ಕರಣಾ ನೀತಿ-2015 ಮತ್ತು ಕೈಗಾರಿಕಾ ನೀತಿ 2014-19 ಯೋಜನೆಗಳ ಪರಿಚಯದ ಕಾರ್ಯಾಗಾರಕ್ಕೆ ಚಾಲನೆ ಮತ್ತು ದಿಶಾ ಉದ್ಯಮಶೀಲತಾ ಮಾರ್ಗದರ್ಶನ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯ ಉದ್ಯಮಿಗಳು ಮುಂದೆ ಬಂದು ವಿವಿಧ ರೀತಿಯ ಸಣ್ಣ ಪ್ರಮಾಣದ ಕೈಗಾರಿಕೆಗಳು ಸ್ಥಾಪಿಸುತ್ತಿರುವುದರಿಂದ ಉದ್ಯೋಗ ಸೃಷ್ಟಿಯಾಗಿ ನಮ್ಮ ಜನರಿಗೆ ಉದ್ಯೋಗ ದೊರಕಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಒಂದು ದೇಶದಲ್ಲಿನ ಮಾನವ ಸಂಪನ್ಮೂಲ ಮತ್ತು ಪ್ರಾಕೃತಿಕ ಸಂಪತ್ತು ಸಮರ್ಪಕವಾಗಿ ಸದ್ಭಳಕೆಯಾದರೇ ಆ ದೇಶಗಳು ಅಭಿವೃದ್ಧಿ ಸಾಧಿಸಲು ಸಾಧ್ಯ, ಈ ನಿಟ್ಟಿನಲ್ಲಿ ಜಪಾನ್ ಮತ್ತು ಚೀನಾಗಳು ಸಾಗಿದ್ದು, ಇದೇ ನೀತಿಯನ್ನು ನಾವು ಅನುಸರಿಸಬೇಕಿದೆ ಎಂದು ಹೇಳಿದ ಅವರು, ಬಳ್ಳಾರಿ ಜಿಲ್ಲೆಯು ಸಾಕಷ್ಟು ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲ ಹೊಂದಿದ್ದು, ಅದು ಸಮರ್ಪಕವಾಗಿ ಸದ್ಭಳಕೆಯಾಗಬೇಕಿದ್ದು, ಅದಕ್ಕೆ ಪೂರಕವಾಗಿ ಈ ರೀತಿಯ ಆಹಾರ ಸಂಸ್ಕರಣಾ ಮತ್ತು ಉದ್ಯಮಶೀಲತಾ ಕಾರ್ಯಾಗಾರಗಳು ಏರ್ಪಡಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಭತ್ತ,ಬಾಳೆ,ಕಬ್ಬು, ಮೆಣಸಿನಕಾಯಿ,ಅಂಜೂರು, ಪಪ್ಪಾಯಿ,ದಾಳಿಂಬೆ,ಈರುಳ್ಳಿ, ಮೆಕ್ಕೆಜೋಳ ಹೀಗೆ ಅನೇಕ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇವುಗಳನ್ನು ನೇರವಾಗಿ ಮಾರಾಟ ಮಾಡುವ ಬದಲಾಗಿ ಮೌಲ್ಯವರ್ಧಿತವಾಗಿ ಮಾರಾಟ ಮಾಡಿ ಅಂದರೇ ಸಂಸ್ಕರಣೆ ಮಾಡಿ ಮಾರಾಟ ಮಾಡಿದರೇ ಹೆಚ್ಚಿನ ಲಾಭ ದೊರಕಲು ಸಾಧ್ಯ ಎಂದರು.
ಜ್ಞಾನ,ಕೌಶಲ್ಯ ಮತ್ತು ಆಸಕ್ತಿಯನ್ನು ಯುವಸಮೂಹದಲ್ಲಿ ಮೂಡಿಸಿ ಅವರಿಂದ ಉದ್ದಿಮೆಗಳನ್ನು ಆರಂಭಿಸಿದರೇ ಒಂದು ಉದ್ದಿಮೆಯಿಂದ ಸಾವಿರಾರು ಜನರಿಗೆ ಕೆಲಸ ಸಿಗಲು ಸಾಧ್ಯ ಎಂದರು.
ವಿವಿಧ ರೀತಿಯ ಉದ್ದಿಮೆಗಳನ್ನು ಸ್ಥಾಪಿಸಲು ಮುಂದೆ ಬರುವವ ಉದ್ದಿಮೆದಾರರಿಗೆ ಅಗತ್ಯ ಸಹಕಾರಗಳನ್ನು ಜಿಲ್ಲಾಡಳಿತ ಕಲ್ಪಿಸಲಿದೆ ಎಂಬ ಭರವಸೆಯನ್ನು ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು, ಯುವ ಉದ್ದಿಮೆದಾರರ ಅಕಾಡೆಮಿಯನ್ನು ಬಳ್ಳಾರಿಯಲ್ಲಿ ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದರು.
