ದಾವಣಗೆರೆ:
ಲೋಕಸಭಾ ಚುನಾವಣೆಗಾಗಿ ಬಿಜೆಪಿ ಅಭ್ಯರ್ಥಿ ಕೋಟ್ಯಂತರ ಹಣವನ್ನು ಡಂಪ್ ಮಾಡಿದ್ದಾರೆಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಬಿಜೆಪಿಯದ್ದು ಹಣ ಹಂಚಿ ಮತ ಖರೀದಿಸುವ ಸಂಸ್ಕೃತಿಯಲ್ಲ ಎಂದು ಜಿಲ್ಲಾ ಬಿಜೆಪಿ ವಕ್ತಾರ ಕೊಂಡಜ್ಜಿ ಜಯಪ್ರಕಾಶ್ ಅವರು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಅವರಿಗೆ ತಿರುಗೇಟು ನೀಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಣ ಹಂಚಿಕೆ ಮಾಡಿ ಚುನಾವಣೆ ಗೆಲ್ಲುವುದಾಗಿದ್ದರೆ, ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗುತ್ತಿರಲಿಲ್ಲ. ಕೋಟಿ ಕೋಟಿ ಹಣ ಹಂಚುವವರು ಸೋತು ಸುಣ್ಣವಾಗಿ ಮನೆ ಸೇರಿದ್ದು, ಈ ಚುನಾವಣೆಯ ಅಖಾಡದಿಂದಲೇ ಹೊರಬಿದ್ದಿದ್ದಾರೆಂದು ವ್ಯಂಗ್ಯವಾಡಿದರು.
ಈಗಾಗಲೇ ಮೂರು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿರುವ ಜಿ.ಎಂ.ಸಿದ್ದೇಶ್ವರ್ ಅವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿಯ ಆಧಾರದಲ್ಲಿ ಮತದಾರರ ಮುಂದೆ ಹೋಗಿ ಮತಯಾಚನೆ ಮಾಡುತ್ತಿದ್ದಾರೆ. ಹಣ ಹಂಚಿ ಮತ ಪಡೆಯುವುದಾಗಿದ್ದರೆ, ಕಳೆದ 4 ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲುತ್ತಿರಲಿಲ್ಲ. ಇದನ್ನು ಕಾಂಗ್ರೆಸ್ಸಿಗರು ಮೊದಲು ಅರಿಯಬೇಕೆಂದು ಸಲಹೆ ನೀಡಿದರು.
ಹಗರಣ ಹಾಗೂ ಭ್ರಷ್ಟಾಚಾರಗಳಿಗೆ ಹೆಸರುವಾಸಿಯಾಗಿರುವ ಕಾಂಗ್ರೆಸ್ ಪಕ್ಷವು, ಯುಪಿಎ ಸರ್ಕಾರದ ಅವಧಿಯಲ್ಲಿ ಅನೇಕ ಹಗರಣಗಳಲ್ಲಿ ಮಾಡಿರುವ ಹಣದಿಂದಲೇ ಕಾಂಗ್ರೆಸ್ಸಿನವರು ಈವರೆಗೆ ಚುನಾವಣೆಗಳಲ್ಲಿ ಹಣ ಚೆಲ್ಲುತ್ತಾ ಬಂದಿದ್ದಾರೆ. ಆದಾಯ ತೆರಿಗೆ ಇಲಾಖೆ ಸ್ವಾಯತ್ತ ಸಂಸ್ಥೆಯಾಗಿದ್ದು, ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ನಿವಾಸದ ಮೇಲೂ ಈ ಹಿಂದೆ ದಾಳಿ ನಡೆದಿದೆ. ಆದರೆ ಕಾಂಗ್ರೆಸ್ಸಿನವರ ರೀತಿ ಪ್ರತಿಭಟನೆ ಮಾಡಲಿಲ್ಲ ಎಂದು ಹೇಳಿದರು.
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ 10 ಸಾವಿರ ಕೋಟಿ ಅನುದಾನ ತಂದಿಲ್ಲ ಎನ್ನುವವರು ಜಿಲ್ಲೆಯಲ್ಲಿರುವ ಎಲ್ಲಾ ಇಲಾಖೆಗಳಿಗೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರೆ, 5 ವರ್ಷಗಳಲ್ಲಿ ಬಂದಿರುವ ಅನುದಾನದ ಮೊತ್ತ ಎಷ್ಟೆಂದು ತಿಳಿಯುತ್ತದೆ. ನಮ್ಮ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಸಾಮಾನ್ಯ ಜನರೊಂದಿಗೆ ಬೆರೆಯುವ ವ್ಯಕ್ತಿಯಾಗಿದ್ದಾರೆ. ಯಾವ ಸಮಯದಲ್ಲಾದರು ಕರೆ ಮಾಡಿದರೆ ಸ್ಪಂದಿಸುತ್ತಾರೆ. ಈ ಕಾರಣದಿಂದಲೇ ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಜನರು ಆಶೀರ್ವಾದ ಮಾಡಿದ್ದು, ಈ ಬಾರಿಯೂ ಅತ್ಯಧಿಕ ಮತಗಳಿಂದ ಜಯಗಳಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರಾಜಶೇಖರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ.ಶ್ರೀನಿವಾಸ, ಪಕ್ಷದ ಮುಖಂಡರಾದ ಬಿ.ಎಂ.ಸತೀಶ್, ಪ್ರಸನ್ನ ಕುಮಾರ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
