ಬೆಂಗಳೂರು:
ಭಾರಿ ಮಳೆಯಿಂದಾಗಿ ಕೊಡಗಿನಲ್ಲಿ ಗುಡ್ಡ ಕುಸಿತ, ಪ್ರವಾಹ ಪರಿಸ್ಥಿತಿ ಉಂಟಾಗಿ ನೆರೆಯ ಕೇರಳದ ಪರಿಸ್ಥಿತಿ ತಲೆದೋರಿದ್ದು ರಕ್ಷಣಾ ಕಾರ್ಯಗಳಿಗೆ ಸೇನೆಯನ್ನು ಕರೆಸಲಾಗಿದೆ.
ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಧಾಕಾರಾರ ಮಳೆಯಿಂದ ಕೊಡಗಿನ ಹಲವೆಡೆ ಗುಡ್ಡ ಕುಸಿತದ ಉಂಟಾಗಿದ್ದು ಕೊಡಗು- ಮಂಗಳೂರು ಮಾರ್ಗ ಸಂಪೂರ್ಣ ಸ್ತಬ್ಧವಾಗಿದೆ.ಕೊಡಗು ಮಂಗಳೂರು ಹೆದ್ದಾರಿ ಮಾರ್ಗದ ಮಕಂದೂರು ಬಳಿಯಲ್ಲಿ ಗುರುವಾರ ಹಲವು ಕಡೆಗಳಲ್ಲಿ ಗುಡ್ಡ ಕುಸಿತ ಸಂಭವಿಸಿದೆ.
ಹೀಗಾಗಿ ಎರಡೂ ಜಿಲ್ಲೆಗಳ ನಡುವೆ ಸಂಪರ್ಕ ಕಡಿತಗೊಂಡಿದೆ. ಒಂದೆಡೆ ವಾಹನ ಸವಾರರು ಮುಂದೆ ಚಲಿಸಲಾಗದೇ, ಮಳೆ ಮತ್ತು ಸಂಚಾರ ದಟ್ಟಣೆಯಿಂದ ಪರದಾಡುತ್ತಿದ್ದರೆ, ಮತ್ತೊಂದೆಡೆ ತೀವ್ರ ಮಳೆಯಿಂದಾಗಿ ಮನೆಯಿಂದ ಹೊರ ಬರಲಾಗದೆ ಜನ ಒದ್ದಾಡುತ್ತಿದ್ದಾರೆ.
ಚಿಕ್ಕೆಂದೂರು ಎಂಬಲ್ಲಿ ಗುಡ್ಡ ಕುಸಿದಿದ್ದು, ಮಣ್ಣು ತೆರವು ಮಾಡಿ ಸಂಚಾರ ಸುಗಮಗೊಳಿಸಲು ರಕ್ಷಣಾ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.ಮಳೆ ಆರ್ಭಟವಂತೂ ಇನ್ನೂ ನಿಂತಿಲ್ಲ. ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಜನ ತತ್ತರಿಸಿದ್ದಾರೆ. ಮುಕ್ಕೋಡ್ಲು ಎಂಬಲ್ಲಿ 40 ಮಂದಿ ನಡುಗಡ್ಡೆಯಲ್ಲಿ ಸಿಲುಕಿದ್ದಾರೆ.
ದೇವಸ್ತೂರಿನಲ್ಲಿಯೂ 100 ಮಂದಿ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಗ್ರಾಮಗಳು ಜಲಾವೃತಗೊಳ್ಳುತ್ತಿರುವುದರಿಂದ ಜನ ಗುಡ್ಡವೇರಿ ಕುಳಿತಿದ್ದಾರೆ. ಇವರ ಸಂಪರ್ಕ ಸಾಧ್ಯವಾಗದೇ ಇರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗಿದೆ.
ಇನ್ನು ನಿರಂತರ ಗುಡ್ಡಕುಸಿತ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ರಸ್ತೆಯನ್ನು ನಿರ್ಬಂಧಿಸುವಂತೆ ಮಂಗಳೂರು ಜಿಲ್ಲಾಧಿಕಾರಿ ಶಶಿಕುಮಾರ್ ಸೆಂಥಿಲ್ಆದೇಶಿಸಿದ್ದಾರೆ.
ರಕ್ಷಣೆಗೆ ಸೇನೆ
ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಮುಂದುವರೆದಿದ್ದು, ವಿವಿಧ ಕಡೆಗಳಲ್ಲಿ ಅಪಾಯಕ್ಕೆ ಸಿಲುಕರುವ 500ಕ್ಕೂ ಹೆಚ್ಚು ಜನರನ್ನು ರಕ್ಷಿಸಲು ಸೇನಾಪಡೆಯ ರಕ್ಷಣಾಪಡೆಯ ಎರಡು ತುಕಡಿಗಳಿದ್ದು, ಕಾರ್ಯಾಚರಣೆ ಆರಂಭಿಸಿವೆ.
ನಡೆಸಿ ಪ್ರವಾಹಪೀಡಿತ ಪ್ರದೇಶಗಳು, ಗುಡ್ಡೆಗಳಲ್ಲಿ ಸಿಲುಕಿಕೊಂಡಿರುವ ಜನರನ್ನು ರಕ್ಷಿಸಲು ಸೇನಾಪಡೆ ಯೋಧರು ಪ್ರಾಣದ ಹಂಗು ತೊರೆದು ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಲಾರಂಭಿಸಿದ್ದಾರೆ.
