ಹಾನಗಲ್ಲ :
ನನ್ನ ದೇಶ ನನ್ನ ಹಕ್ಕು. ಪ್ರೀತಿಯ ಮತದಾರರೇ ನಿಮ್ಮ ಕನಸಿನ ಸುಂದರವಾದ ಭಾರತವನ್ನು ಕಾಣುವ ಸುಸಂದರ್ಭ ಬಂದಿದೆ. ಎಪ್ರೀಲ್ 23 ರಂದು ಈ ಭಾಗದಲ್ಲಿ ನಡೆಯುವ ಮತದಾನದ ಪ್ರಕ್ರಿಯೆಯಲ್ಲಿ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಿ. ಅರ್ಹ ಮತದಾರರು ಮತದಾನದಿಂದ ದೂರ ಉಳಿಯದೇ ಮತಗಟ್ಟೆಗೆ ಬಂದು ನಿಮ್ಮ ಮತವನ್ನು ಕಡ್ಡಾಯವಾಗಿ ಚಲಾಯಿಸಲು ಅಕ್ಕಿಆಲೂರ ಜ್ಞಾನಭಾರತಿ ಯುಕೆಜಿ ವಿದ್ಯಾರ್ಥಿನಿ ವಚನಾ ಚಿಲ್ಲೂರಮಠ ಪದವಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಟ್ಟಣದ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಆಯೋಜಿಸಿದ ವಿನೂತನ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಚಿಕ್ಕ ಬಾಲೆ ವಚನಾ ಮಾತನಾಡಿ, ಸೇರಿದ ಎಲ್ಲ ವಿದ್ಯಾರ್ಥಿ, ಉಪನ್ಯಾಸಕರಿಗೆ ಮತದಾನ ಮಾಡುವಂತೆ ಪ್ರಮಾಣ ವಚನ ಬೋಧಿಸಿದಳು.
ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಡಾ. ಪ್ರಕಾಶ ಹೊಳೇರ ಮಾತನಾಡಿ, ಉತ್ಕøಷ್ಟ ಪ್ರಜಾಪ್ರಭುತ್ವ ಹೊಂದಿದ ಭಾರತದಲ್ಲಿ ಪ್ರಜೆಗಳಾದ ನಾವು ಮತದಾನದ ಮೂಲಕ ದೇಶದ ಋಣ ತೀರಿಸುವುದರ ಮೂಲಕ ನಮ್ಮ ಪ್ರಭುತ್ವವನ್ನು ಸಾಧಿಸಿ ದೇಶದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕೆಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಪ್ರೊ. ಸಿ. ಮಂಜುನಾಥ. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಎಂ.ಎಚ್. ಹೊಳಿಯಣ್ಣನವರ, ಉಪನ್ಯಾಸಕರಾದ ಭೀಮಾವತಿ ಸೋಮನಕಟ್ಟಿ, ಪ್ರೇಮಕಿಶನ್ ಬಳ್ಳಾರಿ, ಸಾಧಿಕ್ ಬಡಗಿ, ಭಾಗ್ಯಲಕ್ಷ್ಮಿ ಹುರಳಿಕುಪ್ಪಿ, ಮಧುಮತಿ ಜಂಗಲಿ, ನಾಗರಾಜ ಹಾವನೂರ, ಆರತಿ ಪಾಟೀಲ, ದಿವ್ಯಾ, ಶಿಕ್ಷಕ ಚಿಲ್ಲೂರಮಠ ಮೊದಲಾದವರು ಇದ್ದರು.