ಬಾಲಗ್ರಹ ಸಮಸ್ಯೆಯಿಂದ ನರಳುತ್ತಿರುವ ಕಾಂಗ್ರೆಸ್-ಜೆಡಿಎಸ್ ಸರ್ಕಾರ

ಬೆಂಗಳೂರು:

                        ಬಾಲಗ್ರಹ ಸಮಸ್ಯೆಯಿಂದ ನರಳುತ್ತಿರುವ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಹಲವು ಆತಂಕಗಳ ನಡುವೆಯೇ ಆಗಸ್ಟ್ 30 ರಂದು ಶತದಿನ ಪೂರೈಸಲಿದೆ.

                         ಏನಾದರೂ ಸಾಧಿಸಲೇಬೇಕೆಂಬ ಹಂಬಲದಲ್ಲಿ ಮೈತ್ರಿ ಸರ್ಕಾರದ ಚುಕ್ಕಾಣೆ ಹಿಡಿದಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಹಲವಾರು ಸವಾಲುಗಳು ಎದುರಾಗಿದ್ದು, ಮೈತ್ರಿ ಸರ್ಕಾರದಲ್ಲಿ ಎಲ್ಲವೂ ನೆಟ್ಟಗಿಲ್ಲ ಎಂಬುದು ಕಾಂಗ್ರೆಸ್ ನಾಯಕರ ಹೇಳಿಕೆಗಳಿಂದ ವ್ಯಕ್ತವಾಗುತ್ತಿದೆ.

                          ಕೇವಲ 37 ಸ್ಥಾನವನ್ನು ಹೊಂದಿರುವ ಜೆಡಿಎಸ್, ಯಾರೂ ನಿರೀಕ್ಷಿಸಲಾರದ ರೀತಿಯಲ್ಲಿ ಕಾಂಗ್ರೆಸ್ ಜೊತೆ ಸೇರಿ ಮೇ 23 ರಂದು ರಚನೆಯಾದ ಮೈತ್ರಿ ಸರ್ಕಾರ ರಾಜಕೀಯ ಏಳು-ಬೀಳುಗಳ ನಡುವೆ ಮುನ್ನಡೆಯುತ್ತಿದೆ.ಮುಖ್ಯಮಂತ್ರಿಯಾಗಿ ಹೆಚ್.ಡಿ.ಕುಮಾರಸ್ವಾಮಿಯವರು ಪ್ರಮಾಣವಚನ ಸ್ವೀಕರಿಸಿದ ನಂತರ ಹಲವು ಗೊಂದಲ, ಸಮಸ್ಯೆಗಳು ಎದುರಾದರೂ ನೂರು ದಿನಗಳಲ್ಲಿ ರೈತರ ಸಾಲ ಮನ್ನಾ ಸೇರಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡರು.

                         ಹಸಿರು ಕರ್ನಾಟಕ ಯೋಜನೆ, ವಿದ್ಯಾರ್ಥಿಗಳಿಗೆ ಉಚಿತ ಪ್ರವಾಸ ಭಾಗ್ಯ, ಲೇವಾದೇವಿದಾರರ ಕಿರುಕುಳದಿಂದ ಬಡವರಿಗೆ ಮುಕ್ತಿ ನೀಡುವ ಸುಗ್ರೀವಾಜ್ಞೆ ಜಾರಿ ಕುರಿತ ನಿರ್ಧಾರ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಜಾರಿ ಮಾಡಿದೆ. ಪ್ರಬಲ ವಿರೋಧ ಪಕ್ಷವಾದ ಬಿಜೆಪಿಯವರ ಟೀಕಾಪ್ರಹಾರ, ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್ ಪಕ್ಷದ ಹಲವು ನಾಯಕರ ಅಸಮಾಧಾನದ ನಡುವೆಯೂ ಕುಮಾರಸ್ವಾಮಿ ಮೈತ್ರಿ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಎರಡೂ ಪಕ್ಷಗಳ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿಪಕ್ಷದವರನ್ನು ಸಮರ್ಥವಾಗಿ ಎದುರಿಸಿ ಆಡಳಿತ ನಡೆಸುವುದು ಅಷ್ಟೇನು ಸುಲಭದ ಮಾತಲ್ಲ. ಮೈತ್ರಿ ಸರ್ಕಾರ ನಡೆಸುವುದೇ ಒಂದು ದೊಡ್ಡ ಸವಾಲು. ತಂತಿಯ ಮೇಲಿನ ನಡಿಗೆಯಂತಾಗಿದೆ. ಇದರ ಅರಿವು ಕುಮಾರಸ್ವಾಮಿ ಅವರಿಗಿದ್ದು, ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ.

                 ಮೇ 23ರಂದು ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್ ಪ್ರಮಾಣವಚನ ಸ್ವೀಕರಿಸಿದ್ದರು. ರಾಷ್ಟ್ರೀಯ ನಾಯಕರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಶರದ್‍ಪವಾರ್, ಮಾಯಾವತಿ, ಮಮತಾ ಬ್ಯಾನರ್ಜಿ ಚಂದ್ರಬಾಬುನಾಯ್ಡು, ಎಚ್.ಡಿ.ದೇವೇಗೌಡರು ಸೇರಿದಂತೆ ಹಲವು ನಾಯಕರ ದಂಡೇ ಧಾವಿಸಿತ್ತು.
ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಲು ಮಂಡ್ಯ ಜಿಲ್ಲೆಯಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಗದ್ದೆಗಿಳಿದು ಭತ್ತದ ನಾಟಿ ಮಾಡುವ ಮೂಲಕ ಆತ್ಮಸ್ಥರ್ಯ ತುಂಬುವ ಕೆಲಸ ಮಾಡಿದ್ದರು.

                ರಾಜ್ಯ ಸರ್ಕಾರ ರೈತರ ಪರವಾಗಿದ್ದು, ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವ ಯೋಜನೆಗಳನ್ನು ಕಾರ್ಯಗತಗೊಳಿಸಲಿದೆ ಎಂಬ ಭರವಸೆಯನ್ನು ಮುಖ್ಯಮಂತ್ರಿ ಅವರು ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ನಿರಂತರವಾಗಿ ಸಾರ್ವಜನಿಕರನ್ನು ಭೇಟಿ ಮಾಡಿ ಅವರ ಕುಂದುಕೊರತೆಗಳಿಗೆ ಮುಖ್ಯಮಂತ್ರಿ ಸ್ಪಂದಿಸುತ್ತಾ ಬಂದಿದ್ದಾರೆ. ಈ ನಡುವೆ ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತಿವೃಷ್ಟಿ ಉಂಟಾಗಿ ಸಂಕಷ್ಟಕ್ಕೀಡಾದ ಜನರ ನೆರವಿಗೆ ಸರ್ಕಾರ ಸ್ಪಂದಿಸುವ ಕೆಲಸವನ್ನು ಮಾಡುತ್ತಿದೆ.

                ಕೊಡಗು ಸೇರಿದಂತೆ ಮಳೆ ಅನಾಹುತಕ್ಕೀಡಾದ ಪ್ರದೇಶಗಳಲ್ಲಿ ಪುನರ್ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸಂಪುಟ ವಿಸ್ತರಣೆ, ನಿಗಮ ಮಂಡಳಿಗೆ ನೇಮಕ ಮಾಡುವಂತೆ ಪದೇ ಪದೇ ಒತ್ತಡ ಕೇಳಿಬರುತ್ತಿದೆ. ಸರ್ಕಾರಿ ನೌಕರರ ಅಧಿಕಾರಿಗಳ ವರ್ಗಾವಣೆ, ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪ-ಪ್ರತ್ಯಾರೋಪಗಳ ನಡುವೆ ಸಮ್ಮಿಶ್ರ ಸರ್ಕಾರ ಶತದಿನದತ್ತ ಹೆಜ್ಜೆ ಹಾಕಿದೆ.

