ಬೆಂಗಳೂರು:
ಪ್ರಧಾನಿ ನರೇಂದ್ರ ಮೋದಿ ಅವರು ನಾ ಖಾವೂಂಗಾ, ನಾ ಖಾನೇದೂಂಗಾ ಎಂದು ಹೇಳಿಕೊಂಡು ಲಂಚ ತಿನ್ನುತ್ತಿರುವವರ ಜತೆ ಸುತ್ತಾಡುತ್ತಿದ್ದಾರೆ. ಪ್ರಶಂಸೆ ಮಾಡುತ್ತಿದ್ದಾರೆ. 40% ಲಂಚದಲ್ಲಿ ಕೇಂದ್ರದ ಪಾಲು ಎಷ್ಟಿದೆಯೋ ಗೊತ್ತಿಲ್ಲ ಎಂದು ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ನ ನಾಲ್ಕೂ ಗ್ಯಾರಂಟಿ ಯೋಜನೆ ಸಾಧಿಸಲಾಗುವುದು. ಇದನ್ನು ಮಾಡದಿದ್ದರೆ, ಮುಖ್ಯಮಂತ್ರಿ ಸ್ಥಾನದಲ್ಲಿರುವವರನ್ನು ಎಐಸಿಸಿ ತೆಗೆದುಹಾಕಲಿದೆ. ಇಂದಿರಾ ಗಾಂಧಿ ಅವರ ಕಾಲದಲ್ಲಿ 10 ಅಂಶಗಳ ಕಾರ್ಯಕ್ರಮ ಮಾಡಿದೆವು, ಭೂಸುಧಾರಣೆ ಕಾರ್ಯಕ್ರಮ, ಬಡವರಿಗೆ ನಿವೇಷನ, ನೀಡಿದ್ದೇವೆ. ಬಿಜೆಪಿಯವರು ಉದ್ಯಮಿಗಳಿಗೆ ನೆರವು ನೀಡುತ್ತಿದ್ದಾರೆ. ನೀವು ಬಿಜೆಪಿ ಷಡ್ಯಂತ್ರಕ್ಕೆ ಬಲಿಯಾಗಬೇಡಿ. ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ.
ಚಿಕ್ಕಮಗಳೂರಿನ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿ, ಈ ಬಾರಿಯ ಚುನಾವಣೆಯನ್ನು ನಾವು ಗೆಲ್ಲಲೇಬೇಕು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನರ ಹಿತ ಮರೆತು, ಕೇವಲ ಲಂಚದಲ್ಲಿ ಮುಳುಗಿದೆ. ಪ್ರತಿ ಕೆಲಸದಲ್ಲಿ 40% ಕಮಿಷನ್ ಭ್ರಷ್ಟಾಚಾರ ಮಾಡಿದ್ದಾರೆ. ಈ ಆರೋಪವನ್ನು ಕಾಂಗ್ರೆಸ್ ಮಾಡುತ್ತಿಲ್ಲ, ಗುತ್ತಿಗೆದಾರರ ಸಂಘ, ರುಪ್ಸಾ ಸಂಸ್ಥೆ, ಮಾಧ್ಯಮಗಳ ವರದಿಗಳು, ಮಠಮಾನ್ಯಗಳು ಈ ಆರೋಪ ಮಾಡಿವೆ. ಕೇವಲ ಆರೋಪ ಮಾಡುವುದಲ್ಲದೇ, ಪ್ರಧಾನಿಗೆ ಪತ್ರ ಬರೆದು ದೂರು ನೀಡಿವೆ ಎಂದರು.
