ಗುಬ್ಬಿ:
ಆರ್.ರಾಜೇಂದ್ರ ಪರ ಮತಯಾಚಿಸಿ ಆರೋಪ ಮಾಡಿದ ಕಾಂಗ್ರೆಸ್ಸಿಗರು
ಬಿಜೆಪಿ ಹಾಗೂ ಜೆಡಿಎಸ್ ನಡುವೆ ಇಡೀ ರಾಜ್ಯದಲ್ಲಿ ಒಳ ಒಪ್ಪಂದವಾಗಿದ್ದು, ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನೇರ ಆರೋಪ ಮಾಡಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, 25 ಸ್ಥಾನಗಳ ಪೈಕಿ ಕೇವಲ 6 ಭಾಗದಲ್ಲಿ ಮಾತ್ರ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕಿರುವ ಹಿನ್ನೆಲೆ ನೋಡಿದಾಗ ಬಿಜೆಪಿಗೆ ಲಾಭ ತರುವಂತಹ ಕೆಲಸವನ್ನು ಜೆಡಿಎಸ್ ಮಾಡುತ್ತಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಸಾಮಾನ್ಯರಿಗೆ ಹೊರೆಯಾಗಿರುವ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದು, ಜನರು ಬೇಸತ್ತಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಆಡಳಿತ ವಿಕೇಂದ್ರೀಕರಣದ ಆಸಕ್ತಿಯೇ ಇಲ್ಲ. ಹಾಗಾಗಿ ಸ್ಥಳೀಯ ಆಡಳಿತಕ್ಕೆ ಯಾವುದೇ ರೀತಿಯ ಅನುದಾನಗಳನ್ನು ಬಿಡುಗಡೆ ಮಾಡಿಲ್ಲ. ಯಾವುದೇ ಗ್ರಾಮಾಂತರ ಭಾಗದಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡಲು ಕೂಡ ಈ ಸರ್ಕಾರದಿಂದ ಸಾಧ್ಯವಾಗಿಲ್ಲ.
ಲೋಕೋಪಯೋಗಿ ಇಲಾಖೆಯಿಂದ ಒಂದಷ್ಟು ರಸ್ತೆ ಕಾಮಗಾರಿಗಳು ನಡೆಯುತ್ತಿರುವುದು ಬಿಟ್ಟರೆ ಗ್ರಾಮಾಂತರ ಭಾಗದಲ್ಲಿ ಬಿಜೆಪಿ ಸರ್ಕಾರದ ಅಭಿವೃದ್ಧಿ ಶೂನ್ಯ. ಕಳೆದ ಬಾರಿ ನಮ್ಮ ಅಭ್ಯರ್ಥಿ ರಾಜೇಂದ್ರ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದರು. ಈ ಬಾರಿ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್‍ಗೆ ಉತ್ತಮ ವಾತಾವರಣ ಸೃಷ್ಟಿಯಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಅಭ್ಯರ್ಥಿ ಹೆಸರು ಮತದಿಂದ ಗೆಲುವು ಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಈಗ ಚುನಾವಣೆಗೆ ಸ್ಪರ್ಧಿಸಿರುವ ಇನ್ನಿಬ್ಬರು ಅಭ್ಯರ್ಥಿಗಳನ್ನು ನೋಡಿದ್ದೀರಾ ಎಂದು ಪತ್ರಕರ್ತರಿಗೆ ಪ್ರಶ್ನೆ ಹಾಕುವ ಮೂಲಕ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಹೊಸಬರು, ನಮ್ಮ ಅಭ್ಯರ್ಥಿ ಇಡೀ ಜಿಲ್ಲೆಗೆ ಚಿರಪರಿಚಿತರು ಎಂದು ಹೇಳುವ ಮೂಲಕ ನಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಶಫಿಅಹ್ಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಜಿಲ್ಲಾ ಮುಖಂಡ ಚಂದ್ರಶೇಖರಗೌಡ, ತುಮಕೂರು ಮಹಾ ನಗರಪಾಲಿಕೆ ಸದಸ್ಯ ಕುಮಾರ್, ಬ್ಲಾಕ್ ಅಧ್ಯಕ್ಷ ನರಸಿಂಹಯ್ಯ, ನಿಂಬೆಕಟ್ಟೆ ಜಯಣ್ಣ, ಮುಖಂಡರಾದ ಹೊನ್ನಗಿರಿಗೌಡ, ಜಿ.ಎಸ್.ಪ್ರಸನ್ನಕುಮಾರ್, ಎಂ.ವಿ.ಶ್ರೀನಿವಾಸ್ ಸೇರಿದಂತೆ ಇನ್ನಿತರರು ಇದ್ದರು. ಗುಬ್ಬಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮಾತನಾಡಿದರು.
ಕಳೆದ ಬಾರಿ ಅಲ್ಪ ಅಂತರದಲ್ಲಿ ಸೋತ ನಾನು ಜಿಲ್ಲೆಗೆ ಚಿರಪರಿಚಿತ. ಕಳೆದ ಆರು ತಿಂಗಳಿನಿಂದ ಪ್ರವಾಸ ನಡೆಸಿರುವ ನನಗೆ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಈ ಬಾರಿ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ವಾತಾವರಣ ಇರುವುದರಿಂದ ನಮ್ಮ ಗೆಲುವು ಸರಳವಾಗುತ್ತದೆ ಇಡೀ ಜಿಲ್ಲೆಯ ಎಲ್ಲಾ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿರುವುದರಿಂದ ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ.
-ಆರ್.ರಾಜೇಂದ್ರ, ವಿ.ಪ.ಕಾಂಗ್ರೆಸ್ ಅಭ್ಯರ್ಥಿ
ದೇವೇಗೌಡರನ್ನು ಸೋಲಿಸಿದ್ದು ಬಿಜೆಪಿಗರು : ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸೋಲಿಸಿದ್ದು, ಬಿಜೆಪಿ ಪಕ್ಷದವರೇ ಹೊರತು ನಾನಲ್ಲ. ಸೋಲಿಸಿದ್ದು ನಾನು ಅಂತ ದೇವೇಗೌಡರು ಎಲ್ಲಿಯೂ ಹೇಳಿಲ್ಲ. ಅವರು ಹೇಳಿರುವುದು ನನ್ನನ್ನು ಸೋಲಿಸಿದವರನ್ನು ಸೋಲಿಸಿ ಎಂದು ಹಾಗಾಗಿ ಬಿಜೆಪಿಯನ್ನು ಸೋಲಿಸಿ ಎಂದು ಅವರೇ ಕರೆ ಕೊಟ್ಟಿದ್ದಾರೆ. ಅವರ ಮಾತನ್ನು ನೀವು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ರಾಜಣ್ಣ ಜೆಡಿಎಸ್ ನೀಡುತ್ತಿರುವ ಕರೆಗೆ ತಿರುಗೇಟು ನೀಡಿ ಮಧುಗಿರಿಯಲ್ಲಿ ಬಿಜೆಪಿಗೆ ಅತೀ ಹೆಚ್ಚು ಮತ ಬಿದ್ದಿದ್ದು ಸರಿ. ಆದರೆ ಅಲ್ಲಿ ಜೆಡಿಎಸ್ ಶಾಸಕರೇ ಇದ್ದದ್ದು ಎನ್ನುವುದನ್ನು ಮರೆಯುವಂತಿಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