ತುಮಕೂರು

ನಗರದಲ್ಲಿ ಪುಟ್ಟ ಬಾಲಕಿಯನ್ನು ಅತ್ಯಾಚಾರಗೈದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಸುಮಾರು 10 ಸಾವಿರಕ್ಕೂ ಹೆಚ್ಚು ಸಹಿ ಸಂಗ್ರಹ ಮಾಡಿದ್ದು, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಅತೀಕ್ ಅಹಮ್ಮದ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.5ರಂದು ನಗರದ ಈದ್ಗಾಮೊಹಲ್ಲಾದ ನಸ್ರುಲ್ಲಾಖನ್ ಎಂಬ ವ್ಯಕ್ತಿ 7 ವರ್ಷದ ಪುಟ್ಟ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದು, ಈ ಅತ್ಯಾಚಾರವನ್ನು ಖಂಡಿಸಿ ಆರೋಪಿಗೆ ಗಲ್ಲುಶಿಕ್ಷೆ ನೀಡುವಂತೆ ಒತ್ತಾಯಿಸಿ ಸಾರ್ವಜನಿಕರಿಂದ ಸಹಿ ಸಂಗ್ರಹ ಮಾಡಿದ್ದು, ಈ ಪತ್ರಗಳನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಯವರಿಗೆ ತಲುಪಿಸಲಾಗುವುದು. ಅಲ್ಲದೆ ನಾವೇ ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರಿಂದ ಇಡೀ ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಅವುಗಳನ್ನು ತಡೆಗಟ್ಟಲು ಜಿಲ್ಲಾಡಳಿತ ಮುಂದಾಗಬೇಕು. ಅತ್ಯಾಚಾರ ಮಾಡುವವರಿಗೆ ಕಠಿಣ ಶಿಕ್ಷೆ ನೀಡಬೇಕು. ಅಲ್ಲದೆ ಪೋಷಕರಿಗೆ ಮಕ್ಕಳ ರಕ್ಷಣೆ ಬಗ್ಗೆ ಅರಿವು ಮೂಡಿಸಿ, ಧೈರ್ಯ ತುಂಬುವ ಕಾರ್ಯ ಪೋಲೀಸ್ ಇಲಾಖೆ ಮಾಡಬೇಕು ಎಂದು ಒತ್ತಾಯಿಸಿದರು.
ಅತ್ಯಾಚಾರಕ್ಕೊಳಗಾದ ಬಾಲಕಿಯ ಪೋಷಕರು ಮಾತನಾಡಿ, ಇಂದು ನಮ್ಮ ಮನೆಯಲ್ಲಿ ಅತ್ಯಾಚಾರ ನಡೆದಿದೆ. ಮುಂದೆ ಇನ್ನೊಬ್ಬರ ಮನೆಯಲ್ಲಿ ಈ ಘಟನೆ ನಡೆಯಬಹುದು. ಅದಕ್ಕಾಗಿ ಪೋಲೀಸ್ ಇಲಾಖೆಗೆ ದೂರು ನೀಡಿದ್ದೇವೆ. ಇಂತವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರಲ್ಲದೆ, ನಸ್ರುಲ್ಲಾಖಾನ್ ಎಂಬ ವ್ಯಕ್ತಿಯ ಸಹೋದರ ನಮಗೆ ಹಣ ಹಾಗೂ ಸೈಟು ನೀಡಿ ರಾಜಿ ಮಾಡಿಕೊಂಡಿದ್ದೇವೆ ಎಂಬುದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತುಮಕೂರು ನಗರ ಜನಸೇವಾ ಸಮಿತಿ ಸಂಘದ ಅಧ್ಯಕ್ಷ ಸುಮೈಲ್ ಅಹಮ್ಮದ್, ಷಫೀ, ಕರೀಂ, ವಾಸಿಂ, ಅಮೀರ್, ನಾಗೇಶ್, ರವಿ,ಅಮೀರ್ ಅಹಮ್ಮದ್ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
