ಮಾಚಿದೇವರ ವಚನ ಆಧರಿಸಿ ಸಂಶೋಧನೆ ನಡೆಯಲಿ

ದಾವಣಗೆರೆ :

         ಶ್ರೀಮಡಿವಾಳ ಮಾಚಿದೇವರ ವಚನಗಳನ್ನು ಆಧರಿಸಿ ಯುವಜನತೆ ಸಂಶೋಧನೆ ನಡೆಸಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಡಾ.ಪ್ರಕಾಶ ಹಲಗೇರಿ ಕರೆ ನೀಡಿದರು.

       ಇಲ್ಲಿನ ವಿನೋಬನಗರದ ಶ್ರೀಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಶ್ರೀಮಡಿವಾಳ ಮಾಚಿದೇವ ಸಮಾಜ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶ್ರೀಮಡಿವಾಳ ಮಾಚಿದೇವ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಉಪನ್ಯಾಸ ನೀಡಿದರು.

        ಶರಣ ಸಂಸ್ಕತಿಯ ಹಾಗೂ ಶರಣರ ಪೀಳಿಗೆಯ ಸಂರಕ್ಷಣೆಯಲ್ಲಿ ಮಾಚಿದೇವರ ಕೊಡುಗೆ ಅಪಾರವಾಗಿದ್ದು, ಅವರ ಹುಟ್ಟೂರಾದ ಸಿಂಧಗಿಯ ಇಂದಿನ ಕಲಕೇರಿಗೆ ಮಡಿವಾಳ ಸಮಾಜ ಬಾಂಧವರು ಭೇಟಿ ನೀಡುವ ಮೂಲಕ ಅವರ ವಿಚಾರಧಾರೆಯ ಮಾರ್ಗದರ್ಶನದಲ್ಲಿ ಸಮಾಜವನ್ನು ಮುನ್ನಡೆಸಬೇಕು ಹಾಗೂ ಅವರ ವಚನಗಳನ್ನು ಆಧರಿಸಿ ಸಂಶೋಧನೆಗಳನ್ನು ಯುವಜನತೆ ಮಾಡಬೇಕೆಂದು ಕಿವಿಮಾತು ಹೇಳಿದರು.

          12ನೇ ಶತಮಾನದ ಆರಂಭದಲ್ಲಿ ಸಮಾಜದಲ್ಲಿ ತಾರಕಕ್ಕೇರಿದ ವರ್ಗ ವ್ಯವಸ್ಥೆ, ಸ್ತ್ರೀಶೋಷಣೆ ಮತ್ತು ಅಸಮಾನತೆಯೆಂಬ ಮೈಲಿಗೆಯನ್ನು ಮಡಿ ಮಾಡುವ ಕಾಯಕದಲ್ಲಿ ಮಡಿವಾಳ ಮಾಚಿದೇವರು ಸೇರಿದಂತೆ ಬಸವಾದಿ ಶರಣರು ತೊಡಗಿದ್ದರು. ಅಂದಿನ ಭಾಷಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಅಸಮಾನತೆ, ಸ್ತ್ರೀಶೋಷಣೆ, ವರ್ಣ ವ್ಯವಸ್ಥೆ ತಾರಕಕ್ಕೇರಿದ ಕಾಲಘಟ್ಟದ ಕಗ್ಗತ್ತಲಲ್ಲಿ ಬೆಳಕಾಗಿ ಬಸವಾದಿ ಶರಣರು ಹೊರಹೊಮ್ಮಿದ್ದರು ಎಂದು ಸ್ಮರಿಸಿದರು.

           ಮಾಚಿದೇವರು ರಚಿಸಿರುವ 354 ವಚನಗಳು ದೊರೆತಿದ್ದು, ಇವರು ಬಸವಣ್ಣನವರಿಗಿಂತ ಭಿನ್ನವಾಗಿದ್ದರೆಂಬುದನ್ನು ಅವರ ವಚನಗಳ ಮೂಲಕ ಕಾಣಬಹುದಾಗಿದೆ. ಯಾರನ್ನಾದರೂ ಓಲೈಸಲಿಕ್ಕಾಗಿ ಅವರು ಬರೆಯಲಿಲ್ಲ ಹಾಗೂ ಬದುಕಲಿಲ್ಲ. ಬದಲಾಗಿ ಕರ್ಮಕ್ಕೆ ಘನತೆ ತಂದವರಲ್ಲಿ ಅಗ್ರಮಾನ್ಯರಾಗಿದ್ದಾರೆಂದು ಹೇಳಿದರು.

           ಕೀಳರಿಮೆಯನ್ನು ತೊರೆದು ಬಟ್ಟೆ ತೊಳೆಯುವ ಕಾಯಕಕ್ಕೆ ಗೌರವ ತಂದುಕೊಟ್ಟವರು ಇವರು. ಇವರೊಬ್ಬ ಕ್ರಾಂತಿಕಾರಿ-ಅವತಾರ ಪುರುಷ. ಈ ಹಿಂದೆ ಜಡಗಟ್ಟಿದ ಅಪಮೌಲ್ಯಗಳನ್ನು ಶುದ್ಧೀಕರಿಸಿದ ಮಹಾನ್ ಪುರುಷ. ಬಸವಣ್ಣನವರು ದೇಹವೇ ದೇಗುಲವೆಂದರೆ, ಮಾಚಿದೇವರು ನೀನಿರುವ ನೆಲಯೇ ನಿಜದ ದೇಗುಲ ಎಂದಿದ್ದರು. ಎಲ್ಲ ತಳ ಸಮುದಾಯಗಳೂ 12 ನೇ ಶತಮಾನದ ಲಿಂಗಾಯತ ಸಮುದಾಯಕ್ಕೆ ಸೇರಿದ್ದವು. ಕಾಲಾನುಕ್ರಮದಲ್ಲಿ ವೃತ್ತಿ ಆಧಾರದಲ್ಲಿ ವಿಘಟನೆಗೊಳ್ಳುತ್ತಾ ಬಂದಿವೆ ಎಂದರು.

