ಬೀದಿನಾಯಿಗಳ ದಂಡು ದಿನೇ ದಿನೇ ಹೆಚ್ಚಳ : ಹೊರಗಿನಿಂದಲೂ ಬರುತ್ತಿವೆಯೇ? ಸಾರ್ವಜನಿಕರ ಆತಂಕ..!

 ತುಮಕೂರು:

      ತುಮಕೂರು ನಗರದಲ್ಲಿ ಬೀದಿನಾಯಿಗಳ ಹಾವಳಿ ಅಧಿಕವಾಗುತ್ತಿದ್ದು, “ರಾತ್ರಿ ವೇಳೆ ಪರಸ್ಥಳಗಳಿಂದ ಬೀದಿನಾಯಿಗಳನ್ನು ಇಲ್ಲಿಗೆ ತಂದು ಬಿಡಲಾಗುತ್ತಿರಬಹುದು” ಎಂಬ ಶಂಕೆ ತುಮಕೂರು ಮಹಾನಗರ ಪಾಲಿಕೆಯನ್ನು ಕಾಡಲಾರಂಭಿಸಿದ್ದು, ಪಾಲಿಕೆಗೆ ಹೊಸ ತಲೆನೋವು ತಂದಿದೆ.

      ಒಂದೆಡೆ ಪಾಲಿಕೆಯು ಲಕ್ಷಾಂತರ ರೂ.ಗಳನ್ನು ವೆಚ್ಚ ಮಾಡಿ, ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದೆ. ಆದರೆ ಇನ್ನೊಂದೆಡೆ ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ನಗರದಲ್ಲಿ ಬೀದಿನಾಯಿಗಳು ಕಾಣಿಸಿಕೊಳ್ಳುತ್ತಿರುವುದು ಈ ತಲೆನೋವಿಗೆ ಕಾರಣವಾಗಿದೆ.

      ಮೊದಲಿಗೆ ನಗರದ ಕೋಳಿ ಮತ್ತು ಮಾಂಸದ ಅಂಗಡಿಗಳು ಇರುವ ಬಡಾವಣೆಗಳಲ್ಲಿ ಮಾತ್ರ ಬೀದಿ ನಾಯಿಗಳ ಸಂಖ್ಯೆ ಅಧಿಕವಾಗಿದೆಯೆಂದು ಮಹಾನಗರ ಪಾಲಿಕೆಯು ಅಂದಾಜಿಸಿತ್ತು. ಈ ಅಂಗಡಿಗಳ ತ್ಯಾಜ್ಯ ಸರಿಯಾಗಿ ವಿಲೇವಾರಿ ಆಗದೆ, ಸ್ಥಳದಲ್ಲೇ ಬೀದಿಗೆಸೆಯುತ್ತಿರುವುದರಿಂದ ಸಹಜವಾಗಿಯೇ ಬೀದಿನಾಯಿಗಳು ಅಲ್ಲೇ ಬೀಡುಬಿಡುವಂತಾಗಿದೆ ಎಂದು ಪಾಲಿಕೆ ಭಾವಿಸಿ, ಕೋಳಿ ಮತ್ತು ಮಾಂಸದ ಅಂಗಡಿಗಳ ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸತೊಡಗಿತು. ಇದೀಗ “ಹೊರಗಿನಿಂದ ಬೀದಿನಾಯಿಗಳನ್ನು ತಂದು ಬಿಡುತ್ತಿರಬಹುದು” ಎಂಬ ಹೊಸ ಸಮಸ್ಯೆ ಎದುರಾಗಿದೆ.

