ಕೆಎಸ್ಆರ್ಟಿಸಿ, ವಾಯವ್ಯ ಹಾಗೂ ಕಲ್ಯಾಣ ಕರ್ನಾಟಕ ನಿಗಮಗಳಲ್ಲಿ ಶೇ.23, ಬಿಎಂಟಿಸಿಯಲ್ಲಿ ಶೇ.35ರಷ್ಟು ಹೆಚ್ಚಳ

ಬೆಂಗಳೂರು: ನಂದಿನಿ ಹಾಲಿನ ಬೆಲೆ ಏರಿಕೆಯ ಬಿಸಿ ತಣ್ಣಗಾಗುವ ಮುನ್ನವೇ ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬರೆ ಬಿದ್ದಿದೆ. ರಾಜ್ಯ ಸರ್ಕಾರ ಬಸ್ ಪ್ರಯಾಣ ದರವನ್ನು ಹೆಚ್ಚಿಸಿದ್ದು, ಪರಿಷ್ಕöÈತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಇದರಿಂದ ನಿತ್ಯ ಬಸ್ಗಳಲ್ಲಿ ಸಂಚರಿಸುವ ಲಕ್ಷಾಂತರ ಪ್ರಯಾಣಿಕರ ಜೇಬಿಗೆ ಮತ್ತಷ್ಟು ಹೊರೆ ಬೀಳಲಿದೆ.
ಡೀಸೆಲ್ ಬೆಲೆ ಏರಿಕೆ, ಸಾರಿಗೆ ನೌಕರರ ವೇತನ ಹೆಚ್ಚಳ ಹಾಗೂ ನಿರ್ವಹಣಾ ವೆಚ್ಚಗಳ ಏರಿಕೆಯಿಂದ ನಾಲ್ಕು ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಶೇ.23ರಷ್ಟು ಮತ್ತು ಬಿಎಂಟಿಸಿಯಲ್ಲಿ ಶೇ.35ರಷ್ಟು ಪ್ರಯಾಣ ದರ ಹೆಚ್ಚಿಸಲಾಗಿದೆ. ಸಾಮಾನ್ಯ ಸಾರಿಗೆಯಲ್ಲಿ ಗರಿಷ್ಠ 9 ರೂ. ಹಾಗೂ ವೇಗದೂತ ಸಾರಿಗೆಯಲ್ಲಿ ಗರಿಷ್ಠ 18 ರೂ. ಹೆಚ್ಚಳ ಮಾಡಲಾಗಿದೆ.
ಮೈಸೂರು ಪ್ರಯಾಣಕ್ಕೆ 37 ರೂ. ಹೆಚ್ಚುವರಿ ಹೊರೆ:
ದರ ಏರಿಕೆಯಿಂದ ದೂರದ ಪ್ರಯಾಣಿಕರಿಗೂ ಬಿಸಿ ತಟ್ಟಲಿದೆ. ಬೆಂಗಳೂರಿನಿAದ ಹೊಸಕೋಟೆಗೆ 35 ರೂ. ಇದ್ದ ದರ 44 ರೂ.ಗೆ, ಆನೇಕಲ್ಗೆ 38 ರೂ. ಇದ್ದ ದರ 47 ರೂ.ಗೆ ಏರಿಕೆಯಾಗಿದೆ. ಬೆಂಗಳೂರಿನಿAದ ತುಮಕೂರಿಗೆ 81 ರೂ. ಇದ್ದ ಪ್ರಯಾಣ ದರ 100 ರೂ.ಗೆ, ಮೈಸೂರಿಗೆ 160 ರೂ. ಇದ್ದ ದರ 197 ರೂ.ಗೆ ಹಾಗೂ ಚಿಕ್ಕಮಗಳೂರಿಗೆ 295 ರೂ. ಇದ್ದ ದರ 363 ರೂ.ಗೆ ಹೆಚ್ಚಳವಾಗಿದೆ.