ಮುಂಡರಗಿ ಲೇಔಟ್ನಲ್ಲಿ ಕೈಗಾರಿಕೆಗಳಿಗೆ 40 ಎಕರೆ ಮೀಸಲು:
ನಗರದ ಹೊರವಲಯದಲ್ಲಿರುವ ಮುಂಡರಗಿ ಲೇಔಟ್ನಲ್ಲಿ ಪರಿಸರ ಸ್ನೇಹಿ ಮತ್ತು ನೂರಾರು ಜನರಿಗೆ ಉದ್ಯೋಗ ಒದಗಿಸುವಂತ ವಿವಿಧ ರೀತಿಯ ಕೈಗಾರಿಕೆಗಳನ್ನು ಸ್ಥಾಪಿಸಲು ಅನುಕೂಲವಾಗುವ ನಿಟ್ಟಿನಲ್ಲಿ 40 ಎಕರೆ ಜಾಗ ಮೀಸಲಿಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಹೇಳಿದರು.
ಆಹಾರ ಸಂಸ್ಕರಣಾ ಘಟಕಗಳಂತ ಸಣ್ಣ ಸಣ್ಣ ಕೈಗಾರಿಕೆಗಳು ಇಲ್ಲಿ ಸ್ಥಾಪಿಸುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಉದ್ದಿಮೆದಾರರು ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಜನರಿಗೆ ಉದ್ಯೊಗ ಇದರಿಂದ ಸಿಗಲಿದೆ ಎಂಬ ಆಶಾಭಾವನೆಯನ್ನು ಜಿಲ್ಲಾಧಿಕಾರಿಗಳು ವ್ಯಕ್ತಪಡಿಸಿದರು.
ಇದರಿಂದ ಮನೆ, ಉದ್ದಿಮೆ ಮತ್ತು ಉದ್ಯೋಗ ಮೂರು ಒಂದೇಡೆ ಒದಗಿಸುವ ಪ್ರಯತ್ನಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಈ ತಿಂಗಳಲ್ಲಿ ಮುಂಡರಗಿ ಲೇಔಟ್ನ ಟೆಂಡರ್ ಪ್ರಕ್ರಿಯೆ ಮುಗಿಯಲಿದ್ದು,ಮುಂದಿನ ತಿಂಗಳು(ಅಕ್ಟೋಬರ್) ಅಡಿಗಲ್ಲು ನೆರವೇರಿಸಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು.
ಮುಂಡರಗಿ ಲೇಔಟ್ಗೆ 45 ಕೋಟಿ ರೂ. ವೆಚ್ಚದಲ್ಲಿ ಅಲ್ಲಿಪುರದಿಂದ ನೇರವಾಗಿ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಮಾತನಾಡಿ, ಜಿಲ್ಲೆಯಲ್ಲಿ ನೀರಾವರಿ ಮತ್ತು ಮಳೆಯಾಶ್ರಿತ ಭೂಮಿಗಳಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಆದರೇ ರೈತರಿಗೆ ನಿರೀಕ್ಷಿತ ಲಾಭ ಸಿಗುತ್ತಿಲ್ಲ ಮತ್ತು ಗ್ರಾಹಕರಿಗೆ ದುಬಾರಿ ಬೆಲೆಯಲ್ಲಿ ಲಭ್ಯವಾಗುತ್ತಿವೆ. ಇದಕ್ಕೆ ಪರಿಹಾರ ಆಹಾರ ಸಂಸ್ಕರಣಾ ಘಟಕಗಳಂತ ಸಣ್ಣ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಿ ಅವುಗಳನ್ನು ಮೌಲ್ಯವರ್ಧನೆಗೊಳಿಸಿ ಮಾರಾಟ ಮಾಡುವುದರ ಮುಖಾಂತರ ಲಾಭಗಳಿಸುವುದಾಗಿದೆ ಎಂದರು.
ಹೊಸದಾಗಿ ಉದ್ದಿಮೆಗಳನ್ನು ಸ್ಥಾಪಿಸಲು ಮುಂದೆ ಬರುವವರಿಗೆ ಅಗತ್ಯ ಸಹಕಾರವನ್ನು ನೀಡಲಾಗುತ್ತದೆ. ಉದ್ಯಮಶೀಲತೆ ಎಂಬುದು ಬಳ್ಳಾರಿ ಜನರ ಶೈಲಿಯಾಗಿದ್ದು,ಅದಕ್ಕೆ ಪ್ರೋತ್ಸಾಹಿಸಬೇಕು ಎಂಬ ಸದುದ್ದೇಶದಿಂದ ಈ ರೀತಿಯ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತಿದ್ದು,ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಂತರ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ 125ಕ್ಕೂ ಹೆಚ್ಚು ಉದ್ದಿಮೆದಾರರು ಮತ್ತು ರೈತರಿಗೆ ಕೃಷಿ ಸಂಸ್ಕರಣೆ ಉದ್ದಿಮೆಗಳ ಬಗ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ದಿವಾಕರ್, ಸಂಪದ ಯೋಜನೆ ಮತ್ತು ಕಾಯ್ದೆ ಬಗ್ಗೆ ಕರ್ನಾಟಕ ಆಹಾರ ನಿಗಮದ ಜಂಟಿ ನಿರ್ದೇಶಕಿ ಅಂಬಿಕಾ, ಕೃಷಿ ಉದ್ದಿಮೆ ಅಭಿವೃದ್ಧಿ ನೀತಿ ಬಗ್ಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಂಜುನಾಥ ಗೌಡ ಅವರು ಮಾಹಿತಿ ನೀಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಸಿ.ಕೆ.ನಾಗರಾಜ ನಿರೂಪಿಸಿದರು. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಚಿದಾನಂದ ಅವರು ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