                      ಕಳೆದ ಎರಡು-ಮೂರು ವರ್ಷಗಳಿಂದ ಬರದ  ಸಿಲುಕಿದ್ದ ರಾಜ್ಯ ಈ ವರ್ಷವೂ ಭಾಗಶಃ ಬರ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಆದರೆ, ರಾಜ್ಯದ ಪ್ರಮುಖ ಜಲಾಶಯಗಳು ಭರ್ತಿಯಾಗಿ ನಿಟ್ಟುಸಿರು ಬಿಡುವಂತಾಗಿದೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಹಾಗೂ ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್ ಎರಡನ್ನೂ ಅನುಷ್ಠಾನಗೊಳಿಸುವ ಹೊಣೆಗಾರಿಕೆ ರಾಜ್ಯ ಸರ್ಕಾರದ ಮೇಲಿದೆ.

                    ಕಾಲೆಳೆಯುವ ಮಂದಿ? : ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಇದುವರೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಡಳಿತದ ಕುರಿತು ಕಾರ್ಯವೈಖರಿಯ ಬಗ್ಗೆ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ಭಿನ್ನ ಸ್ವರದಲ್ಲಿ ಮಾತನಾಡುತ್ತಿದ್ದಾರೆ.

                  ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವುದು ಇಷ್ಟವಿರಲಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ನಡೆದುಕೊಳ್ಳುವುದೇ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಉಳಿದ ಮಾರ್ಗವಾಗಿತ್ತು. ಹಲವು ಸಂದರ್ಭಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ , ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಯಾವುದೇ ಕಾರಣಕ್ಕೂ ಅತಂತ್ರಗೊಳಿಸಬಾರದೆಂಬ ಫಾರ್ಮಾನನ್ನೂ ಸಹ ಹೊರಡಿಸಿದೆ ಎಂದರೆ ಇಲ್ಲಿನ ಕಾಂಗ್ರೆಸ್ ನಾಯಕರ ಉಪಟಳ ಯಾವ ಮಟ್ಟಕ್ಕೆ ಇತ್ತು ಎಂಬುದು ಊಹಿಸಬಹುದು. ಇದೇ ಕಾರಣಕ್ಕೆ ಹಲವಾರು ಬಾರಿ ಸ್ವತಃ ಕುಮಾರಸ್ವಾಮಿಯವರೇ ಕಣ್ಣೀರು ಹಾಕಿಕೊಂಡು ತಾನು ಅನುಭವಿಸುತ್ತಿರುವ ಅಸಹಕಾರದ ತೀವ್ರತೆಯ ಬಗ್ಗೆ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಹಂಚಿಕೊಂಡಿದ್ದಾರೆ.

                  ಒಟ್ಟಾರೆ, ಕುಮಾರಸ್ವಾಮಿ ನೇತೃತ್ವದಲ್ಲಿ ಮೈತ್ರಿ ಸರ್ಕಾರ ಮುನ್ನಡೆಯುತ್ತಿದೆ. ಆದರೆ, ಕುಮಾರಸ್ವಾಮಿ ಅವರಿಗೆ ಹತ್ತು ಹಲವು ಸವಾಲುಗಳು ಎದುರಾಗಿವೆ. ಎಲ್ಲವನ್ನೂ ಅವರು ಮುಂಬರುವ ದಿನಗಳಲ್ಲಿ ಹೇಗೆ ನಿಭಾಯಿಸಿ ಸರ್ಕಾರವನ್ನು ಮುನ್ನಡೆಸುತ್ತಾರೆ ಎಂಬುದು ಮಹತ್ವದ ವಿಷಯವಾಗಿದೆ

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link