ಚಿತ್ರದುರ್ಗ :
ಮಿತವಾದ ಆಹಾರ, ವ್ಯಾಯಾಮ ಮಾಡುವುದರ ಮುಖಾಂತರ ಮೊದಲು ನಮಗೆ ನಾವೇ ವೈದ್ಯರಾಗಬೇಕು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಚಿತ್ರದುರ್ಗ ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನೂತನವಾಗಿ ಅತ್ಯಂತ ಆಧುನಿಕ ಉಪಕರಣಗಳಿಂದ ನಿರ್ಮಾಣವಾಗಿರುವ ವಿವಿಧ ಪ್ರಯೋಗ ಶಾಲೆಗಳ ಉದ್ಘಾಟಿಸಿ ಶ್ರೀಗಳು ಮಾತನಾಡುತ್ತಿದ್ದರು.
ಜಗದ್ಗುರು ಶ್ರೀ ಮುರುಘರಾಜೇಂದ್ರ ವಿದ್ಯಾಪೀಠ ಹೆಸರಿನ ಮುಖಾಂತರವಾಗಿ ನಡೆಯುತ್ತಿರುವ ಸಂಸ್ಥೆಗಳಲ್ಲಿ ಜನಪರವಾದ ಹಲವಾರು ಕಾರ್ಯಗಳನ್ನು ನಡೆಸಲಾಗುತ್ತಿದೆ. ಅಂತೆಯೇ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ವಿವಿಧ ರೀತಿಯ ಅಮೂಲ್ಯವಾದ ಆರೋಗ್ಯ ಸೇವೆಗಳನ್ನು ನೀಡುವುದರ ಮುಖಾಂತರವಾಗಿ ಸಾರ್ವಜನಿಕರ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಇದು ಸಾರ್ವಜನಿಕರಿಗೆ ಅತ್ಯಂತ ಅವಶ್ಯವೂ ಆಗಿದೆ ಎಂದರು
ಇಂದು ಮಾನವನಿಗೆ ಆತನ ಆರೋಗ್ಯವೇ ನಿಜವಾದ ಭಾಗ್ಯವಾಗಿದೆ. ಹಣ, ಅಧಿಕಾರಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ಮಾನವನ ಆರೋಗ್ಯ. ಆರೋಗ್ಯ ಸುಸ್ಥಿತಿಯಲ್ಲಿದ್ದರೆ ಏನನ್ನಾದರೂ ಸಾಧಿಸಬಹುದು. ಪ್ರತಿಯೊಬ್ಬರು ವರ್ಷದಲ್ಲಿ ಒಂದೆರಡು ಬಾರಿ ಸಾಮಾನ್ಯ ಆರೋಗ್ಯ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರ ಮುಖಾಂತರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ಕಾರಣ ಇತ್ತೀಚೆಗೆ ಅಕಾಲಿಕ ಮರಣಗಳು ಹೆಚ್ಚಾಗಿದ್ದು, ಅವರನ್ನೇ ಅವಲಂಬಿಸಿರುವ ಕುಟುಂಬಗಳು ಅಭದ್ರತೆಗೆ ಒಳಗಾಗುತ್ತಿವೆ. ಈ ಹಿನ್ನೆಲೆಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಈ ನಾನಾ ವ್ಯವಸ್ಥೆಗಳು ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಮತ್ತು ಕಾಲೇಜಿನ ವಿದ್ಯಾರ್ಥಿಗಳ ಕಲಿಕೆಯಲ್ಲಿ ಮಹತ್ವದ ಮೈಲಿಗಲ್ಲುಗಳಾಗಿವೆ ಎಂದು ಶರಣರು ಹೇಳಿದರು.
ಇದೇ ಸಂದರ್ಭದಲ್ಲಿ ಡಾ|| ರಾಕೇಶ್ ಅವರು ಪ್ರಾತ್ಯಕ್ಷಿಕೆ ಮೂಲಕ ಮೂರ್ಛೆ ಹೋದ ವ್ಯಕ್ತಿ ಮೊದಲು ಯಾವ ಚಿಕಿತ್ಸೆ, ಯಾವ ರೀತಿ ಮಾಡಬೇಕೆಂಬುದನ್ನು ತೋರಿಸಿದರು. ಪ್ರಾಚಾರ್ಯರಾದ ಡಾ|| ಪ್ರಶಾಂತ್ ನೂತನ ವ್ಯವಸ್ಥೆ ಕುರಿತು ವೀಡಿಯೋ ಮುಖಾಂತರ ವಿವರಿಸಿದರು.
ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ. ಈ. ಚಿತ್ರಶೇಖರ್, ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಸದಸ್ಯರಾದ ಪಟೇಲ್ ಶಿವಕುಮಾರ್, ಶಂಕರಮೂರ್ತಿ, ಕಾಲೇಜಿನ ಸಿಬ್ಬಂದಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
