ಬೆಂಗಳೂರು:
ಸುಪ್ರಸಿದ್ಧ ಯಾತ್ರಾ ಸ್ಥಳ ಮಂತ್ರಾಲಯದಲ್ಲಿ ಇದೇ ತಿಂಗಳ 25 ರಿಂದ 347 ಆರಾಧನಾ ಮಹೋತ್ಸವ ನಡೆಯಲಿದ್ದು, ಇದಕ್ಕಾಗಿ ವ್ಯಾಪಕ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೆಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಂತ್ರಾಲಯದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರಾಧನಾ ಮಹೋತ್ಸದದ ಸಂದರ್ಭದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಮಂತ್ರಾಲಯವನ್ನು ಕೇಂದ್ರ ಸರ್ಕಾರ ಸ್ವಚ್ಚ ಐಕಾನ್ ಎಂದು ಇತ್ತೀಚೆಗೆ ಗುರುತಿಸಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ವಚ್ಛತಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ ಎಂದರು.
ತುಂಗಭದ್ರಾ ನದಿಯಲ್ಲಿ ಈ ಬಾರಿ ಉತ್ತಮ ಪ್ರ,ಮಾಣದಲ್ಲಿ ನೀರಿದ್ದು, ಸಹಜ ಪ್ರವಾಹ ಪರಿಸ್ಥಿತಿ ಇದೆ. ಆದರೆ ಯಾವುದೇ ಆತಂಕ ಪರಿಸ್ಥಿತಿಯಿಲ್ಲ. ಪ್ರತಿನಿತ್ಯ ಮೂಲ ರಾಮ ದೇವರ ಪೂಜೆ ನಡೆಯಲಿದ್ದು, ಆರಾಧನಾ ಮಹೋತ್ಸದ ಸಂದರ್ಭದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಉಚಿತ ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯದಲ್ಲಿ ಭೀಕರ ಮಳೆಯಿಂದ ಸಂತ್ರಸ್ತರಾಗಿದವರಿಗೆ ನೆರವಿಗೆ ಮಠದ ಭಕ್ತಾದಿಗಳು ಸ್ಪಂದಿಸಿದ್ದಾರೆ. ಕೊಡಗು ಜಿಲ್ಲೆಗೆ 15 ಲಕ್ಷ ರೂಪಾಯಿ ನಗದು, ದವಸ ಧಾನ್ಯ, ಬಟ್ಟೆ ಮತ್ತಿತರ ವಸ್ತುಗಳನ್ನು ನೀಡಲಾಗಿದೆ. ಕೇರಳ ರಾಜ್ಯಕ್ಕೆ 15 ಲಕ್ಷ ರೂಪಾಯಿ ಒದಗಿಸಲಾಗಿದೆ ಎಂದು ಸುಬುಧೆಂದ್ರ ತೀರ್ಥ ಸ್ವಾಮೀಜಿ ಹೇಳಿದರು.