ನೀರು ಹರಿವು ಹೆಚ್ಚಾಗಿರುವ ಕಡೆ ತೆರಳಲು ದೋಣಿಗಳನ್ನು ಬಳಸಲಾಗಿದ್ದರೂ ಅದು ಅಸಾಧ್ಯದ ಕೆಲಸ ಎಂದು ಹೆಲಿಕಾಪ್ಟರ್ ಮೂಲಕ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ. ಆದರೆ, ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ಗಳ ಮೂಲಕ ಆ ಸ್ಥಳಗಳಿಗೆ ತೆರಳಲು ಕಷ್ಟಕರವಾಗುತ್ತಿದೆ.
ದೇವರ ಮೊರೆ
ಈ ಮಧ್ಯೆ ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಮುಂದುವರೆದಿದ್ದು, ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಕೊಡಗಿನಲ್ಲಿ ಗುಡ್ಡ ಕುಸಿತ ಮುಂದುವರೆದಿದೆ.
ಕಳೆದ ಒಂದು ವಾರಗಳಿಂದ ಸುರಿಯುತ್ತಿರುವ ಮಹಾಮಳೆಗೆ ಕೊಡಗು ಜಿಲ್ಲೆಯ ಜನರು ಅಕ್ಷರಶಃ ನಡುಗಿ ಹೋಗಿದ್ದಾರೆ. ರಕ್ಷಣೆಗಾಗಿ ಸರ್ಕಾರ, ದೇವರ ಮೊರೆ ಹೋಗಿದ್ದಾರೆ.ದಿನದಿಂದ ದಿನಕ್ಕೆ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಕನಸಲ್ಲು ಬೆಚ್ಚಿ ಬೀಳಲಾರಂಭಿಸಿದ್ದಾರೆ.
ಸುಮಾರು 500ಕ್ಕೂ ಹೆಚ್ಚು ಜನರು ಪ್ರವಾಹದಲ್ಲಿ ಸಿಲುಕಿದ್ದು, ಪ್ರಾಣ ರಕ್ಷಣೆಗಾಗಿ ಅಂಗಲಾಚಲಾರಂಭಿಸಿದ್ದಾರೆ. ಜಿಲ್ಲೆಯ ಬಹುತೇಕ ಗ್ರಾಮಗಳು ಜಲಾವೃತಗೊಂಡಿದ್ದು, ರಕ್ಷಣೆಗಾಗಿ ಸಮೀಪದ ಗುಡ್ಡೆಗಳನ್ನು ಏರಿ ನಿಂತಿದ್ದಾರೆ.
ಮಡಿಕೇರಿಯ ಮುಕೋಡ್ಲು, ದೇವಸ್ತೂರು ಗ್ರಾಮದ ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ. ವರುಣನ ಅವಾಂತರಕ್ಕೆ ಬಹುತೇಕ ಗ್ರಾಮಗಳ ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ಕಡಿತಗೊಂಡಿವೆ. ಹಿಂದೆಂದೂ ಕಂಡರಿಯದ ರಕ್ಕಸ ಮಳೆಗೆ ಆಸ್ತಿ-ಪಾಸ್ತಿ, ಬೆಳೆಗಳಿಗೆ ಹಾನಿಯುಂಟಾಗಿದ್ದು, ಗದ್ದೆಗಳೆಲ್ಲವೂ ನೀರಿನಿಂದ ಆವೃತ್ತವಾಗಿವೆ.
ಗಂಜಿ ಕೇಂದ್ರಗಳ ಆರಂಭ
ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ನೊಂದ ನಿರಾಶ್ರಿತರಿಗೆ 10 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಹಾಳಾಗಿರುವ ರಸ್ತೆಗಳ ದುರಸ್ಥಿಗಾಗಿ ಲೋಕೋಪಯೋಗಿ ಮಡಿಕೇರಿಯಲ್ಲಿ ಉಪವಿಭಾಗೀಯ ಕಚೇರಿಯನ್ನು ತೆರೆದಿದೆ. ಹೆಲಿಕಾಪ್ಟರ್ ಕಾರ್ಯಾಚರಣೆ ಮೂಲಕ ಗುಡ್ಡದಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗಾಗಿ ಇನ್ನಿಲ್ಲದ ಪ್ರಯತ್ನ ನಡೆಸಲಾಗಿದೆ. ಪ್ರವಾಹಪೀಡಿತ ಪ್ರದೇಶಗಳಲ್ಲಿನ ಸಂತ್ರಸ್ತರನ್ನು ಸ್ಥಳೀಯರ ನೆರವಿನಿಂದ ಮಡಿಕೇರಿಗೆ ಸ್ಥಳಾಂತರಿಸಲಾಗಿದೆ. ನೀರು ಹರಿವು ಹೆಚ್ಚಾಗಿರುವ ಕಡೆ ಮುನ್ನೆಚ್ಚರಿಕೆ ನೀಡಲಾಗಿದೆ.
ಇನ್ನು ಚಿಕ್ಕಮಗಳೂರಿನ ಹಲವೆಡೆಯೂ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಎನ್ಡಿಆರ್ಎಫ್ ತಂಡ ರಸ್ತೆ ಮೇಲೆ ಬಿದ್ದಿದ್ದ ಮಣ್ಣು ತೆರವು ಗೊಳಿಸುತ್ತಿರುವಾಗಲೇ ಮತ್ತೆ ಗುಡ್ಡ ಕುಸಿದಿದೆ. ಪ್ರವಾಹದಲ್ಲಿ ಸಿಲುಕಿದ್ದವರನ್ನ ರಕ್ಷಣೆ ಮಾಡಲಾಗಿದೆ.








