ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಗಣಪತಿಯ ಪಾತ್ರ ಕೂಡ ಇದೆ: ಡಾ. ಶಿವಾನಂದ ಶಿವಾಚಾರ್ಯರು

ತುಮಕೂರು :

               “ಗಣಪತಿಗೆ ಅಮ್ಮನೇ ಎಲ್ಲ. ಅಮ್ಮನೇ ಆತನ ಸರ್ವಸ್ವ. ಅಮ್ಮನೇ ಆತನ
           ತನು, ಮನ, ಧನ. ಆತ ಅಮ್ಮನಿಗೇನೇ “ತ್ವಮೇವ ಮಾತಾ ಚ ಪಿತಾ ತ್ವಮೇವ” ಎಂದು ಹೇಳಿಕೊಂಡಿರುವುದು. ಗಣಪತಿ ಅಪ್ಪನಿಗಿಂತಲೂ ಹೆಚ್ಚು “ಅಮ್ಮಾವಲಂಬಿ”. ಅಮ್ಮನ ಜೊತೆಯಲ್ಲಿ ಗುರುತಿಸಿಕೊಳ್ಳುವ ಏಕೈಕ ದೇವರು ನಮ್ಮ ಗಣಪತಿ. ಆತ ಗೌರೀಗಣೇಶ. ಆತ ಉಮಾಸುತ. ಆತ ಪಾರ್ವತೀತನಯ. ಅಮ್ಮನೇ ಆತನ “ಐಡೆಂಟಿಟಿ” ಮತ್ತು ಅಮ್ಮನೇ ಆತನ “ಆಧಾರ ಕಾರ್ಡ್”.
                 ಗೌರೀ ಗಣೇಶರದು ಅಪರೂಪದ “ಮಾತಾಪುತ್ರ” ಸಂಬಂಧ. ಗಣಪತಿಯದು ಅಮ್ಮಾ “ಫಿಲಾಸಫಿ”. ಗಣಪತಿ ಮಾತೃಪ್ರಧಾನ ಸಂಸ್ಕøತಿಯ ಹರಿಕಾರ. ಗಣಪತಿಯದು “ಅಮ್ಮಾ ಫಿಲಾಸಫಿ”. ಗಣಪತಿ “ಅಮ್ಮಾ  ಡಿ. ಎಮ್. ಕೆ.”. ಆತ ಅಮ್ಮನ ಆದೇಶಕ್ಕಾಗಿ ತಲೆದಂಡಕ್ಕೂ ಸಿದ್ಧ. ತಲೆ ಆನೆಯದಾದರೇನು, ಆಮೆಯದಾದರೇನು? ಆತ ಎಲ್ಲಕ್ಕೂ ಸಿದ್ಧ. ಆತನಿಗೆ ಅಮ್ಮನ ಆದೇಶ ಮುಖ್ಯ ಮತ್ತು ಅಮ್ಮನ ಆದೇಶಪಾಲನೆ ಮುಖ್ಯ. ನಮ್ಮ ಶ್ರೀರಾಮಚಂದ್ರ ಪಿತೃವಾಕ್ಯಪರಿಪಾಲಕನಾದರೆ ನಮ್ಮ ಗಣಪತಿ ಮಾತೃ ಆದೇಶಪಾಲಕ ಮತ್ತು
                ಆತ 100% (ಪಕ್ಕಾ) ಮಾತೃ ಆದೇಶಪರಿಪಾಲಕ. ನಾವೆಲ್ಲರೂ “ಬೋಲೋ, ಭಾರತಮಾತಾ ಕೀ ಜೈ” ಎಂದು ಹೇಳಿಕೊಂಡಿರುವ ಹಾಗೆ ಆತ “ಬೋಲೋ, ಪಾರ್ವತೀ ಮಾತಾ ಕೀ ಜೈ” ಹೇಳಿಕೊಂಡಿರುತ್ತಾನೆ.
                ನಮ್ಮ ಜನಗಳಿಗೆ ಗಣಪತಿ ಯಾರು, ಏನು, ಎತ್ತ…, ಎಂದು ಪರಿಚಯಿಸಿಕೊಡಬೇಕಾದ ಅಗತ್ಯವಿಲ್ಲ. ಗಣಪತಿ ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಓತಪ್ರೋತಗೊಂಡಿದ್ದಾನೆ. ನಾವೆಲ್ಲರೂ ಗಣಪತಿಯನ್ನು ನೋಡುತ್ತ, ಗಣಪತಿಯನ್ನು ಕೇಳುತ್ತ ಮತ್ತು ಗಣಪತಿಯ ಕುರಿತು ಮಾತನಾಡುತ್ತ ಬೆಳೆದಿದ್ದೇವೆ. ಚಿಕ್ಕ ಚಿಕ್ಕ ಮಕ್ಕಳಿಂದ ಮೊದಲು ಮಾಡಿಕೊಂಡು ವಯೋವೃದ್ಧರವರೆಗೆ ಗಣಪತಿ ಎಲ್ಲರಿಗೂ ಆಪ್ತಬಂಧು. ನಮಗೆಲ್ಲ ಆಪತ್ತುಗಳು ಎದುರಾದಾಗಲೆಲ್ಲ ನಾವೆಲ್ಲ ಗಣಪತಿಯನ್ನು ಸ್ಮರಿಸಿಕೊಳ್ಳುತ್ತೇವೆ.
              ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣಪತಿಯ ಜನಪ್ರಿಯತೆಯನ್ನು “ಎನ್‍ಕ್ಯಾಶ್” ಮಾಡಿಕೊಂಡು ರಾಷ್ಟ್ರದ ಜನಗಳನ್ನು ಸಂಘಟಿಸುವುದಕ್ಕೆ ಮುಂದಾದರು. ಅವರ ಗಣೇಶನ ಪೂಜೆಯನ್ನು ಸಾರ್ವಜನಿಕಗೊಳಿಸಿದರು. ಅವರು ಗಣಪತಿಯ ಪೂಜೆಯನ್ನು ಮನೆಯ ಚೌಕಟ್ಟಿನಿಂದ ಹೊರತಂದು ಆತನನ್ನು ಊರಿಗೆ ಊರೇ ಪೂಜಿಸುವಂತೆ ಮಾಡಿದರು. ಗಣಪತಿಯನ್ನು ಮುಂದಿಟ್ಟುಕೊಂಡು ಅವರು ಸ್ವಾತಂತ್ರ್ಯ ಹೋರಾಟವನ್ನು ಚುರುಕುಗೊಳಿಸಿದರು.
                ಈ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಡುವಲ್ಲಿ ಗಣಪತಿಯು ಕೂಡ ಅಹಂಭೂಮಿಕೆಯನ್ನು ವಹಿಸಿದ್ದಾನೆ. ಆತ ಸ್ವಾತಂತ್ರ್ಯಸಮರಕ್ಕಾಗಿ ಜನರನ್ನು ಸಜ್ಜುಗೊಳಿಸಿದ್ದಾನೆ. ಆತ ಹತೋತ್ಸಾಹಿಗಳಲ್ಲಿ ನವೋತ್ಸಾಹವನ್ನು ತುಂಬಿದ್ದಾನೆ. ಭಾರತಮಾತೆಯನ್ನು ಬ್ರಿಟಿಷರ ಬಂಧನದಿಂದ ಮುಕ್ತ ಮುಕ್ತಗೊಳಿಸುವಲ್ಲಿ ಗಣಪತಿ ತನ್ನದೇ
ಆದ ಸರ್ವತಂತ್ರ ಸ್ವತಂತ್ರ ಭೂಮಿಕೆಯನ್ನು ನಿಭಾಯಿಸಿದ್ದಾನೆ” –
               ಎಂದು ತುಮಕೂರು ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ದೀಪ ಬೆಳಗುವ ಮೂಲಕ ತುಮಕೂರಿನ ಶ್ರೀ ಸಿದ್ಧಿವಿನಾಯಕ ಸೇವಾ ಮಂಡಳಿಯ 42ನೇ ವರ್ಷದ ಶ್ರೀ ಸಿದ್ಧಿವಿನಾಯಕ ಉತ್ಸವ ಮತ್ತು 32 ದಿನಗಳ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಮಾಡಿ ಈ ಮೇಲಿನ ಮಾತುಗಳನ್ನು ಹೇಳಿದರು.
                ಶ್ರೀ ಶ್ರೀಗಳು ಮುಂದುವರಿದು ಮಾತನಾಡುತ್ತ, “ಶ್ರೀ ಸಿದ್ಧಿವಿನಾಯಕ ಸೇವಾ ಮಂಡಳಿಯು ಪ್ರತಿವರುಷವೂ ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ನಾಡಿನ ಜನಗಳಲ್ಲಿ ಸಾಹಿತ್ಯ, ಸಂಗೀತ, ಕಲೆಗಳ ಕುರಿತು ಪ್ರೀತ್ಯಾದರ, ಅಭಿಮಾನವನ್ನು ಹುಟ್ಟುಹಾಕುತ್ತಲಿದೆ. ಮಂಡಳಿಯು 42 ವರುಷಗಳಿಂದ ನಿರಂತರವಾಗಿ ಅನೇಕ ಉದಯೋನ್ಮುಖ ಕಲಾವಿದರ ಉತ್ಕರ್ಷಕ್ಕೆ ನಾಂದಿಹಾಡುತ್ತಿದೆ. ಒಂದು ತಿಂಗಳು ಕಾಲ ಜನಗಳಿಗೆ ಸಾಂಸ್ಕøತಿಕ ಹಬ್ಬದ ರಸದೌತಣವನ್ನು ನೀಡುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಆದರೆ ಮಂಡಳಿ ಹತ್ತೆಂಟು ಲಕ್ಷ ರೂ.ಗಳನ್ನು ಖರ್ಚುಮಾಡಿ ಅಂಥ ಒಂದು ಸಾಂಸ್ಕøತಿಕ ಕುಂಭಮೇಲಾವನ್ನು ನಡೆಯಿಸಿಕೊಂಡು ಬರುತ್ತಿರುವುದು ನಿಜಕ್ಕೂ ಅಭಿನಂದನೀಯ.
