![]()
ಬೆಂಗಳೂರು: ರಸ್ತೆ ಅಪಘಾತದಲ್ಲಿ ಧಾರ್ಮಿಕ ಸಂಸ್ಥೆಯ ಮುಖ್ಯಸ್ಥರು ನಿಧನರಾದರೆ ಆ ಸಂಸ್ಥೆಯು ಪರಿಹಾರ ಪಡೆದುಕೊಳ್ಳುವುದಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಮಠದ ಪ್ರತಿನಿಧಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಮತ್ತು ನ್ಯಾಯಮೂರ್ತಿ ತ್ಯಾಗರಾಜ ಎನ್. ಇನವಲ್ಲಿ ಅವರಿದ್ದ ಕಲಬುರಗಿ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ಮೋಟಾರು ಅಪಘಾತ ಪರಿಹಾರ ಕಾನೂನಿನಡಿಯಲ್ಲಿ ಅವಲಂಬಿತರು ಎಂದರೆ ಕೇವಲ ಕುಟುಂಬ ಸದಸ್ಯರಿಗೆ ಸೀಮಿತವಾಗಿಲ್ಲ ಮತ್ತು ಮೃತರ ಮೇಲೆ ಅವಲಂಬಿತವಾಗಿರುವ ಸಂಸ್ಥೆಗಳನ್ನು ಸಹ ಒಳಗೊಂಡಿದೆ ಎಂದು ಎಂದು ಪೀಠ ಹೇಳಿದೆ. ಮಠದ ಸ್ವಾಮೀಜಿಯು ವೈಯಕ್ತಿಕಕ್ಕಾಗಿ ಕೆಲಸ ಮಾಡುವುದಿಲ್ಲ. ಬದಲಿಗೆ ಸಂಸ್ಥೆಯ ಪ್ರತಿನಿಧಿಯಾಗಿರುತ್ತಾರೆ. ಸ್ವಾಮೀಜಿಯ ಪಾತ್ರ ಮತ್ತು ಸೇವೆಯಿಂದ ಸಂಸ್ಥೆಗೆ ಲಾಭವಾಗುತ್ತಿರುತ್ತದೆ. ಸ್ವಾಮೀಜಿಯ ಸಾವಿನಿಂದ ನಾಯಕತ್ವಕ್ಕೆ ಹಿನ್ನಡೆಯಾಗಿದ್ದು, ಅದು ಇಡೀ ಆಡಳಿತದ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಮಠಾಧಿಪತಿ ಸ್ಥಾನವು ವೈಯಕ್ತಿಕ ಜೀವನೋಪಾಯಕ್ಕಾಗಿ ಸಂಪಾದಿಸುವ ಸಾಮಾನ್ಯ ವ್ಯಕ್ತಿಯ ಸ್ಥಾನವಲ್ಲ, ಬದಲಾಗಿ ಮಠದ ಕಾರ್ಯನಿರ್ವಹಣೆ, ಆಡಳಿತ ಮತ್ತು ನಿರಂತರತೆಯೊಂದಿಗೆ ಅವಿಭಾಜ್ಯ ಸಂಬಂಧ ಹೊಂದಿರುವ ಆಧ್ಯಾತ್ಮಿಕ ಮುಖ್ಯಸ್ಥನ ಸ್ಥಾನವಾಗಿದೆ. ಅವಲಂಬನೆಯನ್ನು ಕೌಟುಂಬಿಕ ಅವಲಂಬನೆಯೊಂದಿಗೆ ಮಾತ್ರ ಸೀಮಿತಗೊಳಿಸಿ, ಸಾಂಸ್ಥಿಕ ಅವಲಂಬನೆಯನ್ನು ಕಡೆಗಣಿಸಿರುವುದು ನ್ಯಾಯಮಂಡಳಿಯ ದೋಷವಾಗಿದೆ. ಮಠದ ಪ್ರತಿನಿಧಿಯು ಅರ್ಜಿ ಸಲ್ಲಿಸಿದ ದಿನದಿಂದ ಹಣ ಪಾವತಿಸುವವರೆಗೂ ಪರಿಷ್ಕೃತ 4,74,330 ರೂ.ಗಳೊಂದಿಗೆ ಮತ್ತು ಶೇ. 6ರಷ್ಟು ಬಡ್ಡಿ ಪಡೆಯಲು ಅರ್ಹರಾಗಿದ್ದಾರೆ. ಅಂತೆಯೇ ನಾಲ್ಕು ವಾರಗಳಲ್ಲಿ ವಿಮಾ ಕಂಪನಿಯು ಪರಿಹಾರ ಪಾವತಿಸಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ : 2011ರಲ್ಲಿ ಸುತ್ರೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ತಮ್ಮ ಜೀಪಿನಲ್ಲಿ ಪ್ರಯಾಣಿಸುತ್ತಿದ್ದಾಗ ಟ್ರಕ್ ಗೆ ಡಿಕ್ಕಿಯಾಗಿ ಸಾವನ್ನಪ್ಪಿದ್ದರು. ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣ 1.2 ಲಕ್ಷ ಆಸ್ತಿಯ ನಷ್ಟ ಮತ್ತು ಅಂತ್ಯಕ್ರಿಯೆ ವೆಚ್ಚವನ್ನು ಪಾವತಿಸಲು ಆದೇಶಿಸಿತ್ತು. ಆದರೆ, ಸ್ವಾಮೀಜಿಗೆ ಕುಟುಂಬವಿಲ್ಲ ಎಂದು ಮಠದ ಮುಖ್ಯಸ್ಥರ ಸಾವಿನ ಅವಲಂಬಿತರಿಗೆ ಪರಿಹಾರ ಪಾವತಿಸಲು ನಿರಾಕರಿಸಿತ್ತು. ಇದನ್ನು ಹೈಕೋರ್ಟ್ನಲ್ಲಿ ಮಠದ ಪ್ರತಿನಿಧಿಗಳು ಪ್ರಶ್ನಿಸಿದ್ದರು. ವಿಚಾರಣೆ ವೇಳೆ ಮಠದ ಪರ ವಕೀಲರು, ಸ್ವಾಮೀಜಿಯು ಮಠದ ಸೇವೆಯಲ್ಲಿ ನಿರತರಾಗಿದ್ದು, ಸಂಸ್ಥೆಗೆ ಅವರ ಸಾವಿನಿಂದ ಹಾನಿಯಾಗಿದೆ. ಹೀಗಾಗಿ, ಮುಖ್ಯಸ್ಥರ ನಿಧನದಿಂದ ಉಂಟಾಗಿರುವ ಅಲಂಬನೆಯ ಹಾನಿಗೆ ಪರಿಹಾರ ಪಡೆಯಲು ಅರ್ಹವಾಗಿದೆ ಎಂದಿದ್ದರು.
ವಿಮಾ ಕಂಪನಿಯ ಪರ ವಕೀಲರು, ಮಠದ ಉತ್ತರಾಧಿಕಾರಿಯನ್ನು ಅವಲಂಬಿತರು ಎಂದು ಪರಿಗಣಿಸಲಾಗದು, ಸ್ವಾಮೀಜಿ ಸ್ವತಂತ್ರ ತಪಸ್ವಿ ಜೀವನವನ್ನು ನಡೆಸಿದ್ದರು ಎಂದು ವಾದಿಸಿದ್ದರು.







