ಬಾಕಿ ವೇತನಕ್ಕಾಗಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ದಾವಣಗೆರೆ:

             ಬಾಕಿ ವೇತನ ಬಿಡುಗಡೆ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ, ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

               ನಗರದ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಆಶಾ ಕಾರ್ಯಕರ್ತೆರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

               ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಕುಕ್ಕವಾಡ, ಆರೋಗ್ಯ ಇಲಾಖೆಯ ಅಡಿಯಲ್ಲಿ ಗ್ರಾಮೀಣ, ನಗರ ಕೊಳಚೆ ಪ್ರದೇಶಗಳಲ್ಲಿ ಸುಮಾರು 40 ಸಾವಿರ ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದು, ಗರ್ಭಿಣಿಯರ ಸುರಕ್ಷಿತ ಹೆರಿಗೆ, ಸ್ವಸ್ಥ ಶಿಶುವಿನ ಜನನ, ಆರೈಕೆ, ಆರೋಗ್ಯ ಮತ್ತು ಪೌಷ್ಟಿಕತೆ ಬಗ್ಗೆ ಅರಿವು, ಕ್ಷಯ, ಕುಷ್ಟರೋಗ, ಮಲೇರಿಯಾ, ಡೆಂಗೆ, ಚಿಕುನ್ ಗುನ್ಯಾ ಇತ್ಯಾದಿ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಅಲ್ಲದೆ, ಕುಟುಂಬ ಕಲ್ಯಾಣ ಯೋಜನೆ, ಶೌಚಾಲಯ ಬಳಕೆಯ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಇವರಿಗೆ ಕಳೆದ ಸುಮಾರು ಏಳೆಂಟು ತಿಂಗಳುಗಳಿಂದ ವೇತನ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆಂದು ಆರೋಪಿಸಿದರು.

                ಆರೋಗ್ಯ ಇಲಾಖೆಯ ಆಯುರಾರೋಗ್ಯವಾಗಿರುವ, ಪ್ರತಿಯೊಂದು ಚಟುವಟಿಕೆಗೂ ತಮ್ಮ ಸೇವೆ ಸಲ್ಲಿಸುವ ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ಸರ್ಕಾರ ತಕ್ಕ ಪ್ರತಿಫಲ ನೀಡುತ್ತಿಲ್ಲ. ಅತ್ಯಲ್ಪ ಪ್ರೊತ್ಸಾಹ ಧನ ನೀಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ತಮ್ಮ ಜವಾಬ್ದಾರಿಗಳಿಂದ ನುಣಿಚಿಕೊಳ್ಳುತ್ತಿವೆ. ಆಶಾ ಕಾರ್ಯಕರ್ತೆಯರ ಬಹುತೇಕ ಎಲ್ಲಾ ಕುಟುಂಬಗಳು ಇದೇ ಪ್ರೊತ್ಸಾಹಧನ ನಂಬಿ ಜೀವನ ನಡೆಸುತ್ತಿವೆ. ತಿಂಗಳಿಗೆ ಇವರಿಗೆ 3500 ರು. ಪ್ರೋತ್ಸಾಹ ಧನ ನಿಗದಿಯಾಗಿದೆ. ಆದರೆ, ಕಳೆದ ಸುಮಾರು 5ರಿಂದ 8 ತಿಂಗಳ ವೇತನವನ್ನೇ ಅನೇಕ ಜಿಲ್ಲೆಗಳಲ್ಲಿ ನೀಡಿಲ್ಲ. ಆದ್ದರಿಂದ ಇವರು ಜೀವನ ನಡೆಸುವುದು ಅತ್ಯಂತ ದುಸ್ತರವಾಗಿದೆ ಎಂದು ದೂರಿದರು.