ಇಷ್ಟಾದರೂ ಪ್ರಧಾನಿ ಆವರು ಈ ಬಗ್ಗೆ ಗಮನಹರಿಸುತ್ತಿಲ್ಲ. ಯಾವುದೇ ಅಭಿವೃದ್ಧಿ ಮಾಡಿಲ್ಲ. ಕೇಂದ್ರ ಸರ್ಕಾರ ಕೂಡ ಯಾವುದೇ ಯೋಜನೆಯನ್ನು ರಾಜ್ಯಕ್ಕೆ ನೀಡಿಲ್ಲ. ಚಿಕ್ಕಮಗಳೂರಿಗೂ ಬಂದಿಲ್ಲ. ಬಿಜೆಪಿ ತನ್ನ ಕಾಲದಲ್ಲಿ ಯಾವ ಯೋಜನೆ ತಂದಿದ್ದಾರೆ ಎಂದು ಹೇಳಲು ಸಾಧ್ಯವೇ? ನಾನು ರೈಲ್ವೇ ಸಚಿವನಾಗಿ ಒಂದು ವರ್ಷ ಅವಕಾಶ ಸಿಕ್ಕಿತ್ತು. ಆಗ ನೆನೆಗುದಿಗೆ ಬಿದ್ದದ್ದ ಚಿಕ್ಕಮಗಳೂರು ಕಡೂರು ಮಾರ್ಗವನ್ನು ಪೂರ್ಣಗೊಳಿಸಿದ್ದಾಗಿ ಹೇಳಿದರು.
ಇಲ್ಲಿಂದ ಆರಿಸುವ ಶಾಸಕರು ಸಂಸದರು ಕೇಂದ್ರದ ಮೇಲೆ ಒತ್ತಡ ತಂದು ಕೆಲಸ ಮಾಡಿಸುವುದಿಲ್ಲ ಯಾಕೆ? ಬಿಜೆಪಿಯವರು 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ. ಕಾಂಗ್ರೆಸ್ ಯಾವುದೇ ಯೋಜನೆ ಮಾಡದಿದ್ದರೆ ದೇಶ ಇಷ್ಟು ಅಭಿವೃದ್ಧಿ ಆಗುತ್ತಿರಲಿಲ್ಲ. 1947ರಲ್ಲಿ ಸಾಕ್ಷರತೆ ಪ್ರಮಾಣ ಶೇ.16ರಷ್ಟಿತ್ತು. ಆದರೆ 2013-14ರವರೆಗೆ ಶೇ.74 ಕ್ಕೆ ಏರಿಕೆಯಾಯಿತು. ಆದರೂ ನಾವು ಏನು ಮಾಡಿದ್ದೇವೆ ಎಂದು ಕೇಳುತ್ತಾರೆ.
ಜನರನ್ನು ಶಿಕ್ಷಿತರನ್ನಾಗಿ ಮಾಡಿ, ಬದುಕುವಂತೆ ಮಾಡಿದ್ದೇವೆ. 1947ರಲ್ಲಿ ಪ್ರತಿ ವ್ಯಕ್ತಿಯ ಜೀವಮಾನ ಸರಾಸರಿ 32 ವರ್ಷದಷ್ಟಿತ್ತು. ಆದರೆ ಇದು ಇಂದು 70 ವರ್ಷವಾಗಿದೆ. ಈಗ ಮೋದಿ ಅವರ ಕಾಲದಲ್ಲಿ ಶೇ.69.27ರಷ್ಟಕ್ಕೆ ಕುಸಿದಿದೆ. ಆಸ್ಪತ್ರೆ, ಪೋಷಕಾಂಶಗಳ ಕೊರತೆ ಹೆಚ್ಚಾಗಿದೆ. ಈ ಅಂಕಿಅAಶಗಳು ಕೇಂದ್ರ ಸರ್ಕಾರದ್ದು ಎಂದರು.
ಬಿಜೆಪಿಯವರು ಮಾತಿನಲ್ಲಿ ಎಲ್ಲವನ್ನು ಗೆಲ್ಲಲು ಸುಳ್ಳು ಹೇಳುತ್ತಾರೆ. ಅವರಿಗೆ ಜನರ ಹಿತ, ಅಭಿವೃದ್ಧಿ ಬೇಕಾಗಿಲ್ಲ. ಸ್ವಾತಂತ್ರ್ಯ ಕ್ಕೂ ಮುನ್ನ ಎಲ್ಲಾ ಹಂತದ ಶಾಲೆಗಳ ಸಂಖ್ಯೆ 1.40,794 ಇತ್ತು. 2013-14 ಇದರ ಸಂಖ್ಯೆ 14 ಲಕ್ಷಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಮೋದಿ ಅವರು ಯಾಕೆ ಓದಿಕೊಂಡಿಲ್ಲ. ಇದ್ಯಾವುದೂ ಬಿಜೆಪಿಯವರ ತಲೆಗೆ ಹೋಗುವುದಿಲ್ಲ ಎಂದು ಹೇಳಿದರು.
