ಹಾವೇರಿ
ಬೇಸಿಗೆಯ ಸಂದರ್ಭದಲ್ಲಿ ನೀರಿನ ಕೊರತೆಯಾಗದಂತೆ ಕುಡಿಯುವ ನೀರು ಪೂರೈಕೆಮಾಡಬೇಕು. ಬರ ನಿರ್ವಹಣೆ, ಕುಡಿಯುವ ನೀರಿಗಾಗಿ ಯಾವುದೇ ಅನುದಾನದ ಕೊರತೆ ಇಲ್ಲ ಎಂದು ರಾಜ್ಯ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ.ಆರ್.ವಿಶಾಲ್ ಅವರು ಹೇಳಿದರು.ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೇಸಿಗೆಯ ಕುಡಿಯುವ ನೀರು, ಉದ್ಯೋಗ ಖಾತ್ರಿ, ನೈರ್ಮಲ್ಯ ಹಾಗೂ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.
ಕುಡಿಯುವ ನೀರಿಗೆ ಯಾವುದೇ ಹಣದ ಸಮಸ್ಯೆ ಇಲ್ಲ. ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ದಾಖಲೀಕರಣಗೊಳಿಸಿ ಮನೆ ಮನೆ ಟ್ಯಾಪ್‍ಗಳಿಗೆ ನೀರು ಹರಿಸಲು ಆದ್ಯತೆ ನೀಡಿ. ಕುಡಿಯುವ ನೀರಿನ ತುಂಡು ಗುತ್ತಿಗೆಗೆ ಹೆಚ್ಚಿನ ಆದ್ಯತೆ ನೀಡದೆ ಟೆಂಡರ್ ಮೂಲಕವೇ ಕಾಮಗಾರಿ ಕೈಗೊಳ್ಳಿ. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ ಎಂದು ಹೇಳಿದರು.
ರಾಷ್ಟ್ರೀಯ ಗ್ರಾಮೀಣ ನೀರು ಸರಬರಾಜು ಯೋಜನೆ, ಬಹುಹಳ್ಳಿ ನೀರು ಸಬರಾಜು ಯೋಜನೆ, ಕುಡಿಯುವ ನೀರಿನ ಯೋಜನೆಗಳನ್ನು ಕನಿಷ್ಠ ವಾರಕ್ಕೊಮ್ಮೆ ಪರಿಶೀಲನೆ ನಡೆಸಲು ಜಿ.ಪಂ.ಮುಖ್ಯ ಕಾರ್ಯನಿರ್ವಾ ಹಣಾಧಿಕಾರಿಗಳಿಗೆ ಸಲಹೆ ನೀಡಿದರು. ನೀರಿನ ಕೊರತೆ ಇರುವ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳ ವ್ಯವಸ್ಥೆಮಾಡಿರುವ ಜಿಲ್ಲಾಡಳಿತದ ಕ್ರಮಕುರಿತಂತೆ ಮಾಹಿತಿ ಪಡೆದುಕೊಂಡರು.
ಶುದ್ಧ ನೀರಿನ ಘಟಕಗಳು ಬಹು ದಿನಗಳಿಂದ ದುರಸ್ಥಿಯಲ್ಲಿದ್ದರೆ ರಿಪೇರಿಗೆ ಹೆಚ್ಚಿನ ಅನುದಾನ ಅಗತ್ಯವಿದ್ದರೆ ಅಂತಹ ಶುದ್ಧ ನೀರಿನ ಘಟಕಗಳನ್ನು ತೆಗೆದುಹಾಕಿ ಹೊಸ ಘಟಕಗಳನ್ನು ಆರಂಭಿಸಿ ಎಂದು ಸಲಹೆ ನೀಡಿದರು. ಜೂನ್ ವರೆಗೆ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮವಹಿಸಿ ಮೇವಿನ ಕಿಟ್‍ಗಳನ್ನು ವಿತರಿಸಿ ಉದ್ಯೋಗ ಖಾತ್ರಿಯಡಿ ಕೂಲಿ ಕಾಂಪ್ಯೋನೆಂಟಿಗೆ ಹೆಚ್ಚಿನ ಆದ್ಯತೆ ನೀಡಿ. ಕನಿಷ್ಠ 70 ರಷ್ಟು ಕೂಲಿಗಾಗಿ ಪಾವತಿ ಹಾಗೂ ಶೇ.30 ರಷ್ಟು ಮಟರಿಯಲ್ ಕಾಂಪೋನೆಂಟ್‍ಗೆ ಆದ್ಯತೆ ನೀಡಿ ಕಾರ್ಯಕ್ರಮ ಹಾಕಿಕೊಳ್ಳಿ ಎಂದು ಸೂಚಿಸಿದರು. ಬರ ನಿರ್ವಹಣೆ ಕುರಿತಂತೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಮಾಹಿತಿ ಪಡೆದರು.
ಅಸಮಾಧಾನ: ನೀರಿನ ಗುಣಮಟ್ಟದ ಪರಿಶೀಲನೆ ಹಾಗೂ ಪ್ರಯೋಗಾಲಯಕ್ಕೆ ಶ್ಯಾಂಪಲ್‍ಗಳನ್ನು ಕಳುಹಿಸಿ ಪರೀಕ್ಷಿಸಿದ ಬಗ್ಗೆ ಯಾರೂ ಕ್ರಮಕೈಗೊಳ್ಳದ ಬಗ್ಗೆ ತೀವ್ರ ಅಸಮಾಧಾನಗೊಂಡ ಉಸ್ತುವಾರಿ ಕಾರ್ಯದರ್ಶಿಗಳು ಅಂತರ್ಜಲ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಇಂಜನೀಯರಗಳಿಗೆ ತೀವ್ರ ತರಾಟೆ ತೆಗೆದುಕೊಂಡರು. ಗುಣಮಟ್ಟದ ನೀರು ಪೂರೈಕೆ ಮಾಡಿದರೆ ಜನರ ಜೀವನ ಮಟ್ಟದ ಸುಧಾರಿಸುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಗ್ರಾಮೀಣ ಕುಡಿಯುವ ನೀರಿನ ಗುಣಮಟ್ಟ, ಫ್ಲೋರೈಡ್ ಅಂಶ ಕುರಿತಂತೆ ಕಾಲಕಾಲಕ್ಕೆ ಪರಿಶೀಲನೆ ನಡೆಸಿ ಶುದ್ಧ ನೀರಿನ ಘಟಕಗಳ ನಿರ್ವಹಣೆಯನ್ನು ಲೋಪವಿಲ್ಲದಂತೆ ನಿರ್ವಹಿಸಬೇಕು. ಗುಣಮಟ್ಟದ ನೀರಿನ ಕುರಿತಂತೆ ಶುದ್ಧೀಕರಣ ಘಟಕಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಪ್ರಯೋಗಾಲಯಕ್ಕೆ ಶ್ಯಾಂಪ್‍ಗಳನ್ನು ಕಳುಹಿಸಿಕೊಡಬೇಕು ಎಂದು ನೀರು ಮತ್ತು ನೈರ್ಮಲ್ಯ ಇಲಾಖೆ ಅಭಿಯಂತರುಗಳಿಗೆ ಹಾಗೂ ಎಲ್ಲ ತಾಲೂಕು ಪಂಚಾಯತಿ ಇ.ಓ.ಗಳಿಗೆ ಹಾಗೂ ಪಿ.ಡಿ.ಓ.ಗಳಿಗೆ ಸೂಚನೆ ನೀಡಿದರು.
ನೀರಿನ ಗುಣಮಟ್ಟದ ಪರೀಕ್ಷಾ ಕಿಟ್‍ಗಳನ್ನು ಗ್ರಾಮ ಪಂಚಾಯತಿಗಳಿಗೆ ಪೂರೈಸಿದ ಬಗ್ಗೆ ಹಾಗೂ ನೀರಿನ ಗುಣಮಟ್ಟ ಪರಿಶೀಲನೆಗೆ ಯಾವ ಯಾವ ಮಾನದಂಡ ಅನುಸರಿಸುತ್ತಿರಿ. ಯಾವ ಕ್ರಮಕೈಗೊಳ್ಳಲಾಗುತ್ತದೆ, ಎಲ್ಲಿ ಪ್ರಯೋಗಾಲವಿದೆ ಎಂಬ ಮಾಹಿತಿಯನ್ನು ನೀಡುವಲ್ಲಿಯೂ ಅಧಿಕಾರಿಗಳು ವಿಫಲವಾದಾಗ 65 ಕೋಟಿ ರೂ.ಗಳನ್ನು ಕುಡಿಯುವ ನೀರಿಗಾಗಿ ಒದಗಿಸಲಾಗುತ್ತದೆ. ನೀರಿನ ಗುಣಮಟ್ಟದ ಬಗ್ಗೆ ಒಬ್ಬರಿಗೂ ಕಾಳಜಿ ಇಲ್ಲ.
