ಮತದಾರರ ಜಾಗೃತಿಗಾಗಿ 15 ಕೋಟಿ ರೂ.ಗಳ ವೆಚ್ಚ

ತುಮಕೂರು:
 
       ಮತದಾನದ ಸರಾಸರಿ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಚುನಾವಣಾ ಆಯೋಗವು 15 ಕೋಟಿ ರೂ.ಗಳನ್ನು ರಾಜ್ಯದಲ್ಲಿ ವೆಚ್ಚ ಮಾಡುತ್ತಿದೆ. ರಾಜ್ಯಾದ್ಯಂತ ಜಾಗೃತಿ ಮೂಡಿಸಲು ಇದಕ್ಕಾಗಿಯೇ 15 ಕೋಟಿ ರೂ.ಗಳನ್ನು ನಿಗದಿ ಮಾಡಿದೆ. 
 
       ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಬೇಕು ಎಂಬುದು ಆಯೋಗದ ಉದ್ದೇಶ. ಈ ಕಾರಣಕ್ಕಾಗಿ ಮತದಾರರೇ ಮತಗಟ್ಟೆಗೆ ಬನ್ನಿ, ಹಕ್ಕು ಚಲಾಯಿಸಿ ಎಂಬ ಅಭಿಯಾನದಡಿಯಲ್ಲಿ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಸ್ವೀಪ್ ಸಮಿತಿಯು ಈ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಜಿಲ್ಲಾ ಮಟ್ಟದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಾಕಿಕೊಳ್ಳುತ್ತಿದೆ. 
       ರಾಜ್ಯ ಮಟ್ಟದಲ್ಲಿ ಸ್ಪೀಪ್ ಚಟುವಟಿಕೆಗೆ ರಾಯಭಾರಿಗಳನ್ನು ನೇಮಿಸಿರುವಂತೆಯೇ ಜಿಲ್ಲಾ ಮಟ್ಟದಲ್ಲೂ ರಾಯಭಾರಿಗಳನ್ನು ನೇಮಿಸಲಾಗುತ್ತಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪೀಪ್ ಕಾರ್ಯಕ್ರಮಗಳನ್ನು ಆಯೋಗ ಜಾರಿಗೆ ತಂದಿತು. ಆ ಸಮಯದಲ್ಲಿ ಮತದಾರ ಜಾಗೃತಿ ಬಗ್ಗೆ ಹೆಚ್ಚು ಆಸಕ್ತಿ ವಹಿಸಲಾಯಿತು.
       
        ಸಂಘ ಸಂಸ್ಥೆಗಳು ಸರ್ಕಾರದ ಜೊತೆ ಕೈಜೋಡಿಸಿದವು. ಎಷ್ಟರಮಟ್ಟಿಗೆ ಇಂತಹ ಜಾಗೃತಿ ಕಾರ್ಯಕ್ರಮಗಳು ಯಶಸ್ವಿಯಾದವೆಂದರೆ ಸರ್ಕಾರದ ಕಾರ್ಯಕ್ರಮಗಳಿಗಿಂತ ಹೆಚ್ಚಾಗಿ ಖಾಸಗಿ ಸಂಘ ಸಂಸ್ಥೆಗಳ ಅಭಿಯಾನವೇ ಹೆಚ್ಚು ಮಹತ್ವ ಪಡೆದುಕೊಂಡಿತು. 
         ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ನಿಜವಾದ ಪ್ರಭು ಅಗಿರುವುದರಿಂದ ಉತ್ತಮರನ್ನು, ಯೋಗ್ಯರನ್ನು ಆಯ್ಕೆ ಮಾಡಲು ಇದೊಂದು ಸದವಕಾಶ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದೇ ಸಂಘ ಸಂಸ್ಥೆಗಳು ಬೀದಿಗಿಳಿದು ಅರಿವಿನ ಮಹತ್ವ ಮೂಡಿಸಿದವು. ಜನಜಾಗೃತಿಯ ಈ ಕಾರ್ಯಕ್ರಮಗಳಿಗೆ ಉತ್ತಮ ಸ್ಪಂದನೆಯು ದೊರೆಯಿತು.
 
         ಮತದಾನ ಕಡ್ಡಾಯ ಎಂಬುದನ್ನು ಸಾರ್ವಜನಿಕವಾಗಿ ಸಾರಲಾಯಿತು. ಮಾಧ್ಯಮಗಳಂತೂ ಈ ವಿಷಯದಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಮತದಾನದ ಮಹತ್ವವನ್ನು ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾದವು.
ಆನಂತರ ಬಂದ 2014ರ ಲೋಕಸಭಾ ಚುನಾವಣೆಯಲ್ಲಿಯೂ ಇದೇ ತರಹದ ಅರಿವಿನ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಇದರ ಪರಿಣಾಮ ಮತದಾನದ ಪ್ರಮಾಣದಲ್ಲಿ ಏರಿಕೆ ಕಂಡುಬಂದಿತು. ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳು ವಿಶೇಷ ಕಾಳಜಿ ವಹಿಸಿದ್ದರಿಂದ ಹಾಗೂ ಮತದಾನ ಎಷ್ಟು ಪವಿತ್ರ ಎಂಬುದನ್ನು ತಿಳಿಸಿಕೊಡಲಾಗಿದ್ದರಿಂದ ಬಹುತೇಕ ಮಂದಿ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
          2018ರ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಅರಿವಿಗಾಗಿ ಚುನಾವಣಾ ಆಯೋಗವು 12 ಕೋಟಿ ರೂ.ಗಳನ್ನು ವೆಚ್ಚ ಮಾಡಿತು. ಮತದಾನ ಜಾಗೃತಿಗೆ ವಿವಿಧ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಹಾಲಿನ ಪ್ಯಾಕೇಟ್, ವಿದ್ಯುತ್ ಬಿಲ್‍ಗಳ ರಸೀದಿ ಸೇರಿದಂತೆ ಸಾರ್ವಜನಿಕರು ದೈನಂದಿನ ಉಪಯೋಗಗಳ ಚೀಟಿ ರಸೀದಿಗಳಲ್ಲಿ ಕಡ್ಡಾಯ ಮತದಾನದ ಬಗ್ಗೆ ಹೆಚ್ಚು ಒತ್ತು ನೀಡಲಾಯಿತು.
         ಅಲ್ಲದೆ, ಘೋಷವಾಕ್ಯವನ್ನು ಅದರಲ್ಲಿ ಮುದ್ರಿಸಲಾಯಿತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಮತ ಜಾಗೃತಿಗಾಗಿ ಚುನಾವಣಾ ಆಯೋಗವು ಯಥೇಚ್ಛವಾಗಿ ಹಣ ಖರ್ಚು ಮಾಡುತ್ತಿದೆ. ಸ್ಪೀಪ್ ಸಮಿತಿಯ ಕಾರ್ಯಕ್ರಮಗಳು ಇದರಡಿಯಲ್ಲಿಯೇ ನಡೆಯುತ್ತಿವೆ. ಸ್ವೀಪ್ ಕಾರ್ಯಕ್ರಮಗಳಿಗೆ ನಿಗದಿಪಡಿಸಿದ ಹಣವನ್ನು ಜಿಲ್ಲಾವಾರು 20 ಲಕ್ಷ ರೂ.ಗಳಿಂದ 25 ಲಕ್ಷ ರೂ.ಗಳವರೆಗೆ ಹಂಚಿಕೆ ಮಾಡಲಾಗುತ್ತದೆ.
          ಮತದಾನದ ಪ್ರಮಾಣ ಹೆಚ್ಚಿಸುವ ಸಲುವಾಗಿ 2013ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪೀಪ್ ಕಾರ್ಯಕ್ರಮಗಳನ್ನು ಆಯೋಗ ಹಮ್ಮಿಕೊಂಡಿತ್ತು. ಅಂದಿನಿಂದ ಮತದಾನ ಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಸ್ವೀಪ್ ಸಮಿತಿ ಕೈಗೊಳ್ಳುತ್ತಿದೆ. ಇದಕ್ಕಾಗಿ ಅನುದಾನ ನಿಗದಿಪಡಿಸಲಾಗಿದೆ. ಪ್ರತಿ ಜಿಲ್ಲೆಗೆ 20 ರಿಂದ 25 ಲಕ್ಷ ರೂ.ಗಳವರೆಗೆ ಹಣ ಹಂಚಲಾಗುತ್ತದೆ. ಮತದಾನದ ಪ್ರಮಾಣದಲ್ಲಿ ಹೆಚ್ಚಳ ಮಾಡುವುದು ಇದರ ಮುಖ್ಯ ಉದ್ದೇಶ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