ನೀರಾವರಿ ವಿಚಾರ ನೋಡುವುದಾದರೆ, 1947ರಲ್ಲಿ ಒಟ್ಟಾರೆ ನೀರಾವರಿ ಪ್ರದೇಶ 21 ಮಿಲಿಯನ್ ಹೆಕ್ಟೇರ್ ನಷ್ಟಿತ್ತು. 2013-14ರಲ್ಲಿ ಇದು 68 ಮಿಲಿಯನ್ ಹೆಕ್ಟೇರ್ ಗೆ ಏರಿಕೆಯಾಯಿತು. ಆಹಾರ ಉತ್ಪಾದನೆಯಲ್ಲಿ 50 ಮಿಲಿಯನ್ ಟನ್ ನಷ್ಟಿತ್ತು, ಈಗ 265 ಮಿಲಿಯನ್ ಟನ್ ಆಗಿದೆ. ಆಗ ನಮ್ಮ ಜನ ಅಮೆರಿಕದ ಗೋದಿಗೆ ಕೈಚಾಚುತ್ತಿದ್ದರು. ಆದರೆ ಇಂದು ಮೋನಮೇಹನ್ ಸಿಂಗ್ ಅವರು ಆಹಾರ ಭದ್ರತಾ ಕಾಯ್ದೆ ತಂದು ಬಡವರ ಹೊಟ್ಟೆ ತುಂಬಿಸುವ ಕೆಲಸ ಮಾಡಿದ್ದಾರೆ ಎಂದರು.
ಬಿಜೆಪಿ ಸರ್ಕಾರ ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿತ್ತು. ಯಾರ ಆದಾಯ ಡಬಲ್ ಆಗಿದೆ? ನಮ್ಮ ಕಾಲದಲ್ಲಿ ಭತ್ತಕ್ಕೆ ಬೆಂಬಲ ಬೆಲೆಯನ್ನು ಶೇ.10.92ರಷ್ಟು ನಿಗದಿ ಮಾಡಿದ್ದೆವು. ಬಿಜೆಪಿ ಅವಧಿಯಲ್ಲಿ ಅದು ಶೇ.4.09 ಗೆ ಕುಸಿದಿದೆ. ಹೀಗೆ ಅನೇಕ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತ ಉತ್ತಮ ಜನಪರ ಯೋಜನೆ ನೀಡಿದೆ. ದೇಶದಲ್ಲಿ ಕೋಮುವಾದ, ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಸಿ ದೇಶವನ್ನು ಬರ್ಬಾದ್ ಮಾಡುತ್ತಿರುವವರು ಬಿಜೆಪಿಯವರು. ನಾವು ಎಲ್ಲರನ್ನು ಶಾಂತಿಯುತವಾಗಿ ಎಲ್ಲರನ್ನು ಒಗ್ಗಟ್ಟಾಗಿಸಲು ಪ್ರಯತ್ನಿಸುತ್ತಿದ್ದೇವೆ. ನಮ್ಮದು ಬದುಕಿನ ಪ್ರಯತ್ನವಾದರೆ, ನಿಮ್ಮದು ಒಡಕಿನ ಪ್ರಯತ್ನವಾಗಿದೆ. ನೀವು ಇನ್ನು ಎಷ್ಟು ದಿನ ಜನರನ್ನು ಮೋಸ ಮಾಡುತ್ತೀರಿ ಎಂದರು.
