ಕೋಟೆ ಆಂಜನೇಯ ವೃತ್ತದಲ್ಲಿ ಅಡ್ಡಾದಿಡ್ಡಿ ಸಂಚಾರ….!

ತುಮಕೂರು

ನಿಲ್ದಾಣದಲ್ಲಿ ನಿಲ್ಲದ ಬಸ್‍ಗಳು : ಆಟೋಗಳಿಂದ ತಪ್ಪದ ಕಿರಿಕಿರಿ

-ಚಿದಾನಂದ್ ಹುಳಿಯಾರು

        ನಗರದ ಬಸ್ ನಿಲ್ದಾಣಕ್ಕೆ ಸಮೀಪವಿರುವ ಕೋಟೆ ಆಂಜನೇಯ ವೃತ್ತದ ರಸ್ತೆಯಲ್ಲಿ ವಾಹನಗಳ ಅಡ್ಡಾದಿಡ್ಡಿ ಸಂಚಾರ ಮಿತಿ ಮೀರಿದೆ. ಎಲ್ಲೆಂದರಲ್ಲಿ ಆಟೋಗಳ ನಿಲ್ಲುವಿಕೆ, ಸಿಗ್ನಲ್ ಹಾಗೂ ನಡು ರಸ್ತೆಯಲ್ಲಿಯೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಬಸ್‍ಗಳು ನಿಲ್ಲುವುದರಿಂದ ಪಾದಚಾರಿಗಳು ಮತ್ತು ಇತರೆ ವಾಹನ ಸವಾರರು ಹೈರಾಣಾಗಿ ಹೋಗಿದ್ದಾರೆ.

      ಸದರಿ ವೃತ್ತವು ಶಿರಾ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತದೆಯಲ್ಲದೆ; ಮಧುಗಿರಿ, ಕೊರಟಗೆರೆ, ಪಾವಗಡ, ಗೌರಿಬಿದನೂರಿಗೂ ಮಾರ್ಗ ಬೆಸೆಯುತ್ತದೆ. ಹಾಗಾಗಿ ಈ ವೃತ್ತದಲ್ಲಿ ಸದಾ ಕಾಲ ವಾಹನ ದಟ್ಟಣೆ ಇದ್ದದ್ದೆ. ಶಿರಾ ಕಡೆಗೆ ಸರ್ಕಾರಿ ಬಸ್‍ಗಳ ಸಂಚಾರ ಹೆಚ್ಚಿದ್ದರೆ, ಮಧುಗಿರಿ ಕಡೆ ಖಾಸಗಿ ಬಸ್‍ಗಳ ಸಂಚಾರ ಹೆಚ್ಚಿದ್ದು ಕಲೆಕ್ಷನ್ ಸಮಸ್ಯೆ ಇದ್ದಂತಿಲ್ಲ. ಈ ವೃತ್ತವು ಹೆಚ್ಚು ಊರುಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಇತರೆ ಖಾಸಗಿ ವಾಹನಗಳ ಸಂಚಾರವು ಅಧಿಕ.

ಆಯಕಟ್ಟಿನ ಮಾರ್ಗ ಈ ವೃತ್ತ :

      ಜಿಲ್ಲಾಧಿಕಾರಿ ಕಚೇರಿ, ನ್ಯಾಯಾಲಯ, ಡಿಎಚ್‍ಓ, ಜಿಲ್ಲಾ ಕೇಂದ್ರ ಅಂಚೆ, ಉಪ ನೋಂದಣಾಧಿಕಾರಿ ಕಚೇರಿ ಸೇರಿದಂತೆ ಇತರೆ ಹಲವು ಹತ್ತು ಪ್ರಮುಖ ಕಚೇರಿಗಳಿಗೆ ಈ ವೃತ್ತದ ಮೂಲಕವೇ ಹೋಗಬೇಕು ಹಾಗೂ ನಗರದ ಮುಖ್ಯ ಬಸ್ ನಿಲ್ದಾಣ, ಅಮಾನಿಕರೆ ಪಾರ್ಕ್, ಗಾಜಿನ ಮನೆ, ಚರ್ಚ್ ಸರ್ಕಲ್, ಮಂಡಿಪೇಟೆ, ಹೊರಪೇಟೆ, ಅಗ್ರಹಾರ, ಗಾರ್ಡನ್‍ರಸ್ತೆ, ಕೋತಿತೋಪು, ಹನುಮಂತಪುರ, ಊರ್ಡಿಗೆರೆ, ಶಿರಾ ಗೇಟ್, ಅಂತರಸನಹಳ್ಳಿ ಮಾರುಕಟ್ಟೆಗೆ ಹೋಗುವ ವಾಹನಗಳು ಈ ವೃತ್ತ ಬಳಸಿಯೆ ಸಂಚರಿಸಬೇಕಾಗಿದ್ದು ಇಲ್ಲಿನ ವೃತ್ತದ ರಸ್ತೆ ಸದಾ ಕಾಲ ಗಿಜಿಗುಡುತ್ತಿದ್ದು ಆಯಕಟ್ಟಿನ ಮಾರ್ಗ ಎನಿಸಿದೆ.

