ಮಕ್ಕಳ ಕಾನೂನುಗಳ ಬಗ್ಗೆ ಅರಿವು ಅಗತ್ಯ

 ತುಮಕೂರು:

              ಮಕ್ಕಳಿಗೆ ಸಂಬಂಧಿಸಿದಂತೆ ಕಾನೂನಿನ ಹೊಸ ಮಾರ್ಪಾಟುಗಳು ಆಗುತ್ತಿದ್ದು, ಈ ಬಗ್ಗೆ ಕಾನೂನು ವಿದ್ಯಾರ್ಥಿಗಳು ಬದಲಾದ ಕಾನೂನಿಗೆ ಅನುಗುಣವಾಗಿ ಹೆಚ್ಚು ಮಾಹಿತಿ ಪಡೆಯುವತ್ತ ಗಮನ ಹರಿಸಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ತಿಳಿಸಿದರು.
               ಇಲ್ಲಿನ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಬಾಲ ನ್ಯಾಯ ಕಾಯಿದೆ, ಪೋಕ್ಸೋ ಕಾಯಿದೆ, ದತ್ತು ನಿಯಮಾವಳಿಗಳು ಹಾಗೂ ಬಾಲ್ಯ ವಿವಾಹ ನಿಷೇಧ ಕಾಯಿದೆ ಕುರಿತ ಕಾರ್ಯಾಗಾರದಲ್ಲಿ ಬಾಲ ನ್ಯಾಯ ಕಾಯಿದೆಯ ಸ್ಥೂಲ ಪರಿಚಯ ಮಾಡಿಕೊಟ್ಟರು.
                  ಇತ್ತೀಚಿನ ದಿನಗಳಲ್ಲಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಕಾನೂನುಗಳು ಬರುತ್ತಿವೆ. ವಿಶೇಷ ಕಾನೂನುಗಳು ರಚನೆಯಾಗಿವೆ. ಮಕ್ಕಳ ಮೇಲೆ ನಡೆಯುವ ಎಲ್ಲಾ ರೀತಿಯ ದೌರ್ಜನ್ಯಗಳನ್ನು ತಡೆಯುವುದು ಇಡೀ ಸಮಾಜದ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಕಾನೂನು ವಿದ್ಯಾರ್ಥಿಗಳ ಜವಾಬ್ದಾರಿ ಹೆಚ್ಚಿನದಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.
                    ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ತುಂಬಾ ಕಠಿಣವಾದ ಹಾಗೂ ಸೂಕ್ಷ್ಮವಾದ ಕಾಯಿದೆಯಾಗಿದ್ದು, ಈ ಪ್ರಕರಣಗಳಲ್ಲಿ ರಾಜಿ ಮಾಡಿಕೊಳ್ಳುವ ಪ್ರಸಂಗವೇ ಬರುವುದಿಲ್ಲ.ಅಲ್ಲದೆ, ಘಟನೆ ನಡೆದ ಕೂಡಲೇ ಪೊಲೀಸರು ಪ್ರಕರಣ ದಾಖಲಿಸಬೇಕಾಗುತ್ತದೆ ಎಂದರು.
                    ಪೋಕ್ಸೋ ಕಾಯ್ದೆ ಕುರಿತು ಉಪನ್ಯಾಸ ನೀಡಿದ ಕವಿತಾ ಅವರು ಭಾರತ ದಂಡ ಸಂಹಿತೆಯ ಅತ್ಯಾಚಾರ ಕಾನೂನಿಗೂ 2012 ರಲ್ಲಿ ಜಾರಿಗೆ ಬಂದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆಗೆ ಸಾಕಷ್ಟು ವ್ಯತ್ಯಾಸಗಳಿವೆ. ಪೋಕ್ಸೋ ಕಾಯಿದೆಯಲ್ಲಿ ವಿವಿಧ ಹಂತದ ಸ್ವರೂಪಗಳನ್ನು ಲೈಂಗಿಕ ದೌರ್ಜನ್ಯಗಳಾಗಿ ಗುರುತಿಸಲಾಗುತ್ತದೆ. ಶಿಕ್ಷೆಯು ಕೆಲವೊಮ್ಮೆ ಗುರುತರವಾಗಿರುತ್ತದೆ ಎಂದರು.
                    ಪೋಕ್ಸೋ ಕಾಯಿದೆ ಜಾರಿಯಾಗಿ ಇಷ್ಟು ವರ್ಷಗಳು ಕಳೆದಿವೆ. ಸಾಕಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ. ನ್ಯಾಯಾಲಯದಲ್ಲಿಯೂ ಶಿಕ್ಷೆಯಾಗಿದೆ. ಇಷ್ಟು ಪ್ರಕರಣಗಳನ್ನು ಗಮನಿಸಿದಾಗ ಹತ್ತಿರದ ಸಂಬಂಧಿಗಳೇ ಕೆಲವು ಪ್ರಕರಣಗಳಲ್ಲಿ ಕೃತ್ಯ ಎಸಗಿರುವುದು ಕಂಡುಬರುತ್ತದೆ. ಹೀಗಾಗಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ದೂರದ ವ್ಯಕ್ತಿಗಳಿಂದಲೇ ಆಗುತ್ತದೆ ಎಂಬುದೇನಿಲ್ಲ. ಪರಿಚಯಸ್ತರಿಂದಲೂ ಈ ಕೃತ್ಯ ನಡೆಯುತ್ತದೆ ಎಂಬುದು ದೃಢಪಟ್ಟಿದೆ. ಹೀಗಾಗಿ ಮಕ್ಕಳು ಎಚ್ಚರದಿಂದ ಇರುವುದು ಒಳ್ಳೆಯದು ಎಂದರು.
                 ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶಿವಣ್ಣ ಅವರು ಬಾಲ ನ್ಯಾಯ ಕಾಯ್ದೆ ಮತ್ತು ದತ್ತು ಸ್ವೀಕಾರ ನಿಯಮಾವಳಿ ಕುರಿತು ಮಾತನಾಡಿ ಬಾಲ ನ್ಯಾಯ ಕಾಯಿದೆಯು ಜಾರಿಗೆ ಬಂದ ನಂತರ ಹಳೆಯ ಕೆಲವು ಕಾಯಿದೆಗಳು ಮಹತ್ವ ಕಳೆದುಕೊಂಡಿವೆ. ಯಾವುದೇ ಮಗುವನ್ನು ತಮಗೆ ಬೇಕಾದ ರೀತಿಯಲ್ಲಿ ಸಾಕಿಕೊಳ್ಳಲು, ದತ್ತು ತೆಗೆದುಕೊಳ್ಳಲು ಅವಕಾಶವಿಲ್ಲ. ದತ್ತು ಪಡೆಯುವವರಿಗಾಗಿಯೇ ವಿಶೇಷ ನಿಯಮಾವಳಿಗಳು ರೂಪುಗೊಂಡಿವೆ. ಅದರ ಪ್ರಕಾರವೇ ದತ್ತು ಪಡೆಯಬೇಕು ಎಂದರು.
                   ನಿರ್ಲಕ್ಷ್ಯಕ್ಕೆ ಒಳಗಾದ, ಅನಾಥ ಮಕ್ಕಳು, ಬಾಲ ಮಂದಿರದಲ್ಲಿ ಬೆಳೆಯುವ ಮಕ್ಕಳು ಹೀಗೆ ಯಾರೇ ಆಗಿರಲಿ ಅಂತಹ ಮಕ್ಕಳನ್ನು ದತ್ತು ಪಡೆಯಲು ಇಚ್ಛಿಸಿದಲ್ಲಿ ಮೊದಲು ದತ್ತು ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಎಲ್ಲ ಪ್ರಕ್ರಿಯೆಗಳು ಮುಗಿದ ನಂತರವೇ ದತ್ತು ನೀಡಲಾಗುತ್ತದೆ. ಇದನ್ನು ಹೊರತುಪಡಿಸಿ ಬೇರಾವುದೇ ರೀತಿಯಲ್ಲಿ ದತ್ತು ಪಡೆಯಲು ಅವಕಾಶವಿರುವುದಿಲ್ಲ. ಆದರೆ ಸಂಬಂಧಿಕರಲ್ಲಿ ದತ್ತು ಪಡೆಯಲು ಈ ಹಿಂದಿನ ಹಿಂದೂ ದತ್ತು ಸ್ವೀಕಾರ ಮತ್ತು ಪೋಷಕತ್ವ ಕಾಯಿದೆ ಇರುತ್ತದೆ. ಅದರ ಪ್ರಕಾರವೂ ದತ್ತು ಪಡೆಯಬಹುದು ಎಂದರು.
                 ಬಾಲ್ಯ ವಿವಾಹ ನಿಷೇಧ ಕಾಯಿದೆ ಕುರಿತು ಮಾತನಾಡಿದ ಸಾ.ಚಿ.ರಾಜಕುಮಾರ ಅವರು, 2007 ರಲ್ಲಿ ಜಾರಿಗೆ ಬಂದ ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. 2017ರ ನೂತನ ನಿಯಮ ಪ್ರಕಾರ ಬಾಲ್ಯ ವಿವಾಹಗಳನ್ನು ನಡೆಸಿದ್ದೇ ಆದಲ್ಲಿ ಅವು ಕಾನೂನಿನ ಅಮಾನ್ಯತೆಗೆ ಒಳಗಾಗುತ್ತವೆ. ಇಂತಹ ಮದುವೆಗಳನ್ನು ಮಾಡಿಸುವ, ಸಹಕರಿಸುವ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸುವ ಎಲ್ಲರಿಗೂ ಶಿಕ್ಷೆ ಅಥವಾ ದಂಡ ವಿಧಿಸಲಾಗುತ್ತದೆ. ಇಂತಹ ಪ್ರಕರಣಗಳು ಕಂಡುಬಂದಾಗ ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಲು ಕಾನೂನಿನಲ್ಲಿ ಅವಕಾಶ ಇರುವುದರಿಂದ ಬಾಲ್ಯ ವಿವಾಹ ನಡೆಯದಂತೆ ನೋಡಿಕೊಳ್ಳಬೇಕು ಎಂದರು.
                    ಕಾನೂನು ಕಾಲೇಜಿನ ಆಡಳಿತ ಮತ್ತು ಶೈಕ್ಷಣಿಕ ನಿರ್ದೇಶಕರಾದ ಪ್ರೊ.ಹೆಚ್.ಎಸ್.ಶೇಷಾದ್ರಿ, ಪ್ರಾಂಶುಪಾಲ ಕೆ.ವೆಂಕಟಾಚಲಪತಿಸ್ವಾಮಿ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ನಟರಾಜ ಜಿ.ವೈ., ಸಹ ಸಂಯೋಜಕ ಮಂಜುನಾಥ ಎನ್.ಜಿ. ಸೇರಿದಂತೆ ಬೋಧಕ, ಬೋಧಕೇತರ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.