                ಈಗ ಸರ್ಕಾರದ ನೂತನ ವೇತನ ಪಾವತಿ ವಿಧಾನ ಖಜಾನೆ-2ರಿಂದ ವೇತನ ನೀಡಬೇಕಾಗಿದೆ. ಆದ್ದರಿಂದ ಇದಕ್ಕೆ ಮತ್ತಷ್ಟು ವಿಳಂಬವಾಗಲಿದೆ. ಸರ್ಕಾರದ ಈ ದುಡುಕಿನ ನಿರ್ಧಾರದಿಂದ ಆಶಾ ಕಾರ್ಯಕರ್ತರು ತಿಂಗಳ ವೇತನವಿಲ್ಲದೇ ಪರದಾಡುವಂತಾಗಿದೆ. ಅಲ್ಲದೆ, ಕೇಂದ್ರ ಸರ್ಕಾರದ ಪ್ರೋತ್ಸಾಹ ಧನದ ಆಶಾ ಸಾಫ್ಟ್ ವೇತನ ಮಾದರಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಕಳೆದ ಎರಡೂವರೆ ವರ್ಷದಿಂದಲೂ ಸಹಸ್ರಾರು ರೂ.ಗಳ ಆರ್ಥಿಕ ನಷ್ಟವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

                ಬಾಕಿ ಇರುವ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ನಿಗದಿತ ದಿನದಂದು ವೇತನ ನೀಡಬೇಕು. ಲಾರ್ವಾ ಸಮೀಕ್ಷೆ, ಕುಷ್ಟ ರೋಗ ಸಮೀಕ್ಷೆ ಸೇರಿದಂತೆ ಯಾವುದೇ ಸರ್ವೇ ಮಾಡಿಸಿದರೆ, ದಿನಕ್ಕೆ 200 ರು. ಭತ್ಯೆ ನೀಡಬೇಕು. ಆಶಾ ಕಾರ್ಯಕರ್ತೆಯರನ್ನು ದುಡ್ಡಿಗಾಗಿ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ, ದಾವಣಗೆರೆ ತಾಲೂಕಿನ ಮೆಂಟರ್ ರೂಪಾ ವೈಯಕ್ತಿಕ ಕಾರಣಕ್ಕೆ ಆಶಾ ಕಾರ್ಯಕರ್ತೆಯರಿಗೆ ತೊಂದರೆ ಕೊಟ್ಟಿದ್ದಾರೆ. ಹರಿಹರದ ಮೆಂಟರ್ ಮಂಜುಳಾ ಎಂಬುವರು ಆಶಾ ಮತ್ತು ಆಶಾ ಸುಗಮಗಾರರಿಂದ ಸಾವಿರಾರು ರು. ತಿಂಗಳಿಗೆ ವಸೂಲಿ ಮಾಡುತ್ತಿದ್ದು, ಈ ಎರಡೂ ಪ್ರಕರಣಗಳ ತನಿಖೆ ನಡೆಸಿ, ಸೇವೆಯಿಂದ ವಜಾಗೊಳಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಳಿಗಾಗಿ ಆಗ್ರಹಿಸಿದರು.

               ಪ್ರತಿಭಟನೆಯಲ್ಲಿ ಸಂಘದ ಡಿ.ನಾಗಲಕ್ಷ್ಮಿ, ಗೀತಾ, ತಿಪ್ಪೇಸ್ವಾಮಿ, ಭಾರತಿ, ಮಂಜುನಾಥ ರೆಡ್ಡಿ, ಶಿವಾಜಿರಾವ್, ಶಾರದಾ, ಅಂಜಿನಮ್ಮ, ರೇಖಾ ನೀಲಗುಂದ, ಪದ್ಮಾ ಸೊಕ್ಕೆ, ಮಮತಾ, ಮಂಜುಳಾ ಕೊಂಡಜ್ಜಿ, ಭಾಗ್ಯ ಬೆಳ್ಳೂಡಿ, ರೇಖಾ ಹೆಮ್ಮನಬೇತೂರು, ಮಧು ಬಾಯಿ, ನಾಗವೇಣಿ, ಲೀಲಾ ಬಿದರಕೆರೆ, ವೀಣಾ, ರೂಪಾ ನಂದಿಗುಡಿ, ಲಕ್ಷ್ಮೀದೇವಿ, ಮಂಜುಳಾ ಚೀಲೂರು, ಮಂಜುಳಾ ಕಂದಗಲ್ಲು ಮತ್ತಿತರರು ಪಾಲ್ಗೊಂಡಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link