ಬೋರ್‍ವೆಲ್‍ಗಳಲ್ಲಿ ಬತ್ತಿದ ಅಂತರ್ಜಲ : ನೀರಿಗಾಗಿ ಗ್ರಾಮಸ್ಥರ ಪರದಾಟ

ಚಳ್ಳಕೆರೆ

      ಬೇಸುಗೆಯ ಬಿರು ಬಿಸಿಲು ಹೆಚ್ಚಾಗಿ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಜಾಗ್ರತೆ ವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ಇತ್ತೀಚೆಗೆ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆಸ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

      ಆದರೆ, ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಈ ಸಮಸ್ಯೆ ನಿವಾರಣೆಗೆ ಗಮನಹರಿಸದೇ ಇರುವುದು ವಿಷಾದನೀಯ. ಈ ಬಗ್ಗೆ ತಮ್ಮ ಅಸಮದಾನ ವ್ಯಕ್ತ ಪಡಿಸಿರುವ ಗ್ರಾಮಸ್ಥರು ಅಧಿಕಾರಿಗಳು ನೀರು ಕೇಳಿದರೆ ಚುನಾವಣೆ ನೆಪ ಒಡ್ಡಿ ನಮ್ಮ ಸಮಸ್ಯೆಯನ್ನು ಬಗೆಹರಿಸುತ್ತಿಲ್ಲವೆಂದು ನೊಂದು ನುಡಿಯುತ್ತಾರೆ.

       ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಚಟ್ಟೇಕಂಬ, ಚನ್ನಮ್ಮನಾಗತಿಹಳ್ಳಿ, ಮತ್ಸಮುದ್ರ, ಅಲ್ಲಾಪುರ, ಚೌಳೂರು, ನನ್ನಿವಾಳ ಪಂಚಾಯಿತಿ ವ್ಯಾಪ್ತಿಯ ಇಮಾಂಪುರ, ಗೊರ್ಲಕಟ್ಟೆ ಮುಂತಾದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಪ್ರತಿನಿತ್ಯ ಟ್ಯಾಂಕ್‍ಗಳ ಮೂಲಕ ನೀರು ಸರಬರಾಜು ಮಾಡಿದರೂ ಸಹ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ.

         ಚೆಟ್ಟೇಕಂಬ ಗ್ರಾಮದಲ್ಲಿ ಸುಮಾರು 2 ಸಾವಿರ ಜನಸಂಖ್ಯೆ ಇದ್ದು, ಪ್ರತಿನಿತ್ಯ ಗ್ರಾಮ ಪಂಚಾಯಿತಿ ವತಿಯಿಂದ 5 ಟ್ಯಾಂಕ್ ನೀರು ಸರಬರಾಜು ಮಾಡುತ್ತಿದ್ದು, ಟ್ಯಾಂಕ್ ಬಂದ ಕೂಡಲೇ ನೂರಾರು ಜನರು ಖಾಲಿ ಕೊಡಗಳನ್ನು ಕೈಯಲ್ಲಿಡಿದು ನೀರು ಪಡೆಯಲು ಟ್ಯಾಂಕ್‍ಗಳಿಗೆ ಮುಗಿ ಬೀಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕೇವಲ ಕೆಲವೇ ಕೆಲವು ನಿಮಿಷಗಳಲ್ಲಿ ಟ್ಯಾಂಕ್ ನೀರು ಖಾಲಿಯಾಗುತ್ತದೆ. ಪುನಃ ಮತ್ತೊಂದು ಟ್ಯಾಂಕ್ ಬರುವಳೊಳಗೆ ನೀರಿಗಾಗಿ ಜನ ಜಾತ್ರೆಯೇ ಸೇರಿರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಎರಡೂ ಬೋರ್‍ವೆಲ್ ಒಣಗಿದ್ದು, ಹೆಚ್ಚುವರಿಯಾಗಿ ಮತ್ತೆ ಬೋರ್ ಕೊರೆಸಿ ನೀರು ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ಧಾರೆ.

        ಪಿಡಿಒ ಸ್ವಷ್ಟನೆ :- ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ಈ ಬಗ್ಗೆ ಸ್ವಷ್ಟೀಕರಣ ನೀಡಿ, ಎರಡೂ ಬೋರ್‍ವೆಲ್‍ಗಳು ದುರಸ್ಥಿಯ ಹಿನ್ನೆಲೆಯಲ್ಲಿ ತಟಸ್ಥವಾಗಿವೆ. ಒಂದು ಬೋರ್‍ವೆಲ್‍ನಲ್ಲಿ ನೀರಿದ್ದು, ಅದನ್ನು ಮೇಲೆತ್ತಲು ನೂತನ ಮೋಟಾರ್ ಪಂಪ್ ಅಳವಡಿಸಬೇಕಿದೆ. ಈಗಾಗಲೇ ಅಧಿಕಾರಿಗಳು ನಿರ್ದೇಶನ ನೀಡಿದ್ದು, ಒಂದೆರಡು ದಿನಗಳಲ್ಲಿ ಮೋಟಾರ್ ಪಂಪ್ ಅಳವಡಿಸಿ ಗ್ರಾಮಸ್ಥರಿಗೆ ನೀರು ನೀಡಲಾಗುವುದು ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap