ಮತ ಎಣಿಕೆಗೆ ಪೂರ್ಣ ಸಿದ್ಧತೆ

ಹಾನಗಲ್ಲ :

             ಹಾನಗಲ್ಲ ಪುರಸಭೆ ಚುನಾವಣೆಯ ಮತದಾನ ಶುಕ್ರವಾರ ನಡೆದಿದ್ದು, ಮತಗಳ ಎಣಿಕೆ ಸೋಮವಾರ ಜರುಗಲಿದೆ. ಮತ ಎಣಿಕೆಯ ಸಿದ್ಧತೆಗಳು ಹಾಗೂ ಅಭ್ಯರ್ಥಿಗಳಿಗೆ ಸೂಚನೆಗಳನ್ನು ನೀಡುವುದಕ್ಕಾಗಿ ಶನಿವಾರ ತಹಸೀಲ್ದಾರ್ ಕಚೇರಿಯಲ್ಲಿ ಸಭೆ ನಡೆಯಿತು.

             ಸಭೆಯ ಅಧ್ಯಕ್ಷತೆವಹಿಸಿದ್ದ ತಹಸೀಲ್ದಾರ್ ಶಕುಂತಲಾ ಚೌಗಲಾ ಮಾತನಾಡಿ, ಬೆಳಿಗ್ಗೆ 8ಕ್ಕೆ ಮಿನಿವಿಧಾನ ಸೌಧದ ಕಟ್ಟಡದ ಎರಡು ವಿಭಾಗಗಳಲ್ಲಿ ಮತ ಎಣಿಕೆ ನಡೆಸಲಾಗುತ್ತಿದ್ದು, 1 ರಿಂದ 12 ವಾರ್ಡುಗಳ ಮತ ಎಣಿಕೆ 2 ಟೇಬಲ್‍ಗಳು ಮತ್ತು 13 ರಿಂದ 23 ರವರೆಗೆ ಇನ್ನೊಂದು ಕೊಠಡಿಯಲ್ಲಿ 2 ಟೇಬಲ್‍ಗಳಲ್ಲಿ ಮತ ಎಣಿಕೆ ನಡೆಸಲಾಗುತ್ತದೆ. ಮತ ಎಣಿಕೆ ಮುಗಿಯುತ್ತಿದ್ದಂತೆ ಫಲಿತಾಂಶವನ್ನೂ ಘೋಷಿಸಲಾಗುತ್ತದೆ. ಮತ ಎಣಿಕೆಯಲ್ಲಿ ಅಭ್ಯರ್ಥಿ ಹಾಗೂ ಓರ್ವ ಪ್ರತಿನಿಧಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಇದರೊಂದಿಗೆ ಭಾವಚಿತ್ರ ಹೊಂದಿದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು, ಮೊಬೈಲ್ ಹಾಗೂ ಯಾವುದೇ ವಸ್ತುಗಳಿಗೆ ಅವಕಾಶವಿರುವುದಿಲ್ಲ. ರಾಜಕೀಯ ಪಕ್ಷಗಳ ಮುಖಂಡರು, ಬೆಂಬಲಿಗರ ಪ್ರವೇಶವನ್ನು ನಿರ್ಭಂಧಿಸಲಾಗಿದೆ.

              ಮತಯಂತ್ರದಲ್ಲಿರುವ ಮತಗಳ ಸಂಖ್ಯೆಯೇ ಅಂತಿಮವಾಗಿರುತ್ತದೆ. ಟೆಂಡರ್ ಓಟುಗಳನ್ನು ಎಣಿಕೆಯಲ್ಲಿ ಪರಿಗಣಿಸಲಾಗುವುದಿಲ್ಲ. ಆದರೆ ವಾರ್ಡವಾರು ನೋಟಾ ಮತಗಳ ಸಂಖ್ಯೆ ಪ್ರಕಟಿಸಲಾಗುತ್ತದೆ ಎಂದು ವಿವರಿಸಿದರು.
ಸಿಪಿಐ ರೇವಣ್ಣ ಕಟ್ಟಿಮನಿ ಮಾತನಾಡಿ, ಮತ ಎಣಿಕೆ ವ್ಯಾಪ್ತಿಯಲ್ಲಿ ಪಟ್ಟಣದಲ್ಲಿ 144ನೇ ಕಲಂ ಜಾರಿಗೊಳಿಸಲಾಗುತ್ತಿದ್ದು, ಯಾವುದೇ ಸಭೆ-ಸಮಾರಂಭ, ಧ್ವನಿವರ್ಧಕ ಬಳಕೆ, ಮೆರವಣಿಗೆ ನಡೆಸುವಂತಿಲ್ಲ. ಅಹಿತಕರ ಘಟನೆಗಳು ನಡೆಯದಂತೆ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ, ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮತ್ತೋರ್ವ ಚುನಾವಣಾಧಿಕಾರಿ ಜಾವೇದ್ ಮುಲ್ಲಾ, ಕೆ.ಎಚ್.ಶ್ರೀಧರ್, ಮಹೇಶ್ ನಾಯ್ಕ, ಪಿಎಸ್‍ಐ ಟಿ.ಮುರುಗೇಶ್, ಅಭ್ಯರ್ಥಿಗಳು, ಪ್ರತಿನಿಧಿಗಳು ಉಪಸ್ಥಿತರಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link