ಪಣಜಿ:
ಗೋಬಿ ಮಂಚೂರಿ ಎಲ್ಲರಿಗೂ ಫೇವರಿಟ್, ಆದರೆ ಅದನ್ನು ಹೆಚ್ಚೆಚ್ಚು ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿ, ಹೀಗಾಗಿ ಉತ್ತರ ಗೋವಾದ ಮಾಪುಸಾ ನಗರದಲ್ಲಿ ಫಾಸ್ಟ್‌ಫುಡ್ ಗೋಬಿ ಮಂಚೂರಿಯನ್ ಮಾರಾಟವನ್ನು ನಿಷೇಧಿಸಿ ಸ್ಥಳೀಯ ನಗರ ಪಾಲಿಕೆ ಆದೇಶ ಹೊರಡಿಸಿದೆ.
ನಗರದ ಯಾವುದೇ ಹೋಟೆಲ್– ಅಂಗಡಿ, ತಳ್ಳುಗಾಡಿಗಳಲ್ಲಿ ಗೋಬಿ ಮಂಚೂರಿಯನ್ ಮಾರಾಟ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ನಗರದಲ್ಲಿ ಪ್ರಸಿದ್ಧ ಬೋಗಡೇಶ್ವರ್ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರ ಪಾಲಿಕೆಯ ಕೆಲ ಸದಸ್ಯರು ಗೋಬಿ ಮಂಚೂರಿಯನ್ ಮಾರಾಟ ಮಾಡುವುದನ್ನು ನಿಷೇಧಿಸಬೇಕು ಎಂದು ಮನವಿ ಸಲ್ಲಿಸಿದ್ದರು.
ಗೋಬಿ ಮಂಚೂರಿಯನ್ ಪದಾರ್ಥಕ್ಕೆ ವ್ಯಾಪಕ ರಾಸಾಯನಿಕ ಬೆರೆಸುವುದು, ಸ್ವಚ್ಛತೆ ಕಾಪಾಡದೇ ಕಂಡ ಕಂಡಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ತಿನ್ನುವವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಅದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಂಗ್ಲ ನಿಯತಕಾಲಿಕವೊಂದು ವರದಿ ಮಾಡಿದೆ.
ನಾಲಿಗೆಗೆ ರುಚಿಯನ್ನು ನೀಡುವ ಗೋಬಿ ಆರೋಗ್ಯಕ್ಕೆ ಎಷ್ಟು ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂಬದನ್ನು ತಿಳಿದು ಈ ನಿಷೇಧದ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಗೋಬಿ ತಯಾರಿಕೆಯಲ್ಲಿ ಬಳಸುವ ರುಚಿಕಾರಕ, ಕೃತಕ ಬಣ್ಣ, ಕಡಿಮೆ ಬೆಲೆಯ ಸಾಸ್ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುವ ಪರಿಣಾಮ ಹಾಗೂ ಶುಚಿತ್ವ, ನೈರ್ಮಲ್ಯದ ಬಗ್ಗೆ ಹಲವು ದೂರುಗಳು ಆಧಾರದ ಮೇಲೆ ಗೋಬಿ ಮಂಚೂರಿಯನ್ ಮಾರಾಟ ನಿಷೇಧಿಸಲಾಗಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.