ಬಿಜೆಪಿ-ಜೆಡಿಯು ಮೈತ್ರಿ ಬಿಹಾರಕ್ಕೆ ಸೀಮಿತ

ದಾವಣಗೆರೆ:

     ಬಿಜೆಪಿ-ಜೆಡಿಯು ಪಕ್ಷಗಳ ಮೈತ್ರಿ ಬಿಹಾರಕ್ಕಷ್ಟೇ ಸೀಮಿತವಾಗಿದ್ದು, ಕರ್ನಾಟಕದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಸೂಚಿಸಿದ್ದಾರೆಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ.ಪಟೇಲ್ ಸ್ಪಷ್ಟಪಡಿಸಿದರು.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಸೇರಿದಂತೆ ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಚುನಾವಣಾ ತಜ್ಞ ಪ್ರಶಾಂತ ಕಿಶೋರ ಸೇರಿದಂತೆ ಪ್ರಮುಖರ ಜೊತೆಗೆ ಚರ್ಚಿ ನಡೆಸಿದ್ದು, ಇನ್ನು 2 ದಿನದಲ್ಲೇ ಒಂದು ತೀರ್ಮಾನಕ್ಕೆ ಬರಲಿದ್ದೇವೆ.

     ಅಗತ್ಯ ಬಿದ್ದರೆ ರಾಜ್ಯದಲ್ಲಿ 4-5 ಕ್ಷೇತ್ರ ಜೆಡಿಯುಗೆ ಬಿಟ್ಟು ಕೊಡುವಂತೆ ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದರು.ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವಂತೆ ಮಾಜಿ ಸಚಿವರೊಬ್ಬರಿಂದ ಆಹ್ವಾನ ಬಂದಿದೆ. ಹಿಂದೆ ಅದೇ ಕಾಂಗ್ರೆಸ್‍ನಿಂದ ನನಗೆ ಕೆಟ್ಟ ಅನುಭವವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನ ಮಾಜಿ ಸಚಿವರ ಆಹ್ವಾನ ನಿರಾಕರಿಸಿದೆ ಎಂದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ನನಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಗಿತ್ತು. ಆದರೆ, ಅದನ್ನು ತಪ್ಪಿಸಲಾಯಿತು. ಆದರೂ, ನಾನು ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದೆ.

        ನಾನು ಸ್ಪರ್ಧೆ ಮಾಡಿದ್ದ ಕಾರಣಕ್ಕೆ ಕಾಂಗ್ರೆಸ್ಸಿನ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸೋಲು ಕಂಡರು ಎಂಬ ಮಾತುಗಳೂ ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಯಾವುದೇ ಕಾರಣಕ್ಕೂ ನಾನಂತೂ ಕಾಂಗ್ರೆಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲಿರುವ ಜಿ.ಎಂ.ಸಿದ್ದೇಶ್ವರ ತಮ್ಮನ್ನು ಭೇಟಿ ಮಾಡಿ, ಬೆಂಬಲಿಸುವಂತೆ ಬೆಂಗಳೂರಿನ ನಿವಾಸಕ್ಕೆ ಬಂದು ಕೇಳಿದ್ದಾರೆ. ಈ ವಿಚಾರದಲ್ಲಿ ನಾನು ಸಕಾರಾತ್ಮಕ ನಿಲುವನ್ನು ತಾಳಬಹುದು. ಕಾರಣ ಹಿಂದೆ ಸಿದ್ದೇಶ್ವರ್ ತಂದೆ ಜಿ. ಮಲ್ಲಿಕಾರ್ಜುನಪ್ಪ ಬಿಜೆಪಿಯಿಂದ ದಾವಣಗೆರೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾಗ ಅವರ ಗೆಲುವಿಗೆ ನನ್ನ ತಂದೆ ಜೆ.ಎಚ್.ಪಟೇಲರು ಶ್ರಮಿಸಿದ್ದರು ಎಂದು ಮಹಿಮಾ ಪಟೇಲ್ ಸ್ಮರಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link