ಹೊಳಲ್ಕೆರೆ:
ದುರ್ಬಲರ ಶೋಷಣೆ, ಜಾತೀಯತೆ, ಮೇಲು ಕೀಳು, ತಾರತಮ್ಯ, ಅಸ್ಪøಷ್ಯತೆ, ಮೂಢ ನಂಬಿಕೆಗಳ ಸೃಷ್ಠಿ, ಶಿಕ್ಷಣದಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದಾಗ ಶರಣರ ಅಗ್ರಗಣ್ಯ ಬಳಗದಲ್ಲಿ ಮಡಿವಾಳ ಮಾಚಿದೇವ ಅತ್ಯಂತ ಪ್ರಕಾಶಮಾನವಾಗಿ ಕಂಡುಬಂದರು ಎಂದು ಪ.ಪಂ. ಅಧ್ಯಕ್ಷೆ ಸವಿತಾ ಬಸವರಾಜ್ ತಿಳಿಸಿದರು.
ಶ್ರೀ ಪ್ರಸನ್ನ ಗಣಪತಿ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಮಡಿವಾಳ ಸಮಾಜದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಚನ ಸಂರಕ್ಷಕ ಮಡಿವಾಳ ಮಾಚಿದೇವ ಜಯಂತೋತ್ಸವವನ್ನು ಕುರಿತು ಮಾತನಾಡಿದರು.
ಇವುಗಳೆಲ್ಲವುಗಳಿಂದ ಮಹಿಳೆಯರು, ವೃತ್ತಿ ನಿರತ ಶ್ರಮಜೀವಿಗಳು, ಬಡವರು ದೀನ ದಲಿತರು, ನಿರಾಶೆ-ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು. ಸರ್ವರಿಗೂ ಸಮಪಾಲು, ಸಮಬಾಳು ಒದಗಿಸಲು ಬಸವ-ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು ಎಂದರು.
ಬಿಇಓ ಜಗದೀಶ್ವರ್ ಮಾತನಾಡಿ ಮಾಚಯ್ಯ ಹುಟ್ಟಿನಿಂದಲೂ ಮಡಿವಾಳನಾಗಿದ್ದು ಅಚಲ ಕಾಯಕ ನಿಷ್ಟನಾಗಿದ್ದ, ಹಿಮಾಲಯದಷ್ಟು ದೃಢನಾಗಿದ್ದ ತನ್ನ ಕಾಯಕವೇ ಭಕ್ತಿ ಜೀವನದುಸಿರು ಎಂದು ನಂಬಿದ್ದ. ಜಂಗಮ ವೇಷದಲ್ಲಿ ಬಂದ ಶಿವನ ಬಟ್ಟೆಗಳನ್ನು ಆತನ ಷರತ್ತಿನ ಮೇರೆಗೆ ತನ್ನ ಹೆಂಡತಿ ಮಲ್ಲಿಗೆಮ್ಮಳ ಎದೆ ಬಗೆದ ರಕ್ತದಲ್ಲಿ ಒಗೆದು ಒಣಗಿಸಿಕೊಂಡು ಬಂದ ಸಂದರ್ಭದ ದಂತ ಕಥೆ ಹಿಮಾಚಲಕ್ಕಿಂತಲೂ ಗಟ್ಟಿ ಕಾಯಕದ ಹಿರಿಯಾಳು ಮಾಚಿದೇವನಾಗಿದ್ದ ಎಂದು ತಿಳಿಸಿದರು.
ಶಿವಶರಣರ ಹಾಗೂ ಕಾಯಕದಲ್ಲಿ ನಿಷ್ಠೆಯುಳ್ಳ ಮೈಲಿಗೆಯ ಬಟ್ಟೆಗಳನ್ನು ಮಡಿ ಮಾಡಿ ಮುಟ್ಟಿಸುವ ಕಾಯಕ ಇವರದಾಗಿತ್ತು. ಮಡಿ ಬಟ್ಟೆ ಹೊತ್ತುಕೊಂಡು ವೀರ ಘಂಟೆ ಬಾರಿಸುತ್ತ ಭಕ್ತರಲ್ಲದವರು ತಮ್ಮನ್ನು ಮುಯಟ್ಟಬಾರದೆಂದು ನಿಯಮವನ್ನು ವಿರೋಧಿಸಿ ಅರಸುತನ ಮೇಲಲ್ಲ, ಅಗಸತನ ಕೀಳಲ್ಲ ಎಂಬುದನ್ನು ಜನಕ್ಕೆ ಸಾರಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಹಾಗೂ ತಾಲ್ಲೂಕು ದಂಡಾಧಿಕಾರಿಗಳಾದ ಕೆ.ನಾಗರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಇಓ ಮಹಾಂತೇಶ್, ತಾಲ್ಲುಕು ಮಡಿವಾಳ ಸಮಾಜದ ಹಿರಿಯ ಮುಖಂಡ ಹೆಚ್.ಗುರುಸ್ವಾಮಿ ಮಾತನಾಡಿದರು.
ಮಡಿವಾಳ ಸಮಾಜದ ಮುಖಂಡರುಗಳಾದ ಹೆಚ್.ವೈ.ಮಂಜುನಾಥ್, ಕ.ರಾ.ಮ. ಯುವ ಘಟಕದ ರಾಜ್ಯಾಧ್ಯಕ್ಷ ಕೆ.ವಿ.ಧೃವಕುಮಾರ್, ಉದ್ಯಮಿ ಹೆಚ್.ಬಸವರಾಜ್, ಮಡಿವಾಳ ಕ್ಷೇಮಾಭಿವೃಧ್ದಿ ಸಂಘದ ಅಧ್ಯಕ್ಷ ಎಲ್.ಸಿದ್ದಣ್ಣ, ಗೌರವಾಧ್ಯಕ್ಷ ವೈ.ಎಂ.ಮೂರ್ತಿ, ವೀರೇಶ್, ಶಿವಕುಮಾರ್ ಮಡಿವಾಳ ಸಮಾಜದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹತ್ತನೆ ತರಗತಿ ಹಾಗೂ ಪಿಯುಸಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು.
ತಾಲ್ಲೂಕು ಕಚೇರಿಯ ಆವರಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಚನ ಸಂರಕ್ಷಕ ಮಡಿವಾಳ ಮಾಚಿದೇವರ ಭಾವ ಚಿತ್ರ ಮತ್ತು ಕಲಾತಂಡದೊಂದಿಗೆ ಮೆರವಣಿಗೆಯನ್ನು ಪ್ರಸನ್ನ ಗಣಪತಿ ಕಲ್ಯಾಣ ಮಂಟಪದವರೆಗೆ ಹೊರಟಿತ್ತು.