ಹಿಡಿದರೂ ಮತ್ತೆ ಹೆಚ್ಚಳ 

     “ನಗರದ ಕೆಲವು ಬಡಾವಣೆಗಳಲ್ಲಿ ಬೀದಿನಾಯಿಗಳನ್ನು ಹಿಡಿಸಲಾಗಿತ್ತು. ಸಹಜವಾಗಿ ಅಲ್ಲಿ ಬೀದಿನಾಯಿಗಳ ಸಂಖ್ಯೆ ಇಳಿಮುಖವಾಗಬೇಕಿತ್ತು. ಅಚ್ಚರಿಯೆಂದರೆ ಕೆಲವೇ ದಿನಗಳಲ್ಲಿ ಆ ಬಡಾವಣೆಗಳಲ್ಲಿ ಬೀದಿನಾಯಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಅಷ್ಟೇ ಅಲ್ಲದೆ ಹೊಸ-ಹೊಸ ಬೀದಿ ನಾಯಿಗಳು ಕಾಣಿಸಿವೆಯೆಂದು ಸ್ಥಳೀಯರು ನಮಗೆ ದೂರಿದ್ದಾರೆ. ಹಾಗಾದರೆ ಇದರ ಅರ್ಥವೇನು? ಬೇರೆ ಊರುಗಳಲ್ಲಿ ಹಿಡಿದ ನಾಯಿಗಳನ್ನು ಯಾವುದೋ ವಾಹನದಲ್ಲಿ ತುಂಬಿಕೊಂಡು ಬಂದು ರಾತ್ರಿ ವೇಳೆಯಲ್ಲಿ ತುಮಕೂರು ನಗರದ ಹೊರವಲಯದ ಬಡಾವಣೆಗಳ ರಸ್ತೆಗಳಲ್ಲಿ ಬಿಟ್ಟು ಹೋಗುತ್ತಿರಬಹುದು ಎಂಬ ಅನುಮಾನ ಮೂಡುತ್ತಿದೆ. ನಡುರಾತ್ರಿ ರಿಂಗ್ ರಸ್ತೆಯಲ್ಲಿ ಈ ರೀತಿ ನಾಯಿಗಳನ್ನು ಬಿಟ್ಟು ಹೋದರೆ ಯಾರಿಗೆ ಗೊತ್ತಾಗುತ್ತದೆ? ಅವುಗಳು ಸಮೀಪದ ಯಾವುದಾದರೊಂದು ಬಡಾವಣೆಯಲ್ಲಿ ಆಶ್ರಯ ಪಡೆಯುವ ಸಂಭವ ಇರುತ್ತದೆ” ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಕೆ. ನಾಗೇಶ್ ಕುಮಾರ್ “ಪ್ರಜಾಪ್ರಗತಿ” ಜೊತೆ ಮಾತನಾಡುತ್ತ ಅಭಿಪ್ರಾಯಪಟ್ಟರು.

      “ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ನಿಯಮಾನುಸಾರ ಸಂತಾನಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಮಾಡಿ, ವಾಪಸ್ ಬಿಡಬೇಕು. ಜೊತೆಗೆ ಅವುಗಳಿಗೆ ಲಸಿಕೆ (ವ್ಯಾಕ್ಸಿನೇಷನ್) ಹಾಕಬೇಕು. ಈ ರೀತಿ ನ್ಯಾಯಾಲಯದ ನಿರ್ದೇಶನದ ಅನುಸಾರ ಬೀದಿನಾಯಿಗಳ ಹಾವಳಿಯನ್ನು ವೈಜ್ಞಾನಿಕವಾಗಿಯೇ ನಿಯಂತ್ರಿಸಬೇಕು. ಈ ನಿಟ್ಟಿನಲ್ಲಿ ಪಾಲಿಕೆ ಕಾರ್ಯೋನ್ಮುಖವಾಗಿದೆ” ಎಂದು ತಿಳಿಸಿದರು.

      “ಮೊದಲಿಗೆ ಕೋಳಿ-ಮಾಂಸದ ಅಂಗಡಿಗಳ ತ್ಯಾಜ್ಯವಿರುವ ಕಡೆ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿರುವುದನ್ನು ಗುರುತಿಸಲಾಗಿತ್ತು. ಆಗ ಸದರಿ ತ್ಯಾಜ್ಯ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮವನ್ನು ಆರಂಭಿಸಲಾಯಿತು. ಆದರೆ ಇದೀಗ ಈ ಹೊಸ ಸಮಸ್ಯೆ ಎದುರಾಗಿದೆ” ಎಂದು ಡಾ.ನಾಗೇಶ್ ಕುಮಾರ್ ಹೇಳಿದರು.

ಸಾರ್ವಜನಿಕರ ಆತಂಕ:

      ತುಮಕೂರು ನಗರಾದ್ಯಂತ ಎಲ್ಲ ಬಡಾವಣೆಗಳಲ್ಲೂ ಬೀದಿನಾಯಿಗಳ ಹಾವಳಿ ಇತ್ತೀಚೆಗೆ ಅಧಿಕಗೊಂಡಿದೆ. ಮುಂಜಾನೆ ಮತ್ತು ಮುಸ್ಸಂಜೆ ವಾಯುವಿಹಾರ ಮಾಡುವವರು ಬೀದಿನಾಯಿಗಳನ್ನು ನೋಡಿ ಆತಂಕಗೊಳ್ಳುತ್ತಿದ್ದಾರೆ. ರಾತ್ರಿ ವೇಳೆ ಪರಸ್ಥಳಗಳಿಂದ ಮನೆಗೆ ಬರುವವರೂ ಗಾಬರಿಗೊಳ್ಳುತ್ತಿದ್ದಾರೆ. ಸೈಕಲ್ ಅಥವಾ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರು ನಾಯಿಗಳು ಎಲ್ಲಿ ಬೆನ್ನಟ್ಟೀತೋ ಎಂಬ ಆತಂಕದಲ್ಲೇ ಸಂಚರಿಸುವಂತಾಗುತ್ತಿದೆ.

