ಅಧಿಕಾರಿಗಳ ತಪ್ಪಿನಿಂದ ಅಂಗವಿಕಲ ಆತ್ಮಹತ್ಯೆ

0
15

ತುಮಕೂರು

       ಅಧಿಕಾರಿಗಳ ತಪ್ಪು ಮಾಹಿತಿಯಿಂದ ಮಾಸಾಶನ ಬರುವುದು ತಪ್ಪಿತು ಎಂಬ ಕಾರಣಕ್ಕೆ ವಿಷ ಕುಡಿದು ಆತ್ಮಹತ್ಯೆಗೆ ಶರಣಾದ ಅಂಗವಿಕಲನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಹಾಗೂ ಕುಟುಂಬದ ಓರ್ವರಿಗೆ ಸರಕಾರಿ ಉದ್ಯೋಗ ನೀಡುವಂತೆ ಒತ್ತಾಯಿಸಿ ಅಂಗವಿಕಲರ ಕಲ್ಯಾಣ ವೇದಿಕೆಯಿಂದ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗಿತ್ತು.

        ಸರಕಾರಿ ನೌಕರರೊಬ್ಬರ ತಪ್ಪು ಮಾಹಿತಿಯಿಂದ ತನ್ನ ಜೀವನ ನಿರ್ವಹಣೆಗೆ ಆಧಾರವಾಗಿದ್ದ ಮಾಸಾಶನ ನಿಂತು ಹೋಗಿದ್ದ ರಿಂದ ಬೇಸತ್ತ ತುಮಕೂರು ತಾಲೂಕು ಬೆಳಧರ ಮಜರೆ ಲಿಂಗಯ್ಯನಪಾಳ್ಯದ ಧರಣೇಂದ್ರ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು, ಮಾಸಾಶನಕ್ಕೆ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷವೇ ಕಾರಣವೆಂದು ಆರೋಪಿಸಿದರು.

        ಈ ವೇಳೆ ಮಾತನಾಡಿದ ವೇದಿಕೆಯ ಅಧ್ಯಕ್ಷ ಸಿ.ಗಂಗರಾಜು, ಧರಣೇಂದ್ರ ಮತ್ತು ಆತನ ಅಕ್ಕ ಹುಟ್ಟುತ್ತಲೇ ಅಂಗವಿಕಲರಾಗಿದ್ದು, ಇವರಿಗೆ 10 ತುಂಬುವವರೆಗೆ ತಂದೆ ಮತ್ತು ಇವರ ಜಂಟಿ ಖಾತೆಗೆ ಮಾಸಾಶನದ ಹಣ ಬರುತ್ತಿದ್ದು, ಧರಣೇಂದ್ರನಿಗೆ 18 ವರ್ಷ ತುಂಬಿದ ನಂತರ, ಮಾಸಾಶನ ಆತನ ವೈಯಕ್ತಿಕ ಖಾತೆಗೆ ಬದಲಾಗುವ ಬದಲು, ನಿಂತು ಹೋಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ತನ್ನ ಹಿಂದಿನ ಎಲ್ಲಾ ದಾಖಲೆಗಳನ್ನು ನೀಡಿ, ಮಾಸಾಶನಕ್ಕೆ ಅರ್ಜಿ ಸಲ್ಲಿಸಿದಾಗ, ನಿನ್ನ ಕುಟುಂಬದ ಆದಾಯ 15 ಸಾವಿರಕ್ಕೂ ಮೀರಿದ್ದು, ನಿನಗೆ ಮಾಸಾಶನ ನೀಡಲು ಬರುವುದಿಲ್ಲ ಎಂದು ಹೇಳಿದ್ದರಿಂದ ಮನನೊಂದ ಧರಣೇಂದ್ರ ವಿಡಿಯೋ ಮಾಡಿ, ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು ಎಂದರು.

      ಸರಕಾರಿ ಕಚೇರಿಗಳಲ್ಲಿ ಅಂಗವಿಕಲರನ್ನು ಅತ್ಯಂತ ಕೀಳಾಗಿ ಕಾಣಲಾಗುತ್ತಿದೆ. ಸೌಜನ್ಯಯುತವಾಗಿ ನಡೆದುಕೊಳ್ಳುತ್ತಿಲ್ಲ. ಧರಣೇಶನ ಸಾವಿಗೆ ಜಿಲ್ಲಾಡಳಿತವೇ ಕಾರಣವಾಗಿದ್ದು, ಕೂಡಲೇ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಕುಟುಂಬದಲ್ಲಿ ಓರ್ವ ಅಂಗವಿಕಲ ಹೆಣ್ಣು ಮಗಳಿಗೆ ಸರಕಾರಿ ನೌಕರಿ ನೀಡಬೇಕೆಂದು ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆಯ ತಾಲ್ಲೂಕು ಅಧ್ಯಕ್ಷರುಗಳಾದ ಮಧುಗಿರಿಯ ನಾಗೇಶ್, ಪಾವಗಡದ ಮೈಲಾರಪ್ಪ, ಮಹಾಲಿಂಗಪ್ಪ, ಇನಾಯತ್‍ಖಾನ್, ರಾಮಕೃಷ್ಣ, ಎಂ.ಸಿ.ದೊಡ್ಡಲಿಂಗಪ್ಪ, ಮೃತನ ಪೋಷಕರಾದ ಕೋಡಿಲಿಂಗಯ್ಯ, ನಾಗರಾಜಯ್ಯ ಜೊತೆಗೆ ಇನ್ನೂ ಹಲವಾರು ಅಂಗವಿಕಲರು ಭಾಗವಹಿಸಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here