              ಸಿದ್ಧಿವಿನಾಯಕ ಮಂಡಳಿಯು ಈ ಮೊದಲು ಭಕ್ತಾವಲಂಬಿಯಾಗಿದ್ದು ದಿನೇ ದಿನೇ ಸ್ವಾವಲಂಬಿಯಾಗುವತ್ತ ದಾಪುಗಾಲು ಇಡುತ್ತಲಿದೆ. ಕಾರ್ಯಕ್ರಮಗಳನ್ನು ರೂಪಿಸುವುದಕ್ಕಾಗಿ ಮತ್ತು ಸಂಯೋಜಿಸುವುದಕ್ಕಾಗಿ ಸಂಪನ್ಮೂಲ ಶೇಖರಣೆಗೆ ಅದು ಮಾರ್ಗವನ್ನು ಮಾಡಿಕೊಂಡಿದೆ. ವರುಷದುದ್ದಕ್ಕೂ ಮಂಗಲಕಾರ್ಯ, ಕಲ್ಯಾಣಮಂಟಪ, ಸಭಾಮಂಟಪಗಳು ದುಡಿಯುತ್ತಿದ್ದು ಕಾರ್ಯಕ್ರಮ ನಿರ್ವಹಣೆಗೆ ಸಂಪನ್ಮೂಲವು ಸಂಗ್ರಹವಾಗುತ್ತಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಪ್ರಕ್ರಿಯೆಗೆ ಬದ್ಧವಾಗಿರುವ ಮಂಡಳಿಯು ಬರುವ ಆದಾಯವನ್ನೆಲ್ಲ ಮಂಡಳಿಯ ಉತ್ತರೋತ್ತರ ಅಭಿವೃದ್ಧಿ ಕಾರ್ಯ, ಚಟುವಟಿಕೆಗಳಿಗೆ ವಿನಿಯೋಗಿಸುತ್ತಿದೆ. ವಿಧಾಯಕ ಮತ್ತು ರಚನಾತ್ಮಕ ಕಾರ್ಯ-ಚಟುವಟಿಕೆಗಳನ್ನು ಮಾಡಿಕೊಂಡಿರುವ ಮಂಡಳಿಯು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ-ಕಾರ್ಯಗಳನ್ನು ಮಾಡಿಕೊಂಡಿದ್ದು ಶ್ರೀ ಸಿದ್ಧಿವಿನಾಯಕನ ಕೃಪೆಗೆ ಪಾತ್ರವಾಗಲಿ” ಎಂದು ಹೇಳಿದರು.
                ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಡಳಿಯ ಅಧ್ಯಕ್ಷರಾದ ಶ್ರೀ ಎನ್. ಆರ್. ಜಗದೀಶಾರಾಧ್ಯರು ಮಾತನಾಡುತ್ತ, “ಮಂಡಳಿಯು ನಿರಂತರವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತ ಬರುತ್ತಲಿದೆ. ಮಂಡಳಿಯ ಮುಂದೆ ಇನ್ನೂ ಅನೇಕ ತೆರನಾದ ರಚನಾತ್ಮಕ ಕನಸುಗಳಿವೆ. ಸಿದ್ಧಿವಿನಾಯಕನ ಆಶೀರ್ವಾದ ಮತ್ತು ಗುರುಗಳ ಆಶೀರ್ವಾದದಿಂದ ನಮ್ಮೆಲ್ಲ ಕನಸುಗಳು ಕಾರ್ಯರೂಪಕ್ಕೆ ಬರುತ್ತವೆ ಎಂಬ ಭರವಸೆ ಮಂಡಳಿಗಿದೆ” ಎಂದು ಹೇಳಿದರು.
