ಬುದ್ದಿಮಾಂಧ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ನಡಸಿದ ಎಎಸ್‍ಐ ಉಮೇಶ್‍ಗೆ 20 ವರ್ಷ ಕಠಿಣ ಜೈಲು ಶಿಕ್ಷೆ, 1 ಲಕ್ಷ ರೂ ದಂಡ

ತುಮಕೂರು:


ತುಮಕೂರು ಹೊರವಲಯದ ಅಂತರಸನಹಳ್ಳಿ ಸೇತುವೆ ಬಳಿ ಬುದ್ದಿಮಾಂಧ್ಯೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ಎಎಸ್‍ಐ ಉಮೇಶ್ ಅವರ ಮೇಲಿನ ಆರೋಪ ಸಾಬೀತಾಗಿದ್ದು ಅವರಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಚ್.ಎಸ್. ಮಲ್ಲಿಕಾರ್ಜುನಸ್ವಾಮಿ ಆದೇಶ ಹೊರಡಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಎಎಸ್‍ಐ ಉಮೇಶ್ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಅಂತರಸನಹಳ್ಳಿ ಬ್ರಿಡ್ಜ್ ಸಮೀಪ ನಡೆದು ಹೋಗುತ್ತಿದ್ದ ಬುದ್ಧಿಮಾಂಧ್ಯೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರೆಂದು ಆರೋಪಿಸಲಾಗಿತ್ತು.

2017ರ ಜನವರಿ 14 ರಂದು ಮಧ್ಯರಾತ್ರಿ ಬುದ್ಧಿಮಾಂಧ್ಯೆಯ ಮೇಲೆ ಅತ್ಯಾಚಾರ ನಡೆದಿತ್ತು. ಈ ಹಿನ್ನೆಲೆಯಲ್ಲಿ ಎಎಸ್‍ಐ ಉಮೇಶ್ ವಿರುದ್ದ ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕವಿತಾ ಅವರು ವಾದಿಸಿದ್ದರು. ಈ ಕುರಿತು ದಿ ನ್ಯೂಸ್ ಕಿಟ್.ಇನ್ ಗೆ ಪ್ರತಿಕ್ರಿಯೆ ನೀಡಿದ ಸರ್ಕಾರಿ ಅಭಿಯೋಜಕಿ ಕವಿತಾ, 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆಪರಾಧಿ ವಿರುದ್ಧ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ. ಅಪರಾಧಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ಹಣವನ್ನು ಸಂತ್ರೆಗೆ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ ಎಂದು ಹೇಳಿದರು.

ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸೇರಿ ಯಾರೂ ಕೂಡ ಇಂತಹ ಕೃತ್ಯವನ್ನು ಮಾಡಬಾರದೆಂಬ ಕಾರಣಕ್ಕೆ ಮತ್ತು ಇಂತಹ ಪ್ರಕರಣಗಳಲ್ಲಿ ಮತ್ತೆ ಮತ್ತೆ ನಡೆಯದಂತೆ ತಡೆಯುವ ಉದ್ದೇಶದಿಂದ ನ್ಯಾಯಾಲಯ ಎಎಸ್‍ಐ ಉಮೇಶ್ ಅವರಿಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಕವಿತಾ ತಿಳಿಸಿದರು.

ಸಂತ್ರಸ್ತೆಗೆ ಆಗಿರುವ ಹಾನಿಯ ಬಗ್ಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮೌಲ್ಯಮಾಪನ ನಡೆಸಿ ಪರಿಹಾರ ಮೊತ್ತವನ್ನು ನಿಗದಿ ಮಾಡುವಂತೆ ನ್ಯಾಯಾಧೀಶ ಎಚ್.ಎಸ್. ಮಲ್ಲಿಕಾರ್ಜುನಸ್ವಾಮಿ ಅವರು ಸೂಚಿಸಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮೌಲ್ಯಮಾಪನ ಮಾಡಿದ ನಂತರ ಸರ್ಕಾರ ಪರಿಹಾರದ ಹಣವನ್ನು ಕೊಡಲಿದೆ ಎಂದು ಹೇಳಿದರು.

ಎಎಸ್‍ಐ ಉಮೇಶ್ ಜೊತೆಯಲ್ಲಿದ್ದ ಜೀಪು ಚಾಲಕನ ವಿರುದ್ಧ ಸಿಆರ್.ಪಿಸಿ ಸೆಕ್ಷನ್ 202 ಮತ್ತು 37ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈತನಿಗೆ ನ್ಯಾಯಾಲಯ ದೋಷಮುಕ್ತಗೊಳಿಸಿ ಇತ್ತೀಚೆಗಷ್ಟೇ ತೀರ್ಪು ನೀಡಿತ್ತು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap