ಹುಳಿಯಾರು
ಬಾಟಲ್ ನೀರಾವರಿ ವಿಧಾನದಿಂದ ಬಿರು ಬೇಸಿಗೆಯಲ್ಲೂ ಕೃಷಿಕರು ತಮ್ಮ ಜಮೀನಿನಲ್ಲಿ ಮರಗಳು ಒಣಗದಂತೆ ರಕ್ಷಿಸಿಕೊಳ್ಳಬಹುದಾಗಿದೆ ಎಂದು ಮಿಶ್ರ ಬೇಸಾಯ ತಜ್ಞ ಶೆಟ್ಟಿಕೆರೆ ಅರುಣ್ ಕುಮಾರ್ ತಿಳಿಸಿದರು.ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಹೋಬಳಿಯ ಬರಕನಹಾಲ್ ಗ್ರಾಮದಲ್ಲಿ ಏರ್ಪಡಿಸಿರುವ ಎನ್‍ಎಸ್‍ಎಸ್ ಶಿಬಿರದ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೀರಿನ ಸರಿಯಾದ ನಿರ್ವಹಣೆ ಕೃಷಿಯಲ್ಲಿ ಅತ್ಯಂತ ವೈಜ್ಞಾನಿಕ ವಿಚಾರವಾಗಿದ್ದು ನೀರು ಹೆಚ್ಚೂ ಆಗಬಾರದು, ಕಡಿಮೆಯೂ ಆಗಬಾರದಂತೆ ಎಚ್ಚರಿಕೆ ವಹಿಸಬೇಕು ಎಂದ ಅವರು ಗುಜರಿ ಅಂಗಡಿಯಲ್ಲಿ ಕೇವಲ ಒಂದೆರಡು ರೂಗಳಿಗೆ ಸಿಗುವ ಪ್ಲಾಸ್ಟಿಕ್ ಬಾಟಲ್ ತಂದು ತಳದಲ್ಲಿ ರಂದ್ರ ಮಾಡಿ ಗಿಡದ ಬುಡದ ಒಂದೆರಡು ಅಡಿಯಲ್ಲಿ ಹೂತು ನೀರು ಕೊಡುವುದರಿಂದ ಹನಿಹನಿಯಾಗಿ ಭೂಮಿ ತನಗೆಷ್ಟು ಅಗತ್ಯವೋ ಅಷ್ಟು ನೀರು ಹೀರಿಕೊಂಡು ಬೇಸಿಗೆಯಲ್ಲೂ ತೇವಾಂಶ ಕಾಪಾಡಿಕೊಳ್ಳುತ್ತದೆ. ಅಲ್ಲದೆ ಕಡಿಮೆ ನೀರಿನಲ್ಲಿ ಕೃಷಿ ಸಹ ಮಾಡಬಹುದಾಗಿದೆ ಎಂದು ವಿವರಿಸಿದರು.
ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಅವರು ಮಾತನಾಡಿ ಪ್ರಸ್ತುತ ಸ್ಥಿತಿಗತಿಗಳಿಗೆ ತಕ್ಕಂತೆ ಕೃಷಿ ಮಾಡುವ ಅಗತ್ಯವಿದೆ. ಹಳ್ಳಿ ಜನರ ಕೃಷಿ ಜ್ಞಾನ ದೊಡ್ಡದು ಆದರೆ ಅದನ್ನು ಬಳಕೆ ಮಾಡಿಕೊಳ್ಳದೆ ನಿರ್ಲಕ್ಷ್ಯಿಸುತ್ತಿದ್ದಾರೆ. ಕೃಷಿಯ ಹಳೆಯ ವಿಧಾನಗಳೇ ಉತ್ತಮವಾಗಿದ್ದು ಮಳೆ ಆಧಾರಿತ ಜಮಿನಿಗೆ ಮರಾಧಾರಿತ ಕೃಷಿ ಮಾಡುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.
ಪ್ರೊ.ವಲಿ, ಶ್ರೀಧರ್, ಮುಖ್ಯಶಿಕ್ಷಕಿ ಪ್ರೇಮಲೀಲಾ, ಎನ್‍ಎಸ್‍ಎಸ್ ಶಿಬಿರಾಧಿಕಾರಿ ಎಂ.ಜೆ.ಮೋಹನ್ ಕುಮಾರ್, ಫರ್ನಾಜ್, ಸಹ ಶಿಬಿರಾಧಿಕಾರಿಗಳಾದ ಕೆ.ಸಿ.ಕುಮಾರಸ್ವಾಮಿ, ಎನ್.ಎ.ಮಂಜುನಾಥ್ ಮತ್ತಿತರರು ಇದ್ದರು.