      ಅನೇಕ ಜನರು ಬೀದಿನಾಯಿಗಳಿಂದ ಕಚ್ಚಿಸಿಕೊಂಡು ಚಿಕಿತ್ಸೆಗೊಳಗಾಗಿದ್ದಾರೆ. ಅಲ್ಲಲ್ಲಿ ಹುಚ್ಚುನಾಯಿಗಳ ಆತಂಕವೂ ಜನರನ್ನು ಕಾಡುತ್ತಿದೆ. ಬೀದಿನಾಯಿ ನಿಯಂತ್ರಣಕ್ಕೆ ಸಾರ್ವಜನಿಕರ ಆಗ್ರಹ ಹೆಚ್ಚುತ್ತಿದೆ. ಮೊದಲಿನಂತೆ ಈಗ ಬೀದಿನಾಯಿಗಳನ್ನು ಹಿಡಿದು ಕೊಲ್ಲುವಂತಿಲ್ಲ. ಸುಪ್ರಿಂಕೋರ್ಟ್ ತೀರ್ಪಿನನ್ವಯ ಬೀದಿನಾಯಿಗಳನ್ನು ವೈಜ್ಞಾನಿಕವಾಗಿಯೇ ನಿಯಂತ್ರಿಸಬೇಕಾಗಿದೆ. ಹೀಗಾಗಿ ಈ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ.

 
563 ನಾಯಿಗಳನ್ನು ಹಿಡಿಯಲು 6.63 ಲಕ್ಷ ರೂ. ವೆಚ್ಚ:

      ತುಮಕೂರು ಮಹಾನಗರ ಪಾಲಿಕೆಯು ಕಳೆದ ಎರಡು ವರ್ಷಗಳಲ್ಲಿ ಒಟ್ಟು 563 ಬೀದಿನಾಯಿಗಳನ್ನು ಹಿಡಿದು, ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿ ಲಸಿಕೆ ಹಾಕಲು ಒಟ್ಟಾರೆ 6,33,125 ರೂ.ಗಳನ್ನು ವೆಚ್ಚ ಮಾಡಿದೆ.

      2016-17 ನೇ ಸಾಲಿನಲ್ಲಿ ಪಶು ಸಂಗೋಪನಾ ಇಲಾಖೆ ವತಿಯಿಂದ ಈ ಕಾರ್ಯವನ್ನು ಪಾಲಿಕೆ ಕೈಗೊಂಡಿತ್ತು. ಆಗ 350 ಬೀದಿನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಕೈಗೊಂಡು, ಲಸಿಕೆ (ವ್ಯಾಕ್ಸಿನೇಷನ್) ಹಾಕಿ ಬಿಡಲಾಗಿತ್ತು. ಈ ಪ್ರಕ್ರಿಯೆಗೆ ಒಟ್ಟು 4,27,075 ರೂ. ವೆಚ್ಚವಾಗಿದೆ.

      2017-18 ನೇ ಸಾಲಿನಲ್ಲಿ ಮಹಾನಗರ ಪಾಲಿಕೆಯೇ ಖಾಸಗಿಯವರ ಮೂಲಕ ಬೀದಿನಾಯಿಗಳ ವಿರುದ್ಧ ಕಾರ್ಯಾಚರಣೆ ನಡೆಸಿತು. ಆಗ 213 ಬೀದಿನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಕೈಗೊಂಡು, ಲಸಿಕೆ (ವ್ಯಾಕ್ಸಿನೇಷನ್) ಹಾಕಿ ಬಿಡಲಾಗಿತ್ತು. ಈ ಪ್ರಕ್ರಿಯೆಗೆ ಒಟ್ಟು 2,06,050 ರೂ. ವೆಚ್ಚವಾಗಿದೆ.

ಜಾನುವಾರು ಗಣತಿ ಪ್ರಕಾರ:

      ಪಶುವೈದ್ಯಕೀಯ ಇಲಾಖೆಯು 2012 ರಲ್ಲಿ ನಡೆಸಿರುವ 19 ನೇ “ಜಾನುವಾರು ಗಣತಿ”ಯ ಪ್ರಕಾರ :ತುಮಕೂರು ನಗರದಲ್ಲಿ ಒಟ್ಟು 1658 ಬೀದಿನಾಯಿಗಳಿವೆ ಹಾಗೂ 3387 ಸಾಕುನಾಯಿಗಳಿವೆ”. ಈಗ ಆ ಸಂಖ್ಯೆಯಲ್ಲಿ ಸಹಜವಾಗಿಯೇ ಸಾಕಷ್ಟು ವ್ಯತ್ಯಾಸಗಳಾಗಿರುತ್ತವೆ. ಮತ್ತೊಂದು ಜಾನುವಾರು ಗಣತಿ ಆದ ಬಳಿಕ ಈ ಸಂಖ್ಯೆ ದೊರೆಯಬಹುದು.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link