ಯಾರೊಬ್ಬರೂ ನೀರಿನ ಶುದ್ಧೀಕರಣ ಘಟಕಗಳಿಗೆ ಭೇಟಿ ನೀಡಿಲ್ಲ, ನೀರಿನ ಗುಣಮಟ್ಟ ಪರಿಶೀಲನೆ ಬಗ್ಗೆ ಪ್ರಾಥಮಿಕ ಮಾಹಿತಿಯೂ ತಮಗಿಲ್ಲ. ಶೇಮ್ ಟೂ ಯೂ ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರಿಕೆ ವಹಿಸಬೇಕು. ಕಡ್ಡಾಯವಾಗಿ ನೀರಿನ ಗುಣಮಟ್ಟ ವೈಜ್ಞಾನಿಕ ಮಾದರಿಯಲ್ಲಿ ಪರಿಶೀಲಿಸಬೇಕು. ಇಂಜನೀಯರುಗಳು, ಪಿ.ಡಿ.ಓ. ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾ ಹಣಾಧಿಕಾರಿಗಳು ನೀರಿನ ಶುದ್ಧೀಕರಣ ಘಟಕಗಳಿಗೆ ಭೇಟಿ ನೀಡುವಂತೆ ತಾಕೀತು ಮಾಡಿದರು.
ತ್ಯಾಜ್ಯ ಘಟಕ: ಗ್ರಾಮೀಣ ಪ್ರದೇಶದಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ನಿರ್ವಹಣೆ ಕುರಿತಂತೆ ಆದ್ಯತೆಯ ಮೇಲೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳಿ. ಪರಿಣಾಮಕಾರಿಯಾಗಿ ತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸಿ ಮಾದರಿಗಾಗಿ ಪ್ರತಿ ತಾಲೂಕಿನ ಐದು ಗ್ರಾಮಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ತಲಾ 1 ಗ್ರಾಮದಲ್ಲಿ ದ್ರವತ್ಯಾಜ್ಯ ವಿಲೇವಾರಿ ಘಟಕಗಳನ್ನು ತೆರೆಯಬೇಕು. ಹಸಿ ಕಸ, ಒಣ ಕಸ ಹಾಗೂ ಮನೆಯ ಅಪಾಯಕಾರಿ ತ್ಯಾಜ್ಯಗಳನ್ನು ಸಂಗ್ರಹಿಸಿ ಅತ್ಯಂತ ವೈಜ್ಞಾನಿಕವಾಗಿ ವಿಲೇವಾರಿಗೊಳಿಸಬೇಕು. ಈ ಕುರಿತಂತೆ ಜನರ ಮಾನಸಿಕ ಬದಲಾವಣೆಗೆ ಮುಂದಾಗಬೇಕು ಎಂದು ಹೇಳಿದರು.
ಸಮುದಾಯ ಶೌಚಾಲಯ: ಈಗಾಗಲೇ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಣೆ ಮಾಡಲಾಗಿದೆ. ಆದ್ಯಾಗ್ಯೂ ಶೌಚಾಲಯಗಳ ಬಳಕೆ ಕುರಿತಂತೆ ಜಾಗೃತಿ ಮೂಡಿಸಬೇಕು. ಸಮುದಾಯ ಶೌಚಾಲಯಗಳನ್ನು ನಿರ್ಮಿಸುವಾಗ ಅತ್ಯವಶ್ಯವಿದ್ದಾಗ ಮಾತ್ರ ಸಮುದಾಯ ಶೌಚಾಲಯಕ್ಕೆ ಆದ್ಯತೆ ನೀಡಬೇಕು ಹಾಗೂ ಹೊಸ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಲು ಕ್ರಮವಹಿಸಬೇಕು. ಸಮುದಾಯ ಶೌಚಾಲಯ ಸಂದರ್ಭದಲ್ಲಿ ಅದರ ನಿರ್ವಹಣೆ ಬಹಳ ಮಹತ್ವದಾಗಿದ್ದು, ಎರಡು ಕುಟುಂಬಕ್ಕೆ ಒಂದು ಮಹಿಳಾ ಮಹಿಳಾ ಶೌಚಾಲಯ ಹಾಗೂ ಒಂದು ಪುರುಷರ ಬಳಕೆಗೆ ಶೌಚಾಲಯದ ಕೀಗಳನ್ನು ಹಸ್ತಾಂತರಿಸಿ ಅದರ ನಿರ್ವಹಣೆಯನ್ನು ಆ ಕುಟುಂಬಗಳೆ ಮಾಡಬೇಕು. ಈ ಕುರಿತಂತೆ ಕ್ರಮವಹಿಸಿ ಎಂದು ಸೂಚಿಸಿದರು.
