ಬಳ್ಳಾರಿ
ಬಳ್ಳಾರಿ ಲೋಕಸಭಾ ಚುನಾವಣೆಯ ಕಾರ್ಯಕ್ಕೆ ಮತಗಟ್ಟೆ ಅಧಿಕಾರಿಗಳೆಂದು ನಿಯೋಜಿತರಾದ ಪಿಒ,ಪಿಆರ್‍ಒ ಮತ್ತು ಎಪಿಆರ್‍ಒಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ವಿಧಾನಸಭಾ ಕ್ಷೇತ್ರವಾರು ತರಬೇತಿ ನೀಡುವ ಕಾರ್ಯ ಗುರುವಾರ ನಡೆಯಿತು.
ಬಳ್ಳಾರಿ ಗ್ರಾಮೀಣ ಮತ್ತು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರಳಾದೇವಿ ಪ್ರಥಮ ದರ್ಜೆ ಕಾಲೇಜು ಹಾಗೂ ಕೋಟೆ ಆವರಣದಲ್ಲಿರುವ ಸಂತ ಜಾನ್ ಪದವಿ ಪೂರ್ವ ಕಾಲೇಜಿನಲ್ಲಿ ಹಾಗೂ ಕಂಪ್ಲಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಂಪ್ಲಿಯಲ್ಲಿ ಶುಕ್ರವಾರ ನಡೆಯಿತು. ಸೆಕ್ಟರ್ ಅಧಿಕಾರಿಗಳು ತಮ್ಮ ಸೆಕ್ಟರ್‍ವಾರು ಮತಗಟ್ಟೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಚುನಾವಣಾ ಕಾರ್ಯನಿರ್ವಹಣೆ ಕುರಿತು ತಿಳಿಸಿಕೊಟ್ಟರು.
ನಗರ ಹಾಗೂ ಕಂಪ್ಲಿಯಲ್ಲಿ ಚುನಾವಣಾ ತರಬೇತಿ ನಡೆಯುತ್ತಿದ್ದ ಸ್ಥಳಗಳಿಗೆ ಗುರುವಾರ ಸಾಮಾನ್ಯ ವೀಕ್ಷಕರಾದ ಡಾ.ಸುಬ್ಬಯ್ಯನಾಯ್ಡು ಅವರೊಡಗೂಡಿ ಭೇಟಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅವರು ಮತಗಟ್ಟೆಗೆ ನಿಯೋಜಿತರಾದ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್, ವಿವಿ ಪ್ಯಾಟ್ ಇನ್‍ಸ್ಟಾಲೇಶನ್, ಶಾಸನಬದ್ಧ ಲಕೋಟೆಗಳ ಕುರಿತು ತರಬೇತಿಯಲ್ಲಿ ಭಾಗವಹಿಸಿದವರಿಗೆ ತಿಳಿಸಿಕೊಟ್ಟರು.
ಅಣುಕು ಪರೀಕ್ಷೆ, ಇವಿಎಂಗೆ ಸಂಬಂಧಿಸಿದ ಕೆಲ ಸಲಹೆ-ಸೂಚನೆಗಳು ಮತ್ತು ಇವಿಎಂ ಸಮಸ್ಯೆ ಇದ್ದರೇ ತಕ್ಷಣ ಯಾರನ್ನು ಸಂಪರ್ಕಿಸಬೇಕು ಎಂಬುದರ ಕುರಿತು ವಿವರಿಸುವುದರ ಜತೆಗೆ ಕೆಲ ಪ್ರಶ್ನೆಗಳನ್ನು ತರಬೇತಿಯಲ್ಲಿ ಭಾಗವಹಿಸಿದವರಿಗೆ ಕೇಳಿದರು.
ಇದೇ ಮೊದಲ ಬಾರಿಗೆ ಚುನಾವಣಾ ಕರ್ತವ್ಯ ಮಾಡುತ್ತಿರುವವರು ಮತ್ತು ಈ ಮುಂಚೆ ಮಾಡಿದವರ ವಿವರ ಪಡೆದ ಜಿಲ್ಲಾ ಚುನಾವಣಾಧಿಕಾರಿಗಳು, ಚುನಾವಣಾ ಕಾರ್ಯ ಎಂಬುದು ಒಂದು ತಂಡವಾಗಿ ಮಾಡುವ ಕೆಲಸ. ಎಲ್ಲರು ತಮಗೆ ವಹಿಸಿದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸುವ ಮೂಲಕ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂದರು.
ನಂತರ ತರಬೇತಿ ನಡೆಯುತ್ತಿರುವ ಸ್ಥಳದಲ್ಲಿರುವ ಸ್ಟ್ರಾಂಗ್ ರೂಂಗೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ,ಬಳ್ಳಾರಿ ಗ್ರಾಮೀಣ ಮತ್ತು ಕಂಪ್ಲಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಾದ ತುಷಾರಮಣಿ, ರಮೇಶ ಕೋನರೆಡ್ಡಿ ಮತ್ತು ಶ್ರೀಧರ್, ತಹಸೀಲ್ದಾರರು ಹಾಗೂ ಸೆಕ್ಟರ್ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
