ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಸಿಇಓ ಕರೆ

ತುಮಕೂರು:

              ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಸಮುದಾಯಗಳ ಮುಖಂಡರು, ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅನಿಸ್ ಕೆ.ಜಾಯ್ ಕರೆ ನೀಡಿದರು.

              ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಂಘ, ಬಾಲ ಭವನ ಸೊಸೈಟಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ಬಾಲ ಭವನ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಸಮುದಾಯಗಳ ಮುಖಂಡರು, ಕಲ್ಯಾಣ ಮಂಟಪ, ಮುದ್ರಣಾಲಯ ಮಾಲೀಕರು ಮತ್ತು ವ್ಯವಸ್ಥಾಪಕರುಗಳಿಗೆ ಆಯೋಜಿಸಿದ್ದ ಬಾಲ್ಯ ವಿವಾಹ ನಿಷೇಧ ಕುರಿತ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಸಮುದಾಯಗಳಲ್ಲಿ ಹಾಗೂ ಪ್ರದೇಶಗಳಲ್ಲಿ ಬಾಲ್ಯ ವಿವಾಹ ಪದ್ಧತಿ ಇನ್ನೂ ಜೀವಂತವಾಗಿದೆ. ಇದರ ನಿರ್ಮೂಲನೆಗೆ ಸಂಬಂಧಿಸಿದ ಎಲ್ಲರೂ ಗಮನ ಹರಿಸಬೇಕು. ಆಗ ಮಾತ್ರ ಇಂತಹ ಸಾಮಾಜಿಕ ಪದ್ಧತಿಗಳ ನಿಷೇಧ ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಲಿ ಎಂದರು.

               ತುಮಕೂರು ನಗರ ಡಿವೈಎಸ್ಪಿ ನಾಗರಾಜ್ ಮುಖ್ಯ ಅತಿಥಿಗಳಾಗಿ ಮಾತನಾಡಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ತುಂಬಾ ಪರಿಣಾಮಕಾರಿಯಾದ ಕಾಯ್ದೆಯಾಗಿರುವುದರಿಂದ ಇದನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನಿನ ಪ್ರಕಾರ ಪ್ರಕರಣ ದಾಖಲಿಸುವುದು ಅನಿವಾರ್ಯವಾಗಿದೆ. ದೆಹಲಿ ನಿರ್ಭಯ ಪ್ರಕರಣದ ನಂತರ ಕ್ರಿಮಿನಲ್ ಕಾನೂನಿನಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಅತ್ಯಾಚಾರ, ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯ ವಿವಾಹ ಇವೆಲ್ಲವೂ ತುಂಬಾ ಗುರುತರ ಅಪರಾಧಗಳಾಗಿದ್ದು, ಶಿಕ್ಷೆಯಲ್ಲಿಯೂ ಮಾರ್ಪಾಟುಗಳಾಗಿವೆ. ಆದಕಾರಣ ಎಚ್ಚರಿಕೆ ವಹಿಸುವುದು ಅನಿವಾರ್ಯ ಎಂದರು.

               ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರಾದ ಪ್ರೇಮ ಮಹಾಲಿಂಗಪ್ಪ ಮಾತನಾಡಿ ಬಾಲ್ಯ ವಿವಾಹಕ್ಕೆ ಕಾರಣಗಳು ಹಲವಾರು ಇವೆ. ಹಿಂದಿನ ದಿನಗಳಲ್ಲಿ ಈ ಕಾರಣಗಳನ್ನು ಒಪ್ಪಬಹುದಿತ್ತು. ಆದರೆ ಈಗ ಬದಲಾಗಿರುವ ಕಾಲಮಾನಕ್ಕೆ ಅನುಗುಣವಾಗಿ ಎಲ್ಲ ಸಮುದಾಯಗಳು ಕಾನೂನಿನಂತೆಯೇ ನಡೆದುಕೊಳ್ಳಬೇಕು. ಇಲ್ಲವಾದರೆ ಶಿಕ್ಷೆ ಎದುರಿಸಬೇಕಾಗುತ್ತದೆ. ಬಾಲ್ಯ ವಿವಾಹದ ಬಗ್ಗೆ ಮತ್ತಷ್ಟು ಅರಿವಿನ ಕಾರ್ಯಕ್ರಮಗಳ ಅಗತ್ಯವಿದೆ. ಯಾರೇ ಆಗಲಿ ವಿವಾಹಕ್ಕೆ ಹೋಗುವ ಮುನ್ನ ಆಹ್ವಾನ ಪತ್ರಿಕೆಗಳನ್ನು ಗಮನಿಸಿ ವಯಸ್ಸಿನ ಇತಿಮಿತಿ ತಿಳಿದುಕೊಂಡು ಹೋಗಬೇಕು ಎಂದ ಅವರು, ಹಿಂದುಳಿದ ಸಮುದಾಯ ಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಕೊರತೆ ಇದ್ದು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ಕರೆ ನೀಡಿದರು.