ಕರ್ನಾಟಕ ಸರ್ಕಾರವನ್ನು ಕಿತ್ತೊಗೆಯಲು ನಾವು ಹಾಗೂ ಜನ ಯೋಚಿಸಿದ್ದಾರೆ. ನಿರುದ್ಯೋಗ, ಹಣದುಬ್ಬರ ಹೆಚ್ಚಾಗಿದೆ. ಕರ್ನಾಟಕದಲ್ಲಿ 25 ಲಕ್ಷ ನಿರುದ್ಯೋಗಿಗಳಿದ್ದಾರೆ. ರಾಜ್ಯದಲ್ಲಿ 2.50 ಲಕ್ಷ ಹುದ್ದೆಗಳು ಖಾಲಿ ಇವೆ. ಈ ಹುದ್ದೆ ಭರ್ತಿ ಮಾಡಲು ಸರ್ಕಾರ ಯಾಕೆ ಸಿದ್ಧವಿಲ್ಲ. ಶಾಲೆಗಳಲ್ಲಿ ಶಿಕ್ಷಕರು, ಆಸ್ಪತ್ರೆಯಲ್ಲಿ ವೈದ್ಯ ಹುದ್ದೆಗಳು ಖಾಲಿ ಇದ್ದರೂ ಯಾಕೆ ತುಂಬುತ್ತಿಲ್ಲ? ರಾಷ್ಟ ಮಟ್ಟದಲ್ಲಿ 30 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇವೆ. ಇದರಲ್ಲಿ ಶೇ.50ರಷ್ಟು ಹುದ್ದೆಗಳು ಪರಿಶಿಷ್ಟರಿಗೆ ಸೇರಬೇಕಿದೆ. ಅದಕ್ಕಾಗಿ ಇವುಗಳನ್ನು ತುಂಬಲು ಅವರು ಸಿದ್ಧರಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ, ನಾವು ಜನಪರ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ನಾಲ್ಕು ಗ್ಯಾರಂಟಿ ಯೋಜನೆ ಘೋಷಿಸಿದೆ. ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ತಿಂಗಳು ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಗೃಹಲಕ್ಷಿ÷್ಮ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ, ಆಮೂಲಕ ವರ್ಷಕ್ಕೆ 24 ಸಾವಿರ ನೀಡಲಾಗುವುದು. ಅನ್ನಭಾಗ್ಯ ಯೋಜನೆ ಮೂಲಕ ಪ್ರತಿ ಬಡ ಕುಟುಂಬಗಳ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಯುವನಿಧಿ ಯೋಜನೆ ಮೂಲಕ ಪದವೀಧರ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500 ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಹೇಳಿದರು.
ಇಲ್ಲಿ ಕಾಫಿ ತೋಟದಲ್ಲಿ ಕೆಲಸಗಾರರಿದ್ದಾರೆ. ಬಿಜೆಪಿ ಸರ್ಕಾರ ಬಡವರ ಪರವಾಗಿ, ಕಾರ್ಮಿಕರ ಪರವಾಗಿ ಇದ್ದ ಕಾನೂನುಗಳನ್ನು ಬದಲಾವಣೆ ಮಾಡಿದೆ. ಅಂಬೇಡ್ಕರ್ ಅವರು 1946ರಲ್ಲಿ ಬ್ರಿಟೀಷ್ ಸರ್ಕಾರದಲ್ಲಿ 8 ತಾಸಿನ ಕೆಲಸ ಮಿತಿ ಹಾಗೂ ಅದಕ್ಕೆ ವೇತನವನ್ನು ನಿಗದಿ ಮಾಡಿದ್ದರು. ಆದರೆ ಬಿಜೆಪಿ ಸರ್ಕಾರ ಕೆಲಸದ ಮಿತಿಯನ್ನು 12 ತಾಸಿಗೆ ವಿಸ್ತರಿಸಿದೆ. ಇದರಿಂದ ಕಾರ್ಮಿಕರ ಮೇಲೆ ಒತ್ತಡ ಹೆಚ್ಚಾಗಿದೆ. ನಿಮ್ಮ ಭವಿಷ್ಯ ನಿಧಿ, ಎಲ್‌ಐಸಿ, ಬ್ಯಾಂಕುಗಳ ಹಣವನ್ನು ತೆಗೆದು ಶ್ರೀಮಂತ ಉದ್ಯಮಿಗಳಿಗೆ ನೀಡುತ್ತಿದ್ದಾರೆ. ನಮ್ಮ ಆಸ್ತಿ, ಹಣವನ್ನು ಅವರಿಗೆ ನೀಡುತ್ತಿದ್ದಾರೆ. ಹೀಗಾಗಿ ನೀವು ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಬೆಂಬಲಿಸಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