          ನಿಷ್ಟೆ, ಬದ್ಧತೆಗೆ ಹೆಸರಾದ, ಮಡಿವಾಳ ಕಾಯಕಕ್ಕೆ ಘನತೆ ತಂದ ಮಾಚಿದೇವರು ವ್ಯವಸ್ಥೆಯ ಹುಳುಕನ್ನು ಪ್ರಶ್ನಿಸುತ್ತಾ ಹೋಗುತ್ತಾರೆ. ಮೈಲಿಗೆ ಬಟ್ಟೆಗಳನ್ನು ಮಡಿ ಮಾಡುವುದರೊಂದಿಗೆ ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ ಮೈಲಿಗೆಯನ್ನು ಮಡಿ ಮಾಡುವ ಕಾಯಕದಲ್ಲಿ ತೊಡಗಿದ್ದವರಾಗಿದ್ದರು. ಮಾಚಿದೇವರ ವೈಶಿಷ್ಟ್ಯವೆಂದರೆ ಅವರು ವೀರಗಂಟೆ ಬಾರಿಸುತ್ತಿದ್ದರು. ಇದರ ಸಾಂಕೇತಿಕ ಅರ್ಥ ಯಾರೂ ಕಾಯಕದ ತಂಟೆಗೆ ಬರಬಾರದು ಎಂಬುದು ಅದರ ಪರಿಕಲ್ಪನೆಯಾಗಿತ್ತು ಎಂದು ಹೇಳಿದರು.

         ಮಹಾನಗರ ಪಾಲಿಕೆ ಸದಸ್ಯ ಹೆಚ್.ಜಿ. ಉಮೇಶ್ ಮಾತನಾಡಿ, ಶಿಕ್ಷಣ ಕೊರತೆಯಿಂದಾಗಿ ಮಡಿವಾಳ ಸಮಾಜ ಇನ್ನೂ ಹಿಂದುಳಿದಿದೆ. ಹೀಗಾಗಿ ಸಮಾಜ ಬಾಂಧವರು ಶಿಕ್ಷಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಸಮಾಜ ಬಾಂಧವರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕೆಂದು ಕರೆ ನೀಡಿದರು.

          ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ ಮಾತನಾಡಿ, ನಾವು ಯಾವುದೇ ಕೆಲಸ ಮಾಡಿದರು ಅದರಲ್ಲಿ ಶ್ರಮವಿರಬೇಕು ಆಗ ಮಾತ್ರ ಮಾಡಿದ ಕಾಯಕದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ. 12ನೇ ಶತಮಾನದ ಬಸವಣ್ಣನ ಅನುಯಾಯಿಗಳಲ್ಲಿ ಮಾಡಿವಾಳ ಮಾಚಿದೇವ ಅಗ್ರಗಣ್ಯರು. ಅವರ ಆದರ್ಶಗಳೆಲ್ಲವು ನಮಗೆ ಮಾರ್ಗದಶನವಿದ್ದಂತೆ. ಆದ್ದರಿಂದ ಅವರು ಹಾಕಿಕೊಟ್ಟಿರುವ ಸನ್ಮಾರ್ಗದಲ್ಲಿ ಮುಂದೆ ಸಾಗಬೇಕೆಂದು ಸಲಹೆ ನೀಡಿದರು.

           ಅಧ್ಯಕ್ಷತೆ ಶಾಸಕ ಎಸ್.ಎ.ರವೀಂದ್ರನಾಥ್, 12 ನೇ ಶತಮಾನದ ಬಸವಣ್ಣನವರಿಗೆ ಸರಿಸಮನಾಗಿ ಅವರೆತ್ತರಕ್ಕೆ ಬೆಳೆದವರು ಮಾಚಿದೇವರು. ಇದು ಗಟ್ಟಿವಂತ ಸಮಾಜ. ಮಡಿವಾಳ ಸಮಾಜದ ಶ್ರೇಯೋಭಿವೃದ್ಧಿ ಸದಾ ನನ್ನ ಸಹಕಾರ ಮತ್ತು ಬೆಂಬಲವಿದೆ. ಮಡಿವಾಳ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಕೈಲಾದಷ್ಟು ಸಹಕಾರ ಮಾಡುತ್ತೇನೆ ಸರ್ಕಾರದಿಂದಲೂ ಸಹ ಅನುದಾನ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ವಾಗ್ದಾನ ಮಾಡಿದರು.

          ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಡಿವಾಳ ಸಮಾಜದ ಜಿಲ್ಲಾ ಅಧ್ಯಕ್ಷ ಎಂ.ಎನ್ ಸತೀಶ್, ಮುಖಂಡರಾದ ಬಸವರಾಜ್, ಮಡಿವಾಳ ಸಮಾಜದ ಪ್ರಧಾನ ಕಾರ್ಯದರ್ಶಿ ಎಂ.ನಾಗೇಂದ್ರಪ್ಪ, ತಹಶೀಲ್ದಾರ್ ಸಂತೋಷ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.ದಾವಣಗೆರೆಯ ಮಾರುತಿ ಚಿತ್ರಗಾರ ಮತ್ತು ವೃಂದದವರು ಹಾಗೂ ಇಪ್ಟಾ ಕಲಾವಿದರಾ ಲೋಕಿಕೆರೆ ಆಂಜಿನಪ್ಪ, ಐರಣಿ ಚಂದ್ರು, ಭಾನಪ್ಪ ಮತ್ತಿತರರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link