                 ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಟಿ. ಸಿ. ಓಹಿಲೇಶ್ವರರವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತ,
“ಮಂಡಳಿಯು ಈಗಾಗಲೇ ಎಂಟು ಕೋಟಿಗೂ ಹೆಚ್ಚು ಕೆಲಸ, ಕಾರ್ಯಗಳನ್ನು ಮಾಡಿದೆ. ವಿಶಾಲವಾದ ವಿನೂತನ, ಸುಸಜ್ಜಿತ ಬೃಹದಾಕಾರದ ಸಭಾಂಗಣ ಸಿದ್ಧವಾಗಿದ್ದು ಎಲ್ಲರೂ ಈ ಸಭಾಂಗಣದ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಒಂದು ತಿಂಗಳು ಕಾಲ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಸುಮಾರು 25ರಿಂದ 30 ಲಕ್ಷ ರೂ. ಖರ್ಚು ಬರುತ್ತದೆ. ಅದನ್ನೆಲ್ಲ ಮಂಡಳಿಯು ಯಶಸ್ವಿಯಾಗಿ ಭರಿಸುತ್ತಲಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲು ಯೋಚಿಸಲಾಗಿದೆ” ಎಂದು ಹೇಳಿದರು.
                ಶ್ರೀಮತಿ ರೇಣುಕಾ ಪರಮೇಶ್‍ರವರು ಪ್ರಾರ್ಥನಾ ಗೀತೆಯನ್ನು ಹೇಳಿದರು. ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಕೆ. ಎಸ್. ರಾಘವೆಂದ್ರರಾವ್ ಸ್ವಾಗತಿಸಿದರು. ಮಂಡಳಿಯ ನಿರ್ದೇಶಕ ಶ್ರೀ ಜಿ.ಎಸ್. ಸಿದ್ಧರಾಜು ಸಭಾನಿರೂಪಣೆ ಮಾಡಿದರು. ಮಂಡಳಿಯ ಇನ್ನೋರ್ವ ನಿರ್ದೇಶಕ ಶ್ರೀ ಕೆ. ನರಸಿಂಹಮೂರ್ತಿ ವಂದನಾರ್ಪಣೆ ಮಾಡಿದರು.
                ಸಮಾರಂಭದಲ್ಲಿ ಮಂಡಳಿಯ ನಿರ್ದೇಶಕರುಗಳಾದ ಶ್ರೀ ಜಿ. ಹೆಚ್. ಪರಮಶಿವಯ್ಯ, ಟಿ. ಆರ್. ಸದಾಶಿವಯ್ಯ, ಕೆ. ಎಸ್. ಉಮೇಶ್‍ಕುಮಾರ್, ಎನ್. ಕೃಷ್ಣಮೂರ್ತಿ, ಟಿ. ಎನ್. ಮಹಾದೇವಪ್ಪ, ಟಿ. ಹೆಚ್. ಪ್ರಸನ್ನಕುಮಾರ್, ಶ್ರೀಮತಿ ರೇಣುಕಾ ಪರಮೇಶ್, ಶ್ರೀಮತಿ ಅನಸೂಯಾ ರುದ್ರಪ್ರಸಾದ್, ಟಿ.ಕೆ. ವಿಜಯ್‍ಕುಮಾರ್, ಇವರೆಲ್ಲರೂ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶ್ರೀಗಳು ತಮ್ಮ ಅಮೃತ ಹಸ್ತದಿಂದ “ಮಹಾದೈತ್ಯ ದೇವಾಂತಕ ಸಂಹಾರ” ವಿದ್ಯುತ್‍ಸಂಚಾಲಿತ ದೃಶ್ಯ, ದೃಶ್ಯಾವಳಿಯನ್ನು ಉದ್ಘಾಟಿಸಿದರು.ಕನ್ನಡನಾಡಿನ ಖ್ಯಾತ ಚಲನಚಿತ್ರನಿರ್ದೇಶಕರಾದ ಶ್ರೀ ಯೋಗರಾಜ್ ಭಟ್ಟರವರು ಸಮಾರಂಭಕ್ಕೆ ಆಗಮಿಸಿ
              ಶ್ರೀ ಸಿದ್ಧಿವಿನಾಯಕಸ್ವಾಮಿಯ ಹಾಗೂ ಶ್ರೀ ಶ್ರೀಗಳವರ ಆಶೀರ್ವಾದವನ್ನು ಪಡೆದುಕೊಂಡರು.ಅವರ ಜೊತೆಯಲ್ಲಿ ಪ್ರಜಾಪ್ರಗತಿ ಪತ್ರಿಕೆಯ ಶ್ರೀ ಎಸ್. ನಾಗಣ್ಣ ಮತ್ತು ಎನ್. ಮಧುಕರ್ ಮತ್ತು ಪ್ರಜಾಪ್ರಗತಿ ಟಿ. ವ್ಹಿ. ಸಂಚಾಲಕಿ ಶಿಲ್ಪಾರವರು ಉಪಸ್ಥಿತರಿದ್ದು ಸಿದ್ಧಿವಿನಾಯಕನ ದರ್ಶನವನ್ನು ಪಡೆದರು.

Recent Articles

spot_img

Related Stories

Share via
Copy link