ಬಿಎಂಟಿಸಿ ಬಸ್ಗಳಲ್ಲಿಯೂ ಪ್ರಯಾಣ ದರ ಹೆಚ್ಚಳವಾಗಿದ್ದು, ಎರಡು ಕಿ.ಮೀ.ವರೆಗಿನ ಪ್ರಯಾಣಕ್ಕೆ 4 ರೂ., 2ರಿಂದ 4 ಕಿ.ಮೀ.ವರೆಗಿನ ಪ್ರಯಾಣಕ್ಕೆ 6 ರೂ. ಹೆಚ್ಚಿಸಲಾಗಿದೆ. ಹವಾ ನಿಯಂತ್ರಿತ ವಜ್ರ ಬಸ್ಗಳಲ್ಲಿಯೂ ದೂರಕ್ಕೆ ಅನುಗುಣವಾಗಿ 5ರಿಂದ 15 ರೂ.ವರೆಗೆ ದರ ಏರಿಕೆ ಮಾಡಲಾಗಿದೆ.
ನಷ್ಟದ ಹೊರೆ, ಸರ್ಕಾರದ ಸಮರ್ಥನೆ:
ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ನೀಡಿದ ವರದಿ ಹಾಗೂ ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಗತಿಗಳನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ. ಪ್ರತಿ ವರ್ಷ ಸುಮಾರು 2 ಸಾವಿರ ಕೋಟಿ ರೂ. ನಷ್ಟವಾಗುತ್ತಿದ್ದು, ಇಂಧನ ಮತ್ತು ಸಿಬ್ಬಂದಿ ವೇತನಕ್ಕೆ ಶೇ.80ರಷ್ಟು ಆದಾಯ ವೆಚ್ಚವಾಗುತ್ತಿದೆ ಎಂದು ವಿವರಿಸಿದ್ದಾರೆ.
ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೆ ನಷ್ಟವಾಗುತ್ತಿಲ್ಲ. 2023ರಿಂದ 2026ರ ಅಕ್ಟೋಬರ್ವರೆಗೆ ಯೋಜನೆಯಡಿ 16,594 ಕೋಟಿ ರೂ. ಅನುದಾನ ನೀಡಲಾಗಿದೆ. ಬಾಕಿ ಇರುವ 6,300 ಕೋಟಿ ರೂ.ಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಒಟ್ಟಿನಲ್ಲಿ, ಹಾಲು, ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಇದೀಗ ಬಸ್ ಪ್ರಯಾಣ ದರವೂ ಹೆಚ್ಚಳವಾಗಿರುವುದು ಜನಸಾಮಾನ್ಯರ ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಬಾಕ್ಸ್
ಸಾಮಾನ್ಯ ಬಸ್ಗಳು – ಬೆಂಗಳೂರಿನಿAದ
ಕೋಲಾರ: ಪ್ರಸ್ತುತ ದರ- 81, ಪರಿಷ್ಕೃತ ದರ- 100
ತುಮಕೂರು: ಪ್ರಸ್ತುತ ದರ- 81, ಪರಿಷ್ಕೃತ ದರ- 100
ಮಂಡ್ಯ: ಪ್ರಸ್ತುತ ದರ- 110, ಪರಿಷ್ಕೃತ ದರ- 136
ಮೈಸೂರು: ಪ್ರಸ್ತುತ ದರ-160, ಪರಿಷ್ಕೃತ ದರ- 197
ಹಾಸನ: ಪ್ರಸ್ತುತ ದರ- 219, ಪರಿಷ್ಕೃತ ದರ- 270
ಚಿಕ್ಕಮಗಳೂರು: ಪ್ರಸ್ತುತ ದರ- 295, ಪರಿಷ್ಕೃತ ದರ- 363
ನೆಲಮಂಗಲ: ಪ್ರಸ್ತುತ ದರ – 35, ಪರಿಷ್ಕೃತ ದರ -44
ಹೊಸಕೋಟೆ: ಪ್ರಸ್ತುತ ದರ- 35, ಪರಿಷ್ಕೃತ -44
ದೊಡ್ಡಬಳ್ಳಾಪುರ: ಪ್ರಸ್ತುತ ದರ- 38, ಪರಿಷ್ಕೃತ ದರ- 47
ಆನೇಕಲ್: ಪ್ರಸ್ತುತ ದರ- 38, ಪರಿಷ್ಕೃತ ದರ- 47
ಮಾಗಡಿ: ಪ್ರಸ್ತುತ ದರ- 46, ಪರಿಷ್ಕೃತ ದರ -57
ಮಾಲೂರು: ಪ್ರಸ್ತುತ ದರ- 46, ಪರಿಷ್ಕೃತ ದರ- 57
ಬಾಕ್ಸ್
ವೇಗದೂತ ಸಾರಿಗೆ – ಬೆಂಗಳೂರಿನಿAದ
ಕೋಲಾರ: ಪ್ರಸ್ತುತ ದರ- 81, ಪರಿಷ್ಕೃತ ದರ – 100
ತುಮಕೂರು: ಪ್ರಸ್ತುತ ದರ- 81, ಪರಿಷ್ಕೃತ ದರ -100
ಮಂಡ್ಯ: ಪ್ರಸ್ತುತ ದರ- 110, ಪರಿಷ್ಕೃತ ದರ -136
ಮೈಸೂರು: ಪ್ರಸ್ತುತ ದರ-160, ಪರಿಷ್ಕೃತ ದರ -197
ಹಾಸನ: ಪ್ರಸ್ತುತ ದರ- 219, ಪರಿಷ್ಕೃತ ದರ -270
ಚಿಕ್ಕಮಗಳೂರು: ಪ್ರಸ್ತುತ ದರ- 295, ಪರಿಷ್ಕೃತ ದರ -363
ಬಾಕ್ಸ್
16 ಸಾವಿರ ಕೋಟಿ ರೂ ವೆಚ್ಚ, 14 ಸಾವಿರ ಕೋಟಿ ರೂ ಆದಾಯ
2 ಸಾವಿರ ಕೋಟಿರೂ ನಷ್ಟದಲ್ಲಿ ಸಾರಿಗೆ
ಬಸ್ ದರ ಹೆಚ್ಚಳದ ಕುರಿತು ಮಾತನಾಡಿದ ಸಾರಿಗೆ ಸಚಿವ ಭೈರತಿ ಸುರೇಶ್ ಅವರು ನಾಲ್ಕೂ ಸಾರಿಗೆ ನಿಗಮಗಳು ವರ್ಷಕ್ಕೆ ಒಟ್ಟು ರೂ. 16ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದು, ಆದಾಯ ಸಂಗ್ರಹ ಸುಮಾರು ರೂ. 14 ಸಾವಿರ ಕೋಟಿ ಮಾತ್ರವಾಗಿದೆ. ಇದರಿಂದ ಪ್ರತಿವರ್ಷ ಸುಮಾರು ರೂ. 2 ಸಾವಿರ ಕೋಟಿ ಕೊರತೆ ಉಂಟಾಗುತ್ತಿದೆ. ನಿಗಮಗಳ ಸಾಲದ ಹೊರೆ, ಬಾಕಿ ಪಾವತಿಗಳು ಹಾಗೂ ನಿರ್ವಹಣಾ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ದರ ಪರಿಷ್ಕರಣೆ ಮಾಡಲಾಗಿದೆ. 2021ರಲ್ಲಿ ಶ್ರೀನಿವಾಸ ಮೂರ್ತಿ ಸಮಿತಿ ಕಾಲಕಾಲಕ್ಕೆ ಟಿಕೆಟ್ ದರ ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿತ್ತು. ಕಳೆದ ವರ್ಷ ಅತುಲ್ ಕುಮಾರ್ ತಿವಾರಿ ನೇತೃತ್ವದ ಸಮಿತಿಯೂ ಸಮಗ್ರ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅದರ ಆಧಾರದ ಮೇಲೆ ಈಗ ದರ ಏರಿಕೆ ನಿರ್ಧಾರ ಕೈಗೊಳ್ಳಲಾಗಿದೆ. ಜನವರಿ 2025ರಲ್ಲಿ ಕೊನೆಯ ಬಾರಿ ದರ ಹೆಚ್ಚಳ ಮಾಡಲಾಗಿತ್ತು. ಡೀಸೆಲ್ ಬೆಲೆ, ವೇತನ ಹಾಗೂ ನಿರ್ವಹಣಾ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಳೆಯ ದರದಲ್ಲಿ ಸೇವೆ ಮುಂದುವರಿಸುವುದು ಕಷ್ಟವಾಗಿದೆ ಎಂದು ಹೇಳಿದರು.