ಶಾಲಾ ಶೌಚಾಲಯ: ಶಾಲೆಗಳಿಗೆ ಕುಡಿಯುವ ನೀರು ಹಾಗೂ ಶೌಚಾಲಯಕ್ಕೆ ಯಾವುದೇ ಅನುದಾನದ ಕೊರತೆ ಇರುವುದಿಲ್ಲ. ನಿಮಗೆ ಎಷ್ಟು ಹಣ ಬೇಕೋ ಅಷ್ಟು ಹಣ ನೀಡುವೆ. ಈ ಕುರಿತಂತೆ ಪ್ರಸ್ತಾವನೆ ಸಲ್ಲಿಸಿ. ಶಾಲಾ ಮಕ್ಕಳಿಗೆ ಸ್ವಚ್ಛತೆ ಕುರಿತಂತೆ ಮನವರಿಕೆ ಮಾಡಿಕೊಡಲು ಸೂಚಿಸಿದರು.
ಗ್ರಾಮೀಣ ಆರೋಗ್ಯ ನೈರ್ಮಲ್ಯ ಹಾಗೂ ಪೌಷ್ಠಿಕ ಸಮಿತಿಗಳನ್ನು ಜಾಗೃತಿಗೊಳಿಸಬೇಕು. ಈ ಕಾರ್ಯಕ್ರಮಗಳನ್ನು ವಿವಿಧ ಇಲಾಖೆಯ ಸಮನ್ವಯತೆಯಿಂದ ಅನುಷ್ಠಾನಗೊಳಿಸಬೇಕು. ಕಾಲಕಾಲಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಸಭೆ ನಡೆಸಿ ನಿಗಾವಹಿಸಬೇಕು ಎಂದು ಹೇಳಿದರು.
ಆಹಾರ ಪೂರೈಕೆ ಮಹಿಳೆಯರಿಗೆ: ಅಂಗನವಾಡಿ ಪೌಷ್ಠಿಕ ಆಹಾರ ಪೂರೈಕೆ, ಮಹಿಳಾ ಸಂಘನೆಗಳಿಗೆ ವಹಿಸಬೇಕು. ಇದರಿಂದ ಗುಣಮಟ್ಟದ ಆಹಾರ ಪದಾರ್ಥಗಳು ಪೂರೈಕೆಯಾಗಿ ಸೋರಿಕೆ ಕಡಿಮೆಯಾಗುತ್ತದೆ. ಈ ಕುರಿತಂತೆ ಕ್ರಮವಹಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
ನೇಮಕಾತಿ ಪ್ರಕ್ರಿಯೆ: ಅಂಗನವಾಡಿಯಲ್ಲಿ ವಯೋನಿವೃತ್ತಿಯಿಂದ ತೆರವಾಗುವ ಮೂರು ತಿಂಗಳ ಮುಂಚಿತವಾಗಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಸಲಹೆ ಮಾಡಿದರು.
ಕ್ಯಾನ್ಸರ್ ಜಾಗೃತಿ: ಗ್ರಾಮೀಣ ಮಟ್ಟದಲ್ಲಿ ಸ್ವಚ್ಛತೆ, ಆರೋಗ್ಯ, ನೈರ್ಮಲ್ಯದ ಜೊತೆಗೆ ವಿವಿಧ ಕ್ಯಾನ್ಸ್‍ರ ರೋಗಗಳ ತಪಾಸಣೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಆರೋಗ್ಯ ಕಾರ್ಯಕ್ರಮಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಬೇಕು ಎಂದು ಸೂಚನೆ ನೀಡಿದರು.
ತಾಯಿ ಮತ್ತು ಮಗು ಮರಣ ಪ್ರಮಾಣ ತಗ್ಗಿಸುವುದು, ಪ್ರತಿ ತಿಂಗಳು ಕನಿಷ್ಠ 18 ರಿಂದ 20 ರಕ್ತ ಸಂಗ್ರಹ ಶಿಬಿರಗಳನ್ನು ನಡೆಸುವುದು, ರಕ್ತದ ಕೊರತೆಯಾಗದಂತೆ ಕ್ರಮವಹಿಸುವುದು, ಜಿಲ್ಲಾ ಮತ್ತು ತಾಲೂಕಾ ಆಸ್ಪತ್ರೆಯಲ್ಲಿ ಹೆಚ್ಚಿನ ಶಸ್ತ್ರ ಚಿಕಿತ್ಸಾ ಚಟುವಟಿಕೆಗಳನ್ನು ಕೈಗೊಂಡು ಜನರಿಗೆ ಅನುಕೂಲ ಮಾಡಿಕೊಡಲು ಸೂಚನೆ ನೀಡಿದರು.
ತ್ವರಿತ ವಿಲೇವಾರಿ: ಕಂದಾಯ ಇಲಾಖೆಯ ನ್ಯಾಯಾಲಯ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಿ, ಮರಣ ನೋಂದಣಿ ದಾಖಲಾತಿ ಕುರಿತಂತೆ ಅಭಿಯಾನದ ಮಾದರಿಯಲ್ಲಿ ಕಂದಾಯ ಇಲಾಖೆಯ ವತಿಯಿಂದ ಎಲ್ಲ ತಹಶೀಲ್ದಾರಗಳು ಹಾಗೂ ಉಪ ವಿಭಾಗಾಧಿಕಾರಿಗಳು ಕಾರ್ಯಕ್ರಮಗಳನ್ನು ಹಾಕಿಕೊಳ್ಳಿ. ಬೋಗಸ್ ಫೆನ್‍ಶೆನ್‍ದಾರರು, ಪಡಿತರದಾರರು, ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡವರನ್ನು ಕಡಿಮೆಮಾಡಬಹುದು ಎಂದು ಹೇಳಿದರು.
ಕೆರೆಗಳ ಅಳತೆ, ಮೋಜನಿ, ಈ ಸ್ವತ್ತು, ಕಂದಾಯ ಅದಾಲತ್, ಪೋಡಿಮುಕ್ತ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಬಾಕಿ ಪ್ರಕರಣಗಳನ್ನು ತ್ವರಿತವಾಗಿ ವಿಲೇಗೊಳಿಸಲು ಸಲಹೆ ನೀಡಿದರು.
ಇಂದಿರಾ ಕ್ಯಾಂಟಿನ್‍ಗೆ ಬೇಡಿಕೆ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ ಉಸ್ತುವಾರಿ ಕಾರ್ಯದರ್ಶಿಗಳು ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ ಊಟವನ್ನು ಹೆಚ್ಚಳಮಾಡಿ ರಾತ್ರಿ ಡಿನ್‍ರ ಸಂಖ್ಯೆಯನ್ನು ಕಡಿತಗೊಳಿಸಲು ಸಲಹೆ ನೀಡಿದರು.ಪಶುಪಾಲನೆ, ಗಿರಿರಾಜ ಕೋಳಿ ಸಾಕಾಣಿಕೆ ಚಟುವಟಿಕೆಗೆ ಹೆಚ್ಚಿನ ಆದ್ಯತೆ ನೀಡಿ, ಗ್ರಾಮೀಣ ಮಹಿಳೆಯರ ಆರ್ಥಿಕ ಬಲವರ್ಧನೆಗೆ ಹೆಚ್ಚು ಉತ್ತೇಜಕ ಚಟುವಟಿಕೆಯಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ, ಅಪರ ಜಿಲ್ಲಾಧಿಕಾರಿ ವಿನೋದಕುಮಾರ ಹೆಗ್ಗಳಗಿ, ಹಾವೇರಿ ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರಗಳು, ತಾಲೂಕು ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.