ಬಸ್‍ಗಳಿಂದ ತಪ್ಪದ ಬವಣೆ :

      ಈ ವೃತ್ತದ ಮೂಲಕ ಹಾದು ಹೋಗುವ ಬಸ್‍ಗಳು ಆಂಜನೇಯ ಪ್ರತಿಮೆಯಿಂದ ಮುಂದೆ 100 ಮೀಟರ್ ದೂರದಲ್ಲಿರುವ ಮರದ ಬಳಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು, ಆದರೇ ಸರ್ಕಾರಿ ಬಸ್‍ಗಳು ಸೇರಿದಂತೆ ಯಾವುದೇ ಬಸ್‍ಗಳು ಇಲ್ಲಿ ನಿಲ್ಲುವುದಿಲ್ಲ. ಬಹುತೇಕ ಖಾಸಗಿ ಬಸ್‍ಗಳು ಆಂಜನೇಯ ದೇವಾಲಯದ ಪಕ್ಕದ ರಸ್ತೆಯಲ್ಲಿಯೆ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತವೆ. ಇದರಿಂದ ಬಸ್ ನಿಲ್ದಾಣ, ಗುಂಚಿ ಸರ್ಕಲ್, ಕೋತಿ ತೋಪು ಹಾಗೂ ಹೊರಪೇಟೆ ಕಡೆಯಿಂದ ಈ ಮಾರ್ಗವಾಗಿ ಬರುವ ಇತರೆ ವಾಹನ ಸವಾರರು ರಸ್ತೆ ದಾಟಲು ಭಾರಿ ಬವಣೆ ಅನುಭವಿಸಬೇಕಾಗುತ್ತದೆ. ದಿನ ಬೆಳಗಾದರೆ ಬಸ್‍ಗಳಿಂದ ಬವಣೆ ಅನುಭವಿಸುವ ಇತರೆ ವಾಹನ ಸವಾರರು ಬಸ್ ಏಜೆಂಟರು, ಕಂಡಕ್ಟರ್, ಡ್ರೈವರ್‍ಗಳ ಬಳಿ ಜಗಳಕ್ಕೆ ನಿಲ್ಲುತ್ತಿರುವುದು ಮಾಮೂಲಿ ದೃಶ್ಯವಾಗಿದೆ.

ಆಟೋಗಳ ಆಟಾಟೋಪ :

     ಆಟೋಗಳಿಂದಲೂ ಪ್ರಯಾಣಿಕರಿಗೆ, ಇತರೆ ವಾಹನ ಸವಾರರಿಗೆ ಕಿರಿಕಿರಿ ಸಾಮಾನ್ಯವಾಗಿದೆ. ನಗರದ ಇತರೆ ಭಾಗಗಳಿಂದ ಈ ಮಾರ್ಗದಲ್ಲಿ ಸಾಗುವ ಆಟೋಗಳು ಇಲ್ಲಿನ ಆಟೋ ನಿಲ್ದಾಣದ ಬಳಿ ಬಸ್‍ಗಾಗಿ ಕಾಯುವ ಪ್ರಯಾಣಿಕರನ್ನು, ಇತರೆ ಪ್ರಯಾಣಿಕರನ್ನು ಸೆಳೆಯಲು ಜೋರಾಗಿ ಹಾರ್ನ್ ಮಾಡುತ್ತಾ, ತಾವು ಹೋಗುವ ಏರಿಯಾಗಳ ಹೆಸರು ಕೂಗುತ್ತಾ ಪ್ರಯಾಣಿಕರಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದರೂ ಕೂಗಿದ್ದೂ ಕೂಗಿದ್ದೆ. ಈ ಸಂದರ್ಭದಲ್ಲಿ ಬಸ್‍ಗಾಗಿ ಕಾಯುವ ಕೆಲವರು “ಇಲ್ಲಿ ಬಸ್ ನಿಲ್ಲುತ್ತದೆ, ಆಟೋ ಮುಂದಕ್ಕೆ ನಿಲ್ಲಿಸಿ” ಎಂದರೆ ಅಲ್ಲಿಗೆ ಅವರ ಕಥೆ ಮುಗಿಯಿತು.

     ಆಟೋ ಚಾಲಕರು ಅವರ ಜೊತೆ ಊರು-ಮನೆ ಒಂದಾಗುವಂತೆ ಜಗಳಕ್ಕೆ ನಿಲ್ಲುತ್ತಾರೆ. ಈ ನಡುವೆ ಕೆಲ ಆಟೋ ಚಾಲಕರು “ಸರ್ಕಾರಿ ಬಸ್‍ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದರಿಂದ ಆಟೋ ಹತ್ತದವರೆ ಇಲ್ಲವಾಗಿದ್ದಾರೆ, ನಿಮಗೇನ್ರಿ ಗೊತ್ತು ನಮ್ಮ ಕಷ್ಟ, ಹೆಂಡ್ತಿ-ಮಕ್ಕಳನ್ನು ಹೇಗೆ ಸಾಕೋದ್ರಿ” ಎಂದು ಹೇಳಿ ತಮಗೆ ಬುದ್ಧಿ ಹೇಳಲು ಬರುವವರ ಬಾಯಿಯನ್ನೆ ಬಂದ್ ಮಾಡಿಬಿಡುತ್ತಾರೆ. ಆಟೋದವರಿಂದಲೂ ಸುತ್ತಮುತ್ತಲ ಮಾರ್ಗವಾಗಿ ಬರುವ ವಾಹನ ಸವಾರರಿಗೆ ಸಮಸ್ಯೆ ತಪ್ಪಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap