ತುರುವೇಕೆರೆ
ತಾಲ್ಲೂಕಿನ ಜೀವನದಿ ಎಂದೆ ಪ್ರಸಿದ್ಧವಾಗಿರುವ ಮಲ್ಲಾಘಟ್ಟ ಕೆರೆ ಹೇಮಾವತಿ ನೀರಿನಿಂದ ತುಂಬಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಶಾಸಕ ಮಸಾಲ ಜಯರಾಂ ಅವರು ಮಲ್ಲಾಘಟ್ಟ ಹಾಗೂ ತುರುವೇಕೆರೆ ಕೆರೆಗೆ ಬಾಗಿನ ಅರ್ಪಿಸಿದರು.
ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ತಾಲ್ಲೂಕಿನ ಮಲ್ಲಾಘಟ್ಟ ಕೆರೆ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿದೆ. ತುರುವೇಕೆರೆ ಪಟ್ಟಣಕ್ಕೆ ಕೇವಲ 5 ಕಿ.ಮೀ. ಅಂತರದಲ್ಲಿದ್ದು ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಜೊತೆಗೆ ತಾಲ್ಲೂಕಿನ ಜೀವನಾಡಿಯಾಗಿದ್ದು ದೊಡ್ಡ ಕೆರೆ ಇದಾಗಿದೆ. 250 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು ಸುಮಾರು 580 ಎಂಸಿಎಫ್‍ಟಿ ನೀರು ಇದರಲ್ಲಿ ಸಂಗ್ರಹವಾಗುತ್ತದೆ. ಇದರ ವ್ಯಾಪ್ತಿ 57 ಕಿ.ಮೀ. ಒಳಗೊಂಡಿದೆ. ಈ ಕೆರೆಯ ಉತ್ತರ ಭಾಗದ ಕೋಡಿಯಲ್ಲಿ ಶ್ರೀ ಗಂಗಾಧರೇಶ್ವರ ಸ್ವಾಮಿಯ ದೇವಾಲಯದ ಪುಣ್ಯ ಕ್ಷೇತ್ರವಿದ್ದು ಕೇವಲ ಬಂಡೆಯ ಮೇಲೆ ಕಲ್ಲಿನಿಂದ ಈ ದೇವಸ್ಥಾನದ ಕಟ್ಟಡವನ್ನು ಅಡಿಪಾಯವಿಲ್ಲದೆ ಕಟ್ಟಲಾಗಿದೆ. ದೇವರ ಗರ್ಭಗುಡಿಯ ಮುಖ್ಯ ದ್ವಾರದ ಬಲಭಾಗದ ಗೋಡೆಯಲ್ಲಿ ಕಿರುಬೆರಳಿನಾಕಾರದ ಕಿಂಡಿಯಿದ್ದು ಗರ್ಭಗುಡಿಯ ಹಿಂಭಾಗದ ಗೋಡೆಯಲ್ಲೂ ಸಮಾನಾಂತರವಾಗಿ ಮತ್ತೊಂದು ಕಿಂಡಿಯಿದ್ದು ಈ ಕಿಂಡಿಯಲ್ಲಿ ನೋಡಿದರೆ ಸುಮಾರು 8 ಕಿ.ಮೀ. ಅಂತರದಲ್ಲಿರುವ ಶ್ರೀ ಕಂಚೀರಾಯಸ್ವಾಮಿ ಬೆಟ್ಟ ಕಾಣುತ್ತಿತ್ತಂತೆ. ಆದರೆ ಇಂದು ಮರಗಿಡಗಳು ದೊಡ್ಡವಾಗಿ ಬೆಳೆದಿರುವುದರಿಂದ ಕೇವಲ ಕೆಲವೇ ದೂರದಲ್ಲಿರುವ ಮಂಟಪ ಮಾತ್ರ ಇಂದು ಕಾಣುತ್ತಿದೆ. ಇಲ್ಲಿ ಪ್ರತಿ ದಿನ ಗಂಗಾಧರೇಶ್ವರನಿಗೆ ಪೂಜೆ ನಡೆಯುತ್ತಿದ್ದು ತಾಲ್ಲೂಕಿನಾದ್ಯಂತ ಮಹಿಳೆಯರಾಧಿಯಾಗಿ ನೂರಾರು ಜನ ಭಕ್ತರು ಪ್ರತಿದಿನ ಈ ಕ್ಷೇತ್ರಕ್ಕೆ ಭೇಟಿ ನೀಡಿ ಈ ಕೆರೆಯಲ್ಲಿ ಗಂಗಾ ಪೂಜೆ ಸಲ್ಲಿಸಿ ಬಾಗಿಣ ಅರ್ಪಿಸುವರು. ತಾಲ್ಲೂಕಿನ ಗ್ರಾಮಗಳ ದೇವರುಗಳ ಮಡಿವಂತಿಕೆಗೆ ಭಂಗಬಂದ ಸಂದರ್ಭದಲ್ಲಿ ದೇವರ ವಿಗ್ರಹ ಹಾಗೂ ದೇವರುಗಳ ವಸ್ತ್ರಗಳನ್ನು ಸ್ವಚ್ಛಗೊಳಿಸಿ ಪುಣ್ಯೇವು ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಪ್ರತಿದಿನ ಇಲ್ಲಿ ನಡೆಯುತ್ತಿರುತ್ತವೆÉ. ಇಲ್ಲಿ ಸಂಜೆಯ ಸಮಯದಲ್ಲಿ ಸೂರ್ಯಾಸ್ತಮವಾಗುವುದನ್ನು ನೋಡುವುದೇ ಒಂದು ಆನಂದ. ಸೂರ್ಯ ಮುಳುಗುವ ಸಮಯದಲ್ಲಿ ಕೆಂಪು ಉಂಡೆಯಾಗಿ ನೀರಿನಲ್ಲಿ ಪ್ರತಿಬಿಂಬ ನೋಡಲು ಮನಮೋಹಕವಾಗಿರುತ್ತದೆ.
ಕೆರೆಯ ದಕ್ಷಿಣ ಭಾಗದಲ್ಲಿ ಹಲವಾರು ವರ್ಷಗಳ ಹಿಂದೆ ಮತ್ತೊಂದು ಗಂಗಾಧರೇಶ್ವರನ ದೇವಸ್ಥಾನ ನಿರ್ಮಾಣ ಮಾಡಿದ್ದು ನೋಡಲು ಅತ್ಯದ್ಬುತವಾಗಿದೆ. ಇಲ್ಲಿ ಸಮುದಾಯ ಭವನವಿದ್ದು ಈ ಸ್ಥಳದಲ್ಲಿ ದೋಣಿ ವಿಹಾರಕ್ಕೆ ಸೂಕ್ತ ಸ್ಥಳವಾಗಿದೆ. ವಿಶಾಲ ಮೈದಾನ ಹೊಂದಿದ್ದು ಪ್ರವಾಸೋದ್ಯಮಕ್ಕೆ ಈ ಸ್ಥಳ ಹೇಳಿ ಮಾಡಿಸಿದಂತಿದೆ. ಶಿಂಷಾನದಿ ಮೂಲ ಈ ಸ್ಥಳದಿಂದಲೇ ಪ್ರಾರಂಭವಾಗಿ ಕುಣಿಗಲ್ ತಾ|| ಗೆ ಹೋದಂತೆ ದೊಡ್ಡ ನದಿಯಾಗಿ ಹರಿದು ಮಾರ್ಕೋನಹಳ್ಳಿ ಡ್ಯಾಂಗೆ ಸೇರಲಿದೆ.
ಸೂರ್ಯಾಸ್ತಮಯ ನೋಡುವುದೇ ಒಂದು ಆನಂದ: ಹೇಮಾವತಿ ಹಾಗೂ ಮಳೆ ನೀರಿನಿಂದ ಈ ಬಾರಿ ಕೆರೆ ತುಂಬಿ ಕೋಡಿ ಬಿದ್ದಿರುವುದರಿಂದ ಕೆರೆ ಕೋಡಿ ಬಿಳಿ ನೊರೆಯಿಂದ ಬಹಳ ಆಕರ್ಷಣೀಯವಾಗಿದೆ. ಇಂತಹ ಸೂರ್ಯ ಮುಳುಗುವ ರಮಣೀಯ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲು ಹಾಗೂ ನೀರಲ್ಲಿ ಆಟವಾಡಿ, ಈಜಾಡಿ ಕುಣಿದು ಕುಪ್ಪಳಿಸಲು ಕೈಬೀಸಿ ಕರೆಯುತ್ತಿದೆ. ಇಲ್ಲಿ ಮಕ್ಕಳು ಅನುಭವಿಸುವ ಖುಷಿ, ಉತ್ಸಾಹ ಹೇಳತೀರದು.
ಮಂಗಳವಾರ ಇಲ್ಲವೆ ಶುಕ್ರವಾರ ಮಾತ್ರ ಈ ಕೆರೆ ಕೋಡಿ ಬೀಳುವುದು ವಿಶೇಷ. ಅದರಂತೆ ಶುಕ್ರವಾರ ಕೆರೆ ಕೋಡಿ ಬಿದ್ದಿದ್ದು ಪ್ರತೀ ವರ್ಷ ಕೆರೆಗಳು ತುಂಬಿದ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಈ ಕೆರೆಯಲ್ಲಿಯೇ ಮೊದಲಿಗೆ ಬಾಗಿಣ ಅರ್ಪಿಸುವುದು ವಿಶೇಷ.
ಅದರಂತೆ ಸೋಮವಾರ ಚುನಾಯಿತ ಪ್ರತಿನಿಧಿಗಳು, ಪಟ್ಟಣ ಪಂಚಾಯಿತಿ ಸದಸ್ಯರುಗಳು, ಮಲ್ಲಾಘಟ್ಟ ಕೆರೆ ಆಜುಬಾಜು ರೈತರು, ಮುಖಂಡರುಗಳು ಸೇರಿದಂತೆ ಅಪಾರ ಕಾರ್ಯಕರ್ತರು ಹಾಗೂ ತಮ್ಮ ಕುಟುಂಬದವರೊಡಗೂಡಿ ಶಾಸಕರು ಶಾಸ್ತ್ರೋಕ್ತವಾಗಿ ಕೆರೆಗೆ ಬಾಗಿನ ಅರ್ಪಿಸಿದರು.
ಕೆರೆಗೆ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕರು ತಾಲ್ಲೂಕಿನ ಪ್ರತಿನಿಧಿಯಾಗಿ ತಮ್ಮ ಕ್ಷೇತ್ರದ ಜನರ ಯೋಗಕ್ಷೇಮ ಕಾಪಾಡುವ ಹೊಣೆ ನನ್ನದಾಗಿದ್ದು ಅದರಂತೆ ಈ ಬಾರಿ ಹೇಮಾವತಿ ನೀರಿನಿಂದ ತಾಲ್ಲೂಕಿನ ಎಲ್ಲಾ ಕೆರೆ ಕಟ್ಟೆಗಳು ತುಂಬಲಿದ್ದು ಅಂತರ್ಜಲ ವೃದ್ಧಿಯಾಗಿ ಜನರಲ್ಲಿ ಹರ್ಷ ಮೂಡಿರುವುದು ತಮಗೆ ತೃಪ್ತಿ ತಂದಿದೆ ಎಂದರು.
ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷ ಹಾಗೂ ಸದಸ್ಯರುಗಳು, ಚುನಾಯಿತ ಪ್ರತಿನಿಧಿಗಳು, ಆಜು ಬಾಜು ಗ್ರಾಮಸ್ಥರು, ಬಿಜೆಪಿ ಮುಖಂಡರುಗಳು ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.