ಹಾನಗಲ್ಲ :
ದೇಶದ ಪ್ರಧಾನಿ ನರೆಂದ್ರ ಮೋದಿ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರ ಕಾರಣದಿಂದ ಬೆಲೆಯೇರಿಕೆಯಿಂದಾಗಿ ದೇಶದ ಹಾಗೂ ರಾಜ್ಯದ ಯುವಜನತೆ ಇಂದು ತೊಂದರೆ ಅನುಭವಿಸುತ್ತಿದ್ದಾರೆ. ಮೋದಿ, ಮೆಹೆಂಗಾಯಿ ಎರಡೂ ದೇಶಕ್ಕೆ ಹಾನಿಕಾರಕವಾಗಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಟೀಕಿಸಿದರು.
ಹಾನಗಲ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಪೆಟ್ರೋಲ್ 110, ಡೀಸೆಲ್ 101, ಗ್ಯಾಸ್ 950 ರೂ. ಸ್ವಾತಂತ್ರ್ಯ ಭಾರತದಲ್ಲಿ ಅತಿ ಹೆಚ್ಚಾಗಿದೆ. ಇದೇ ರೀತಿ ಸಿಮೆಂಟ್, ಕಬ್ಬಿಣ, ಎಂಸ್ಯಾಂಡ್, ಅಡುಗೆ ಎಣ್ಣೆ, ಬೇಳೆಕಾಳುಗಳು ಬೆಲೆ ಗಗನಕ್ಕೇರಿದೆ. ಮ್ಯಾಗಿ ಪ್ಯಾಕೇಟ್ ನಿಂದಲೂ 10 ಗ್ರಾಂ ಕಡಿಮೆ ಮಾಡಲಾಗಿದೆ. ಪೆಟ್ರೋಲ್, ಡೀಸೆಲ್ ತೆರಿಗೆಯಿಂದ ಕೇಂದ್ರ ಸರ್ಕಾರ 80 ಲಕ್ಷ ಕೋಟಿ ರೂ. ಕಳೆದ ಏಳು ವರ್ಷಗಳಲ್ಲಿ ಕೇಂದ್ರ ಸರ್ಕಾರ ತೆರಿಗೆ ಮೂಲಕ ಲೂಟಿ ಮಾಡಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಕಬ್ಬಿಗೆ ಹೆಚ್ಚಿನ ಬೆಲೆ ನಿಗದಿ ಮಾಡಿತ್ತು. ಆದರೆ ಬಿಜೆಪಿಗೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿ, ರಾಜ್ಯಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಹೀಗಾಗಿ ಯುವಕರು ಬದಲಾವಣೆಗೆ ಪಣ ತೊಡಬೇಕು ಎಂದರು.
ಮಾಜಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಅವರು ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಇದು ಅವರ ಬೌದ್ಧಿಕ ದಿವಾಳಿತನ , ವಿಕೃತ ಮನಸ್ಸನ್ನು ತೋರ್ಪಡಿಸುತ್ತದೆ. ಸಾರ್ವಜನಿಕ ಜೀವನದಲ್ಲಿ ತಮ್ಮ ಮರ್ಯಾದೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಎಚ್.ಕೆ.ಪಾಟೀಲ್ ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ, ಉಪಾದ್ಯಕ್ಷ ಸಲೀಂ ಅಹಮ್ಮದ್, ಮಾಜಿ ಸಚಿವರುಗಳಾದ ಕೆ,ಬಿ,ಕೊಳಿವಾಡ, ಮನೋಹರ ತಹಶೀಲ್ದಾರ, ಎಚ್.ಆಂಜನೇಯ, ಇನ್ನು ಅನೇಕ ಮುಖಂಡರುಗಳಿದ್ದರು.