ತುಮಕೂರು:
ಯಾವುದೇ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಕ್ರಮ ವಹಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ನಗರದ ಬಡ್ಡಿಹಳ್ಳಿ 80 ಅಡಿ ರಸ್ತೆಯ ಎರಡನೇ ತಿರುವಿನಲ್ಲಿ ನಾಯಕ ಮಹಿಳಾ ಸಮಾಜ(ರಿ)ನಿರ್ಮಿಸಿರುವ ಶಬರಿ ಮಹಿಳಾ ವಿದ್ಯಾರ್ಥಿನಿಯರ ಕಟ್ಟಡ ಉದ್ಘಾಟಿಸಿ ಮಾತನಾಡುತಿದ್ದ ಅವರು,ವಿದ್ಯೆ ಒಂದರಿಂದ ಮಾತ್ರ ಐಶ್ವರ್ಯ,ಅಧಿಕಾರ, ಸ್ಥಾನ, ಮಾನ ಗಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಇಂದು ನಿರ್ಮಾಣಗೊಂಡಿರುವ ಹಾಸ್ಟಲ್ ಇನ್ನಿತರ ಆಸ್ತಿಗಳು, ಸಮಾಜದ ಶೈಕ್ಷಣಿಕ ಅಭಿವೃದ್ಧಿ ಪೂರಕವಾದಾಗ ಮಾತ್ರ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು.
ನಾಯಕ ಸಮುದಾಯದ ಹೆಣ್ಣು ಮಕ್ಕಳಿಗೆ ಹಾಸ್ಟಲ್ ನಿರ್ಮಿಸಬೇಕು ಎಂಬುದು ನಾಯಕ ಮಹಿಳಾ ಸಮಾಜದ ಹಲವು ವರ್ಷಗಳ ಕನಸು, ಇಂದು ಅದು ನನಸಾಗಿದೆ. ಬಹಳಷ್ಟು ಜನರು ಈ ಕಟ್ಟಡಕ್ಕೆ ತಮ್ಮ ತನು, ಮನ, ದನವನ್ನು ನೀಡಿ, ಇಂತಹ ಸುಂದರ ಕಟ್ಟಡ ನಿರ್ಮಾಣಕ್ಕೆ ಸಹಕಾರಿಯಾಗಿದ್ದಾರೆ.ಇದಕ್ಕಾಗಿ ಎಲ್ಲರಿಗೂ ಅಭಿನಂದಿಸುತ್ತೇನೆ. ಕೇವಲ ಕಟ್ಟಡ ನಿರ್ಮಿಸಿದರೆ ಸಾಲದು, ಹೆಣ್ಣು ಮಕ್ಕಳ ಹಾಸ್ಟಲ್ ಆದ ಕಾರಣ ಸ್ವಚ್ಛತೆ ಮತ್ತು ಭದ್ರತೆ ಒತ್ತು ನೀಡದಿದ್ದಲ್ಲಿ, ಉದ್ದೇಶ ಸಫಲವಾಗದು ಎಂಬ ಎಚ್ಚರಿಕೆಯನ್ನು ಕೆ.ಎನ್.ರಾಜಣ್ಣ ನೀಡಿದರು.
ಈಗಾಗಲೇ ಶಬರಿ ಮಹಿಳಾ ಪತ್ತಿನ ಸಹಕಾರ ಸಂಘದ ನೂತನ ಕಟ್ಡಡ ಮುಕ್ತಾಯ ಹಂತದಲ್ಲಿದೆ. ಉದ್ದೇಶ ಒಳ್ಳೆಯದಿದ್ದರೆ ದಾನಿಗಳಿಗೆ ಕೊರತೆಯಿಲ್ಲ. ನಿಮ್ಮ ಎಲ್ಲಾ ಕೆಲಸ ಕಾರ್ಯಗಳಿಗೆ ನಮ್ಮ ಬೆಂಬಲವಿದೆ ಎಂದು ಕೆ.ಎನ್.ಆರ್. ತಾಲ್ಲೂಕು ಮಟ್ಟದಲ್ಲಿಯೂ ಹಾಸ್ಟೆಲ್ ಕಟ್ಟಡ ನಿರ್ಮಿಸಲು ಮುಂದಾದರೆ ಅದಕ್ಕೆ ತಮ್ಮ ಕೈಲಾದ ನೆರವು ನೀಡಲು ಸಿದ್ದ ಎಂದರು.
ನಿವೃತ್ತ ಅಧಿಕಾರಿ ಮೃತ್ಯುಂಜಯ ಮಾತನಾಡಿ, ರಾಜ್ಯದ ಬಹುತೇಕ ಕಡೆಗಳಲ್ಲಿ ಸಮುದಾಯದಿಂದ ಗಂಡು ಮಕ್ಕಳ ಹಾಸ್ಟಲ್‍ಗಳು ನಡೆಯುತ್ತಿವೆ.ಆದರೆ ಹೆಣ್ಣು ಮಕ್ಕಳಿಗಾಗಿ ವಿದ್ಯಾರ್ಥಿನಿಲಯ ನಿರ್ಮಿಸಿರುವುದು ತುಮಕೂರಿನಲ್ಲಿ ಮಾತ್ರ. ಇದಕ್ಕಾಗಿ ನಾಯಕ ಮಹಿಳಾ ಸಮಾಜ(ರಿ)ದ ಅಧ್ಯಕ್ಷರಾದ ಶಾಂತಲಾರಾಜಣ್ಣ ಹಾಗೂ ಪದಾಧಿಕಾರಿಗಳನ್ನು ಅಭಿನಂದಿ ಸುತ್ತೇನೆ.ಅಗತ್ಯ ದಾಖಲೆಗಳೊಂದಿಗೆ ಸರಕಾರಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದರೆ, ಈ ಶೈಕ್ಷಣಿಕ ವರ್ಷದಿಂದಲೇ ಅನುದಾನ ಪಡೆಯಬಹುದು ಎಂದು ತಿಳಿಸಿದರು.
ನಾಯಕ ಮಹಿಳಾ ಸಮಾಜ(ರಿ)ದ ಅಧ್ಯಕ್ಷರಾದ ಶಾಂತಲಾ ರಾಜಣ್ಣ ಮಾತನಾಡಿ,ನಾನು ಜಿ.ಪಂ.ಅಧ್ಯಕ್ಷೆಯಾಗಿದ್ದ ಸಂದರ್ಭದಲ್ಲಿ ಹಾಸ್ಟಲ್ ಸೀಟುಗಳಿಗಾಗಿ ನೂರಾರು ಹೆಣ್ಣು ಮಕ್ಕಳು ಕೇಳಿಕೊಂಡು ಬರುತ್ತಿದ್ದರೂ, ಶೇ90ರಷ್ಟು ಮಕ್ಕಳಿಗೆ ಅಂಕಗಳಿದ್ದರೂ ಪ್ರವೇಶ ಸಾಧ್ಯವಾಗುತ್ತಿರಲಿಲ್ಲ. ಅಂದು ಹೆಣ್ಣು ಮಕ್ಕಳಿಗಾಗಿ ಒಂದು ಹಾಸ್ಟಲ್ ನಿರ್ಮಿಸುವ ಯೋಚನೆ ತಲೆಗೆ ಬಂದಿದ್ದೂ 15 ವರ್ಷಗಳ ನಂತರ ಸಕಾರಗೊಂಡಿದೆ. ಒಂದು ರೂಮಿನಲ್ಲಿ 4-6 ಜನರು ವಾಸ್ತವ್ಯ ಮಾಡಬಹುದಾದ ದೊಡ್ಡ ರೂಗಳನ್ನು ನಿರ್ಮಿಸಲಾಗಿದೆ.ಪ್ರತಿ ಮಹಡಿಯಲ್ಲಿ ನಾಲ್ಕು ಸ್ನಾನದ ಮನೆ, 6 ಟಾಯ್ಲೆಟ್‍ಇದೆ. ನಲ ಮಹಡಿಯಲ್ಲಿ 4, ಮೊದಲು ಮತ್ತು ಎರಡನೇ ಮಹಡಿಯಲ್ಲಿ ತಲಾ 8 ರಂತೆ ಒಟ್ಟು 20 ರೂಗಳಿದ್ದು,ವಿಶಾಲವಾದ ಊಟದ ಹಾಲ್, ಅತ್ಯಾಧುನಿಕ ಅಡುಗೆ ಮನೆಯನ್ನು ಒಳಗೊಂಡ ಹಾಸ್ಟಲ್ ನಿರ್ಮಿಸಿದ್ದು,ಮೆಟ್ರಿಕ್ ನಂತರದ ಎಲ್ಲಾ ವರ್ಗದ ಬಡ ಮಕ್ಕಳಿಗೆ ಅವಕಾಶ ಮಾಡಿಕೊಡಲು ಆಲೋಚನೆ ಮಾಡಿದ್ದೇವೆ. ಹೆಣ್ಣು ಮಕ್ಕಳ ರಕ್ಷಣೆಗೆ ಆಳೆತ್ತರದ ಕಾಂಪೌಂಡ್, ಸೆಕ್ಯೂರಿಟಿ ಗಾರ್ಡು ನಿಯೋಜಿಸಿದ್ದು, ಸ್ವಂತ ಕೊಳವೆ ಕೊರೆಸಲಾಗಿದೆ. ಇಲ್ಲಿಂದ ಬೆಳಗ್ಗೆ 6:30 ರಿಂದ ನಗರದ ಎಲ್ಲಾ ಬಡಾವಣೆಗಳಿಗೂ ನಗರ ಸಾರಿಗೆ ಬಸ್ ಸೌಲಭ್ಯವಿದ್ದು, ಓದುವ ಮಕ್ಕಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀವಾಲ್ಮೀಕಿ ವಿದ್ಯಾವರ್ಧಕ ಸಂಘದ ದೊಡ್ಡಯ್ಯ, ಪುಟ್ಟ ಬೋರಯ್ಯ, ಭೀಮಯ್ಯ, ಬಿ.ಜಿ.ಕೃಷ್ಣಪ್ಪ, ಟಿ.ಬಿ.ಮಲ್ಲೇಶ್, ಮಧುಗಿರಿ ಪಲ್ಲಪ್ಪ, ಪರಿಶಿಷ್ಟ ವರ್ಗಗಳ ಅಭಿವೃದ್ದಿ ಇಲಾಖೆಯ ಜಿಲ್ಲಾಧಿಕಾರಿ ರಾಜಕುಮಾರ್, ನಾಯಕ ಮಹಿಳಾ ಸಮಾಜದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
