ದಾವಣಗೆರೆ:
ಅಖಂಡ ಕರ್ನಾಟಕವನ್ನು ತುಂಡರಿಸುವ ಉದ್ದೇಶದಿಂದ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಲಾಗಿದೆ ಎಂದು 9ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಲೋಕೇಶ್ ಅಗಸನಕಟ್ಟೆ ನೇರ ಆರೋಪ ಮಾಡಿದ್ದಾರೆ.ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆಯುತ್ತಿದ್ದ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಿದ ಅವರು, ತುಂಗಭದ್ರಾ ನದಿಯ ಆಚೆ, ಇಚೆಯ ಕರ್ನಾಟಕವನ್ನು ಇಬ್ಭಾಗ ಮಾಡುವ ಉದ್ದೇಶದಿಂದಲೇ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿಸಲಾಗಿದೆ. ಕರಾವಳಿ ಕರ್ನಾಟಕ, ಕಲ್ಯಾಣ ಕರ್ನಾಟಕಗಳೆಂಬ ಅಪಸ್ವರ ಎದ್ದಾಗ, ತುಂಗಭದ್ರಾ ನದಿಯ ಆಚೆ ಇರುವವರು ಬೆಳಗಾವಿಯ ಸುವರ್ಣಸೌಧದಿಂದ ಆಡಳಿತ ನಡೆಸಿಕೊಳ್ಳಿ ಎಂಬುದಾಗಿ ಹೇಳಿ ಕರ್ನಾಟಕವನ್ನೇ ತುಂಡರಿಸಲು ಈ ಸೌಧ ನಿರ್ಮಾಣ ಮಾಡಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ತುಂಗಭದ್ರಾ ಈಚೆಯ ಭಾಗದಲ್ಲಿ ಒಂದು ಸಮುದಾಯದ ಅಪ್ಪ, ಮಕ್ಕಳ ಕೈಯಲ್ಲಿ ಆಡಳಿತವಿದ್ದು, ವಿಧಾನಸೌಧದಲ್ಲಿ ಅಪ್ಪ, ಮಗ, ಅವರ ಬಂಧುಗಳೇ ತುಂಬಿಹೋಗಿದ್ದಾರೆ. ಬರುವ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ಮಿತ್ರಕೂಟ ಸೋತು ಹೋದರೆ, ಕರ್ನಾಟಕ ಇಬ್ಭಾಗ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸೂಚ್ಯವಾಗಿ ನುಡಿದರು.
ರಾಜಕಾರಣಿಗಳು ಭಾವನಾತ್ಮಕ ಹಾಗೂ ತಂತ್ರಗಾರಿಕೆಯಿಂದ ಮಾತನಾಡುವವರಿದ್ದಾರೆ. ಈ ಇಬ್ಬರಲ್ಲಿ ತಂತ್ರಗಾರಿಕೆಯಿಂದ ಮಾತನಾಡುವ ರಾಜಕಾರಣಿಗಳು ಹೆಚ್ಚು ಅಪಾಯಕಾರಿಗಳಾಗಿದ್ದು, ಇವರಿಂದಲೇ ಕರ್ನಾಟಕ ತುಂಡಾಗಲಿದೆ ಎಂದರು.
ನಮ್ಮ ನಾಡಿನ ಗೀತೆ ನಮ್ಮ ನಾಲಿಗೆಯ ಮೇಲೆಯೇ ಇಲ್ಲದಿದ್ದರೆ ಹೇಗೆ? ನಾಡಗೀತೆಯನ್ನು ಮೊಟಕುಗೊಳಿಸಿ, ಸಂಗೀತ ಬೇಡ ಎಂಬ ವಾದಗಳು ಕೇಳಿ ಬರುತ್ತಿರುವುದು ಸರಿಯಲ್ಲ. ಭಾಷೆಯ ಬಗ್ಗೆ ನಮಗೆ, ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳಿಗೆ ನಮ್ಮ ಭಾಷೆಯ ಬಗ್ಗೆಯೆ ಗೊತ್ತಿಲ್ಲದಿದ್ದರೇ ಹೇಗೆ? ಬಿಡಿ, ಬಿಡಿಯಾಗಿ ನಿಂತರೆ ಯಾರಿಗೂ ಸಹ ನಾಡಗೀತೆ ಹಾಡಲು ಬರುವುದಿಲ್ಲ. ಆದ್ದರಿಂದ ನಾಡಗೀತೆಯನ್ನು ಪಠ್ಯವಾಗಿಸಬೇಕು. ಹಾಗೂ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳಿಗೆ ನಾಡಗೀತೆಯನ್ನು ಕಡ್ಡಾಯವಾಗಿ ಕಲಿಸಬೇಕೆಂದು ಸಲಹೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