                ತಿಪಟೂರು ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ, ಅಲ್ಲಿನ ಗೊಲ್ಲ ಸಮುದಾಯದ ಮುಖಂಡ ಆಯರಹಳ್ಳಿ ಶಂಕರಪ್ಪ ಮಾತನಾಡಿ ಕಂದಾಚಾರ, ಮೂಡನಂಬಿಕೆಗಳು ಹೆಚ್ಚಾಗಿ ಬೇರೂರಿರುವುದೇ ಹಿಂದುಳಿದ ಸಮುದಾಯಗಲ್ಲಿ. ಈ ಸಮುದಾಯಗಳು ಸಮಾಜದ ಮುಖ್ಯ ವಾಹಿನಿಗೆ ಬರಲು ಇನ್ನೂ ಹಲವು ವರ್ಷಗಳು ಬೇಕಾಗಿವೆ.

              ಇವರಿಗೆ ಶಿಕ್ಷಣದ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು. ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಸರ್ಕಾರಗಳು ಗೊಲ್ಲ ಸಮುದಾಯ ಸೇರಿದಂತೆ ಹಿಂದುಳಿದದವರ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ವ್ಯವಸ್ಥೆ ಕಲ್ಪಿಸುವ ಮೂಲಕ ಅನುಕೂಲ ಕಲ್ಪಿಸಿಕೊಡಬೇಕು. ಈ ಸಮುದಾಯಗಳಲ್ಲಿ ಅರಿವು ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದರು.

               ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ವಿಶೇಷ ಉಪನ್ಯಾಸ ಮಂಡಿಸಿದ ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಬಾಲ್ಯ ವಿವಾಹ ಮಾಡುವ, ಸಹಕರಿಸುವ, ಅನುಮತಿಸುವ, ಭಾಗಿಯಾಗುವ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸುವ ಎಲ್ಲರ ಮೇಲೆಯೂ ಪ್ರಕರಣ ದಾಖಲಿಸಲು 2006 ರ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅವಕಾಶ ನೀಡಿದೆ. ಕಾನೂನು ಉಲ್ಲಂಘಿಸಿದರೆ ಒಂದು ವರ್ಷದಿಂದ 2 ವರ್ಷಗಳವರೆಗೆ ಶಿಕ್ಷೆ ಅಥವಾ ಒಂದು ಲಕ್ಷ ರೂ. ದಂಡ ವಿಧಿಸಲು ಅವಕಾಶವಿದೆ. ಈ ಬಗ್ಗೆ ಎಲ್ಲರೂ ಎಚ್ಚರ ವಹಿಸುವ ಅಗತ್ಯವಿದೆ ಎಂದರು.

               ಬೀದರ್‍ನ ಜ್ಞಾನ ಚೇತನ ಚಾರಿಟಬಲ್ ಟ್ರಸ್ಟ್‍ನ ಆಡಳಿತಾಧಿಕಾರಿ ಡಾ.ಪೃಥ್ವಿರಾಜ್ ಎಸ್.ಲಕ್ಕಿ ಅವರು ಬಾಲ್ಯ ವಿವಾಹದ ದುಷ್ಪರಿಣಾಮ ಕುರಿತು ಮಾತನಾಡಿದರು. ಅಲೆಮಾರಿ ಬುಡಕಟ್ಟು ಸಮುದಾಯದ ರಾಮಕ್ಕ, ಲಂಬಾಣಿ ಸಮುದಾಯದ ಶಿವನಾಯಕ್, ಪರಿಶಿಷ್ಟ ಸಮುದಾಯದ ನಟರಾಜ್, ಚಿಕ್ಕನಾಯಕನಹಳ್ಳಿಯ ಸುನಂದಮ್ಮ ಸೇರಿದಂತೆ ವಿವಿಧ ಜನಾಂಗಗಳು ಮತ್ತು ಸಮುದಾಯದ ಪ್ರತಿನಿಧಿಗಳು ಈ ಸಮಾರಂಭದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ಎಸ್.ನಂದಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ವಾಸಂತಿ ಉಪ್ಪಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೆಶಕ ದೇವರಾಜು, ಜಿಲ್ಲಾ ಪರಿಶಿಷ್ಟ ವರ್ಗಗಗಳ ಕಲ್ಯಾಣಾಧಿಕಾರಿ ರಾಜಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಮಂಜುನಾಥ್ , ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕಿ ನಾಗರತ್ನ ಎಸ್. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ.ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

               ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಾಲ ಭವನದ ಮಮತ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಕನ್ನಡ ಮತ್ತು ಸಂಸ್ಕತಿ ಇಲಾಖೆ ನೆರವಿನ ತಂಡದಿಂದ ಕಿರು ನಾಟಕ ಮತ್ತು ಜಾಗೃತಿ ಗೀತೆ, ತುಮಕೂರು ಸಾಂತ್ವನ ಕೇಂದ್ರದ ತಂಡದಿಂದ ಮಹಿಳಾ ಜಾಗೃತಿ ಗೀತೆಗಳು ಮೂಡಿಬಂದವು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap