ತುಮಕೂರು

ವರದಿ : ರಾಕೇಶ್.ವಿ , ತುಮಕೂರು
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕೆಲ ಗ್ರಾಮಗಳು ಇನ್ನೂ ಸಹ ಅಭಿವೃದ್ಧಿಯಿಂದ ವಂಚಿತವಾಗಿವೆ. ಚರಂಡಿ ಸಮಸ್ಯೆ, ರಸ್ತೆ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹತ್ತಾರು ಸಮಸ್ಯೆಗಳ ನಡುವೆ ನಿವಾಸಿಗಳು ಪರದಾಡುತ್ತಿದ್ದಾರೆ. ಇದಕ್ಕೊಂದು ಉತ್ತಮ ಉದಾಹರಣೆ ತಿಮ್ಮಲಾಪುರ ಗ್ರಾಮ.
ಅಂತರಸನಹಳ್ಳಿ ಬೈಪಾಸ್ ರಸ್ತೆಯಿಂದ 2 ಕಿಮೀ ಒಳಹೋದರೆ ತಿಮ್ಮಲಾಪುರ ಕಂಡುಬರುತ್ತದೆ. ಈ ಗ್ರಾಮದಲ್ಲಿ 250ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿವೆ. ಇದು ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತದೆ. ತುಮಕೂರು ನಗರದಿಂದ ಕೇವಲ 5 ಕಿಮೀ ದೂರದಲ್ಲಿದ್ದರೂ ಇದೊಂದು ಸಮಸ್ಯೆಗಳ ಆಗರವಾಗಿದೆ. ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬರುವ ತಿಮ್ಲಾಪುರ ಕೆರೆಯ ಅಕ್ಕಪಕ್ಕದಲ್ಲಿ ಸರಿಯಾದ ರಸ್ತೆಗಳಿಲ್ಲ. ಇದರ ಹಿಂಭಾಗದಲ್ಲಿ ಯಲ್ಲಾಪುರ ಬರುತ್ತದೆ. ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಕೆರೆಯ ಏರಿ ಮೇಲೆಯಿಂದ ಯಲ್ಲಾಪುರ ಕಡೆಗೆ ತೆರಳುತ್ತಾರೆ.
ಸರಿಯಾದ ರಸ್ತೆ ಸಂಪರ್ಕ ಇಲ್ಲ

ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಂಡು ಬರುವ ರಸ್ತೆ ಸೌಲಭ್ಯ ತಿಮ್ಮಲಾಪುರ ಗ್ರಾಮದಲ್ಲಿ ಇಲ್ಲವಾಗಿದೆ. ಯಲ್ಲಾಪುರಕ್ಕೆ ತೆರಳಬೇಕಾದರೂ ರಸ್ತೆ ಸೌಲಭ್ಯ ಇಲ್ಲ. ನೀಲಿ ನಕ್ಷೆ ಪ್ರಕಾರ ರಸ್ತೆ ಇದ್ದರೂ ಇಲ್ಲಿ ರಸ್ತೆ ಕಾಣುವುದೇ ಇಲ್ಲ. ಕೆರೆಯ ಪಕ್ಕದಲ್ಲಿ ಹಾದು ಹೋಗುವ ರಸ್ತೆಯು ತಗ್ಗು ಗುಂಡಿಗಳಿಂದ ಕೊಳಚೆ ನೀರಿನಿಂದ ತುಂಬಿಕೊಂಡಿದೆ. ಈ ರಸ್ತೆಯಲ್ಲಿ ಓಡಾಡುವ ವಾಹನಗಳು ಮುಗುಚಿಕೊಂಡು ಅನೇಕರು ಗಾಯಗೊಂಡ ಘಟನೆಗಳು ಸಾಕಷ್ಟು ನಡೆದಿವೆ. ಹಿರಿಯರು ಹಾಗೂ ಮಕ್ಕಳು ನಡೆದಾಡಲು ತುಂಬಾ ತೊಂದರೆಯಾಗುತ್ತಿದೆ. ರಸ್ತೆ ಸರಿ ಪಡಿಸಲು ತಹಸೀಲ್ದಾರ್‍ಗೆ ಮನವಿ ಮಾಡಿದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ರಸ್ತೆ ಮೇಲೆ ಉಕ್ಕುವ ಚರಂಡಿ ನೀರು
ತಿಮ್ಮಲಾಪುರ ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಚರಂಡಿ ನೀರು ರಸ್ತೆಯ ಮೇಲೆ ಹರಿದಾಡುತ್ತದೆ. ಒಳಚರಂಡಿ ವ್ಯವಸ್ಥೆಯನ್ನು ಸರಿಯಾಗಿ ಮಾಡಿಲ್ಲ. ಇದರಿಂದ ಚರಂಡಿಯಲ್ಲಿ ಹರಿಯಬೇಕಾದ ಕೊಚ್ಚೆ ನೀರು ರಸ್ತೆ ಮೇಲೆ ಬರುವುದರಿಂದ ಇಲ್ಲಿ ಓಡಾಡುವ ಜನರು ಮೂಗು ಮುಚ್ಚಿಕೊಂಡು ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಹಂದಿಗಳ ಕಾಟ
ತಿಮ್ಮಲಾಪುರ ಕೆರೆ ಸುಮಾರು 20 ವರ್ಷಗಳಿಂದಲೂ ನೀರು ಇಲ್ಲದೆ ಖಾಲಿಯಾಗಿಯೇ ಉಳಿದಿದೆ. ಇದರಿಂದ ಹಂದಿಜೋಗರು ಕೆರೆಯಲ್ಲಿ ಗುಡಾರಗಳನ್ನು ಹಾಕಿಕೊಂಡು ಹಂದಿಗಳನ್ನು ಸಾಕುತ್ತಿದ್ದಾರೆ. ಬೆಳಗ್ಗೆ ಆದರೆ ಸಾಕು ಹಂದಿಗಳು ಮನೆಗಳ ಮುಂದಕ್ಕೆ ಬರುತ್ತವೆ. ಹಂದಿಗಳ ಸಮಸ್ಯೆಗಳ ಬಗ್ಗೆ ತಾಲ್ಲೂಕು ಪಂಚಾಯಿತಿ ಸಭೆಗಳಲ್ಲಿ ಪ್ರಸ್ತಾಪವಾದರೂ ಇಲ್ಲಿಯವರೆಗೆ ಹಂದಿಗಳನ್ನು ಹಿಡಿಯುವ ಕೆಲಸಕ್ಕೆ ಯಾರೂ ಮುಂದಾಗಿಲ್ಲ. ಈಗಾಗಲೇ ವಿವಿಧ ಕಾಯಿಲೆಗಳಿಂದ ಜನರು ಆಸ್ಪತ್ರೆಪಾಲಾಗುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪ.
ಕೆರೆಯ ಅಂಗಳಕ್ಕೆ ಎರಚುವ ತ್ಯಾಜ್ಯ

ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕೆಗಳಿಂದ ಬರುವ ತ್ಯಾಜ್ಯವನ್ನು ತಿಮ್ಮಲಾಪುರ ಕೆರೆಗೆ ಎಸೆಯುತ್ತಿದ್ದು, ಇದು ಅಲ್ಲಿನ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿನ ತ್ಯಾಜ್ಯವನ್ನು ಟ್ರ್ಯಾಕ್ಟರ್ ಹಾಗೂ ಇತರ ವಾಹನಗಳ ಮೂಲಕ ತಂದು ಕೆರೆಗೆ ಎಸೆಯುತ್ತಾರೆ. ಇದರಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತಿವೆ. ಹಲವು ಬಾರಿ ತ್ಯಾಜ್ಯ ಎಸೆಯುವ ವಾಹನ ಚಾಲಕರ ಬಳಿ ಜಗಳ ನಡೆದಿವೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ತಹಸೀಲ್ದಾರ್ ಕಚೇರಿಗೂ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಆದರೂ ಯಾವೊಬ್ಬ ಅಧಿಕಾರಿಯೂ ಸ್ಪಂದಿಸಿಲ್ಲ ಎಂಬ ಅಪವಾದಗಳು ಕೇಳಿಬಂದಿವೆ.
ಕೇಳಿದರೆ ಬೆದರಿಕೆಗಳು
ಕೈಗಾರಿಕಾ ಪ್ರದೇಶದಲ್ಲಿನ ಓರ್ವ ಟ್ರ್ಯಾಕ್ಟರ್ ಮಾಲೀಕ ತ್ಯಾಜ್ಯವನ್ನು ಎಸೆಯುತ್ತಿದ್ದು, ಈ ಬಗ್ಗೆ ಆತನ ಬಳಿ ಕೇಳಲು ಹೋದರೆ. ನಾನು ಪಂಚಾಯಿತಿ ಅಧಿಕಾರಿಗಳನ್ನು ಕೊಂಡುಕೊಂಡಿದ್ದೇನೆ. ನನಗೆ ಜನಪ್ರತಿನಿಧಿಗಳ ಬೆಂಬಲವಿದೆ. ಯಾರನ್ನು ಬೇಕಾದರೂ, ಯಾವ ಅಧಿಕಾರಿಗಳನ್ನಾದರೂ ಕೊಂಡು ಕೊಳ್ಳುತ್ತೇನೆ ಎಂದು ಧಮ್ಕಿ ಹಾಕಿದ್ದಾರೆ ಎಂದು ತಹಸೀಲ್ದಾರ್‍ರವರಿಗೆ ನೀಡಿದ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಶುದ್ಧಕುಡಿಯುವ ನೀರಿನ ಘಟಕಗಳಿಲ್ಲ
ತಿಮ್ಮಲಾಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಒಂದು ಬೋರ್ ಕೊರೆಸಲಾಗಿದೆ. ಇದು ಕೆರೆಯ ಅಂಗಳದಲ್ಲಿ ಇದೆ. ಪ್ರತಿಯೊಬ್ಬರು ಕುಡಿಯುವ ನೀರಿಗೆ ಈ ಬೋರ್ ಅನ್ನೇ ಅವಲಂಬಿಸಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಕಸದ ತ್ಯಾಜ್ಯವನ್ನು ಕೆರೆಯ ಅಂಗಳಕ್ಕೆ ಎಸೆಯುತ್ತಿರುವುದರಿಂದ ರಸಾಯನಿಕ ಅಂಶಗಳು ನೀರಿಗೆ ಮಿಶ್ರಿತಗೊಳ್ಳುತ್ತಿವೆ. ಇದರಿಂದ ಆರೋಗ್ಯ ಸಮಸ್ಯೆಗಳು ಬರುವುದು ಕಟ್ಟಿಟ್ಟ ಬುತ್ತಿಯಾಗಿದೆ. ಕಲುಷಿತ ನೀರು ಕುಡಿಯುವುದರಿಂದ ಯಾವಾಗ ಯಾವ ರೋಗಕ್ಕೆ ತುತ್ತಾಗಬೇಕಾಗುತ್ತದೆಯೇ ಎಂಬ ಭೀತಿ ಜನರಲ್ಲಿ ಮೂಡಿದೆ.
ಬೀದಿದೀಪಗಳ ಸೌಲಭ್ಯವೇ ಇಲ್ಲ
ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಮುಖ್ಯ ರಸ್ತೆಯುದ್ದಕ್ಕೂ ಇರುವ ಬೀದಿದೀಪಗಳ ಸೌಲಭ್ಯ, ಮುಂದೆ ತಿಮ್ಮಲಾಪುರ ಗ್ರಾಮಕ್ಕೆ ಕಲ್ಪಿಸಿಲ್ಲ. ಸೂರ್ಯಾಸ್ತಮ ಆಗುತ್ತಿದ್ದಂತೆಯೇ ಕತ್ತಲು ಆವರಿಸಿಕೊಳ್ಳುತ್ತದೆ. ಆ ವೇಳೆಯಲ್ಲಿ ವಾಹನ ಸವಾರರು ಕೂಡ ಓಡಾಡುವುದು ಕಷ್ಟಕರವಾಗಿದೆ. ಇನ್ನೂ ನಡೆದುಕೊಂಡು ಹೋಗುವವರ ಸ್ಥಿತಿಯಂತೂ ಹೇಳತೀರದಾಗಿದೆ. ಬೆಳಗಿನ ವೇಳೆಯಲ್ಲಿಯೇ ಸರಿಯಾದ ರಸ್ತೆಗಳಿಲ್ಲದೆ ಅನಾಹುತಗಳು ನಡೆದಿವೆ. ಇನ್ನು ರಾತ್ರಿ ವೇಳೆಯಲ್ಲಿ ಅದೆಷ್ಟು ಅನಾಹುತಗಳು ನಡೆದಿವೆಯೋ ಎಂದು ಲೆಕ್ಕಾಚಾರ ಹಾಕಲು ಕೂಡ ಸಾಧ್ಯವಿಲ್ಲದಾಗಿದೆ.
ಹೆಚ್ಚಾದ ಕಳ್ಳರ ಕಾಟ
ಸಂಜೆಯಾಗುತ್ತಿದ್ದಂತೆಯೇ ಬೀದಿದೀಪದ ಸೌಲಭ್ಯವಿಲ್ಲವಾದ್ದರಿಂದ ಕಳ್ಳರಿಗೆ, ಖದೀಮರಿಗೆ ಕಳ್ಳತನ ಮಾಡಲು ಸುಲಭ ದಾರಿ ಮಾಡಿಕೊಟ್ಟಂತಾಗಿದೆ. ಕೂಗಾಡಿದರೂ ಇಲ್ಲಿ ಯಾರು ಬರದಂತಹ ವಾತಾವರಣವಿದೆ. ರಾತ್ರಿ ವೇಳೆಯಲ್ಲಿ ಒಂಟಿಯಾಗಿ ಓಡಾಡುವವರನ್ನು ಬೆದರಿಸಿ ಹಣ, ಮೊಬೈಲ್ ಮುಂತಾದ ವಸ್ತುಗಳನ್ನು ಕಸಿದು ಪರಾರಿಯಾಗುವ ಸಂದರ್ಭಗಳೇ ಹೆಚ್ಚು.
ಪ್ರತಿಯೊಂದಕ್ಕೂ ಯಲ್ಲಾಪುರಕ್ಕೆ ತೆರಳಬೇಕು
ಗ್ರಾಮದಲ್ಲಿ ಯಾರಿಗಾದರೂ ಅನಾರೋಗ್ಯ ಎದುರಾದರೂ ಚಿಕಿತ್ಸೆ ಕೊಡಿಸಲು ಯಲ್ಲಾಪುರಕ್ಕೆ ತೆರಳಬೇಕು. ಅತ್ತ ಹೋಗಲು ಸೂಕ್ತ ಬಸ್ ವ್ಯವಸ್ಥೆ ಇಲ್ಲ. ವಾಹನಗಳಲ್ಲಿ ಓಡಾಡಲು ಸರಿಯಾದ ರಸ್ತೆಯಿಲ್ಲ. ಗರ್ಭಿಣಿ ಸ್ತ್ರೀಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗವುದಂತೂ ದುಸ್ಸಾಹಸವೇ ಆಗಿದೆ. ಆದ್ದರಿಂದ ಈ ಭಾಗದಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂಬುದು ಅಲ್ಲಿನ ನಿವಾಸಿಗಳ ಆಗ್ರಹ.
ಅಭಿವೃದ್ಧಿಯಲ್ಲಿ ಒಂದು ಭಾಗವಾದ ಕೈಗಾರಿಕಾ ಪ್ರದೇಶ
ತುಮಕೂರು ಸ್ಮಾರ್ಟ್ ಸಿಟಿಯಾಗುತ್ತಿದೆ. ನಗರದ ಅಭಿವೃದ್ಧಿಗೆ ಕೈಗಾರಿಕಾ ಕ್ಷೇತ್ರದ ಪಾತ್ರವು ಬಹಳಷ್ಟು ಮುಖ್ಯವಾಗಿದೆ. ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿಯಿಂದ ಸ್ಥಳೀಯ ಯುವಜನತೆಗೆ ಉದ್ಯೋಗಾವಕಾಶಗಳು ಸಿಗುತ್ತಿವೆ. ಆದರೆ ಇದೇ ಕೈಗಾರಿಕೆಗಳಿಂದಲೇ ಸ್ಥಳೀಯರಿಗೆ ಸಮಸ್ಯೆಗಳು ಎದುರಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ.
ಕಳೆದ 10 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಹಿಂದೆ ಬಿಜೆಪಿ ಶಾಸಕರ ಬಳಿ ಸಮಸ್ಯೆಗಳ ಬಗ್ಗೆ ಮಾತನಾಡಿದರೆ ನಮ್ಮ ಜನಾಂಗದವರ ಎಷ್ಟು ಮನೆಗಳು ಇಲ್ಲಿವೆ ಎಂದು ಪ್ರಶ್ನಿಸುತ್ತಿದ್ದರು. ಅಂದರೆ ಜನಪ್ರತಿನಿಧಿಯಾಗುವವರು ಕೇವಲ ಒಂದು ಜಾತಿಗೆ ಸೀಮಿತವಾದರಾ. ಜನಪ್ರತಿನಿಧಿ ಎಂದರೆ ಅವರಿಗೆ ಎಲ್ಲರೂ ಸಮಾನರಾಗಿರಬೇಕು. ಅಭಿವೃದ್ಧಿ ಎಂದು ಬಂದಾಗ ಎಲ್ಲರನ್ನು ಸಮಾನವಾಗಿ ಕಾಣಬೇಕಲ್ಲವೇ ಎಂಬುದು ಕೆಲವರಿಂದ ಎದುರಾಗುವ ಅಸಮಾಧಾನದ ನುಡಿಗಳು.
ನಮ್ಮ ತಿಮ್ಮಲಾಪುರ ಗ್ರಾಮದಲ್ಲಿ ಒಂದು ರಸ್ತೆಯೂ ಇಲ್ಲ. ಇರುವ ರಸ್ತೆಯಲ್ಲಿ ಬರೀ ತಗ್ಗುಗುಂಡಿಗಳು, ಅದರಲ್ಲಿ ಕೊಳಚೆ ನೀರು ತುಂಬಿಕೊಂಡಿರುತ್ತದೆ. ನಿತ್ಯ ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳು ಕೊಚ್ಚೆ ನೀರಿನಲ್ಲಿಯೇ ನಡೆದಾಡಬೇಕು. ಗ್ರಾಮದಲ್ಲಿನ ಹಿರಿಯರು, ಅಂಗವಿಕಲರು ಪರಿಸ್ಥಿತಿಯಂತೂ ಕೇಳತೀರದಾಗಿದೆ. ನಮಗೆ ಆದಷ್ಟು ಬೇಗ ರಸ್ತೆ ಸೌಲಭ್ಯ ಮಾಡಿಕೊಟ್ಟರೆ ಅನುಕೂಲವಾಗುತ್ತದೆ . –ವೆಂಕಟಲಕ್ಷ್ಮಮ್ಮ, ವೃದ್ಧೆ
ನಮ್ಮ ತಿಮ್ಮಲಾಪುರ ಗ್ರಾಮದಲ್ಲಿ ಏನೇ ಕೆಲಸ ಕಾರ್ಯಗಳಾಗಬೇಕಾದರೂ ಯಲ್ಲಾಪುರಕ್ಕೆ ಹೋಗಬೇಕು. ಅಲ್ಲಿಗೆ ಹೋಗಲು ಸರಿಯಾದ ರಸ್ತೆಗಳೇ ಇಲ್ಲ. ಇಂಡಸ್ಟ್ರೀಯಲ್ ಏರಿಯಾ ಆದಾಗಿನಿಂದಲೂ ಇದ್ದ ದಾರಿಯನ್ನು ಮುಚ್ಚಿಸಿ ಅವರಿಗೆ ತೋಚಿದಂತೆ ರಸ್ತೆಗಳನ್ನು ಮಾಡಿಕೊಂಡಿದ್ದಾರೆ. ಕೈಗಾರಿಕಾ ಪ್ರದೇಶ ಮಾಡುವ ಮುನ್ನ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆಲ್ಲರಿಗೂ ಮನವಿ ಮಾಡಲಾಗಿತ್ತು. ಆದರೆ ಯಾರೊಬ್ಬರು ಗಮನ ಹರಿಸಿಲ್ಲ. –ಶಿವಲಿಂಗ ಸರ್ಜಾ, ತಿಮ್ಮಲಾಪುರ ನಿವಾಸಿ
