ದಾವಣಗೆರೆ:
ಇಲ್ಲಿನ ಎಸ್ ಪಿ ಎಸ್ ನಗರದ ಬೂದಾಳು ರಸ್ತೆಯಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜಯಂತಿ ಹಾಗೂ ಡಾ.ಬಾಬುಜಗಜೀವನರಾಂ ಅವರ 112ನೇ ಜಯಂತಿ ಪ್ರಯುಕ್ತ 4ನೇ ವರ್ಷದ ಸರಳ ಸಾಮೂಹಿಕ ವಿವಾಹ ಮಹೋತ್ಸವ ನೆರವೇರಿತು.
ಈ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 23 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಈ ಕಾರ್ಯಕ್ರಮಕ್ಕೆ ಬಂದ ಅತಿಥಿ ಗಣ್ಯರು, ನವ ವಧು-ವರರನ್ನು ಆಶೀರ್ವಧಿಸಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಹೆಚ್.ವಿಶ್ವನಾಥ್, ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಇಂತಹ ಸರಳ ಸಾಮೂಹಿಕ ವಿವಾಹಗಳು ಸಹಕಾರಿಯಾಗಿದ್ದು, ಬಡ ಪೋಷಕರ ಮಕ್ಕಳಿಗೆ ಕಂಕಣ ಭಾಗ್ಯ ನೀಡಲು ಇದು ಸೂಕ್ತ ವೇದಿಕೆಯಾಗಿದೆ ಎಂದರು.
ಅದ್ದೂರಿ ಮದುವೆಗಳಲ್ಲಿ ದುಂದುವೆಚ್ಚ ಇರುತ್ತದೆಯೇ ಹೊರತು, ಯಾವ ಆದರ್ಶವೂ ಇರುವುದಿಲ್ಲ. ಆದರೆ, ಸರಳ ವಿವಾಹದಲ್ಲಿ ಸರಳತೆ, ಪ್ರೀತಿ, ಆದರ್ಶ ನೆಲೆಸಿರುತ್ತದೆ. ಇಂತಹ ಸಾಮೂಹಿಕ ವಿವಾಹದಿಂದ ಆರ್ಥಿಕ ಹೊರೆ ತಪ್ಪುತ್ತದೆ. ಡಾ.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಅವರ ಜಯಂತ್ಯೋತ್ಸವದ ಪ್ರಯುಕ್ತ ಸರಳ ವಿವಾಹ ಮಹೋತ್ಸವ ಆಯೋಜಿಸಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವಗುರು ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕಾಗಿದೆ. ಸತಿ-ಪತಿಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಸುಖಕರ ಜೀವನ ನಡೆಸಿ, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಡಬೇಕೆಂದು ಸಲಹೆ ನೀಡಿದರು.
12ನೇ ಶತಮಾನದಲ್ಲಿ ಶೋಷಿತರಿಗೆ ಬಸವಣ್ಣ ಸಾಮಾಜಿಕ ನ್ಯಾಯ ಕೊಡಿಸಿದಂತೆ ಅಂಬೇಡ್ಕರ್ ಅವರು ಸಹ ದಲಿತರ, ಶೋಷಿತರ ದನಿಯಾದರು. ಇವರ ಆದರ್ಶ ತತ್ವ ಸಿದ್ದಾಂತಗಳನ್ನು ಪಾಲಿಸಿದರೆ ಜೀವನ ಸಾರ್ಥಕವಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಚ್.ಮಲ್ಲೇಶ್, ಹೆಗ್ಗೆರೆ ರಂಗಪ್ಪ, ಹನುಮಂತಪ್ಪ, ದುಗ್ಗಪ್ಪ, ಲೋಕೇಶ್, ಹೆಚ್.ಸಿ.ಮಲ್ಲಪ್ಪ, ಹನುಮಂತಪ್ಪ, ಹಾಲಮ್ಮ ಜ್ಯೋತಿ ಕೊಟ್ರೇಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
