ದಾವಣಗೆರೆ:
ಮದ್ಯಪಾನ ಮಾಡಿಕೊಂಡು ಬಂದು, ಮನೆಯಲ್ಲಿ ನಿತ್ಯವೂ ಜಗಳ ಆಡುತ್ತಿದ್ದ ಮಗನನ್ನೇ ಕೊಂದ ತಂದೆ ಸೇರಿ ಮೂವರು ಆರೋಪಿಗಳನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತೀಚೆಗೆ ಶಿರಮಗೊಂಡನಹಳ್ಳಿ ಚಾನೆಲ್‍ನಲ್ಲಿ ಹಗ್ಗದಿಂದ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಮೃತದೇಹ ದೊರೆತಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು. ದೊರೆತ ಮೃತ ದೇಹವು ಚನ್ನಗಿರಿ ತಾಲೂಕಿನ ತೋಪೇನಹಳ್ಳಿ ಗ್ರಾಮದ ನಿವಾಸಿ ಜಗದೀಶ ಎಂಬುವರದು ಎಂಬುದನ್ನು ಪತ್ತೆ ಮಾಡಿ, ಈತನ ಕೊಲೆ ಮಾಡಿ ಕೆನಾಲ್‍ಗೆ ಬಿಸಾಕಿದ್ದ ಚನ್ನಗಿರಿ ತಾಲೂಕಿನ ತೋಪೇನಹಳ್ಳಿ ಗ್ರಾಮದ ಕೃಷಿಕರಾದ ಮೃತ ಜಗದೀಶನ ತಂದೆ ಟಿ.ಹೆಚ್.ರಂಗಸ್ವಾಮಿ (34), ಟಿ.ಎನ್ ಹನುಮಂತಪ್ಪ (60), ತಿಪ್ಪೇಶ್ (29) ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತ ಜಗದೀಶ್ ಪ್ರತಿದಿನ ಮದ್ಯಪಾನ ಮಾಡಿಕೊಂಡು ಬಂದು ಮನೆಯಲ್ಲಿ ಗಲಾಟೆ ಮಾಡಿ ಎಲ್ಲರಿಗೂ ಹಿಂಸೆ ನೀಡುತ್ತಿದ್ದರಿಂದ ಬೇಸತ್ತ ಇವರು, ಅ.3ರಂದು ಬೆಳಿಗ್ಗೆ 3 ಗಂಟೆ ಸುಮಾರಿಗೆ ಹಗ್ಗದಿಂದ ಕತ್ತನ್ನು ಬಿಗಿದು ಕೊಲೆ ಮಾಡಿ ನಂತರ ಕೈಕಾಲುಗಳನ್ನು ಕಟ್ಟಿ ತೋಪೇನಹಳ್ಳಿ ಗ್ರಾಮದಲ್ಲಿರುವ ಚಾನೆಲ್‍ನಲ್ಲಿ ದೇಹವನ್ನು ಬಿಸಾಕಿದ್ದರು. ಈ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜೆ ಉದೇಶ್ ಮತ್ತು ದಾವಣಗೆರೆ ನಗರ ಉಪವಿಭಾಗದ ಡಿ.ವೈ.ಎಸ್.ಪಿ ನಾಗರಾಜ್ ಮಾರ್ಗದರ್ಶನದಲ್ಲಿ ಕೇಂದ್ರ ವೃತ್ತ ಸಿ.ಪಿ.ಐ ಆನಂದ್ ಇ. ವಿದ್ಯಾನಗರ ಪೆÇಲೀಸ್ ಠಾಣೆಯ ಪಿ.ಎಸ್.ಐ ಪ್ರಸಾದ್ ಪಿ ಹಾಗೂ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ಆನಂದ್, ಬುಡೇನ್ ವಲಿ, ಅಂಜಿನಪ್ಪ ಪೂಜಾರ್, ನರೇಂದ್ರ ಬಾಬು, ಗೋಪಿನಾಥ ಬಿ ನಾಯ್ಕ್ ಅವರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