ತುಮಕೂರು
ಮಹಾನಗರಪಾಲಿಕೆಯ ಕಂದಾಯ ಶಾಖೆಯಲ್ಲಿ ಕಳೆದ 29 ದಿವಸಗಳಿಂದ ಆಸ್ತಿ ಹಕ್ಕು ವರ್ಗಾವಣೆಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಸ್ಥಗಿತಗೊಂಡು ಆಸ್ತಿ ವಹಿ ವರ್ಗಾವಣೆಗೆ ಅರ್ಜಿ ಸಲ್ಲಿಸಿರುವವರು ಪರಿತಪಿಸುವಂತಾಗಿದೆ ಎಂದು ಸಾರ್ವಜನಿಕ ಸುರಕ್ಷಾ ಸಮಿತಿ ಜಿಲ್ಲಾಧ್ಯಕ್ಷ ಕೆ.ಪಿ.ಮಹೇಶ ಗಂಭೀರವಾಗಿ ಆರೋಪಿಸಿದ್ದಾರೆ.
ಕಳೆದ ಬುಧವಾರದಂದು ಸಾರ್ವಜನಿಕ ಸುರಕ್ಷಾ ಸಮಿತಿಯ ಪ್ರಮುಖರು ಪಾಲಿಕೆಯ ಉಪ ಆಯುಕ್ತ (ಕಂದಾಯ) ಸಿ.ಯೋಗಾನಂದರವರಿಗೆ ಜಿಲ್ಲಾಧ್ಯಕ್ಷ ಕೆ.ಪಿ.ಮಹೇಶ ಮನವಿ ಪತ್ರ ಅರ್ಪಿಸಿ, ತುಮಕೂರು ಮಹಾನಗರಪಾಲಿಕೆಯ ಚುನಾವಣಾ ಪ್ರಕ್ರಿಯೆ ಆರಂಭಗೊಂಡ ನಂತರ ಆಸ್ತಿ ವರ್ಗಾವಣೆ ಸ್ವತ್ತಿನ ಅಳತೆ, ಹೆಸರು ತಿದ್ದುಪಡಿ, ಕಚೇರಿ ಟಿಪ್ಪಣಿ ಮುಂತಾದ ಕಂದಾಯ ಶಾಖೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಬ್ಲಾಕ್ ಮಾಡಲಾಗಿದೆ. ಇದರಿಂದ ನೂರಾರು ಫೈಲ್ಸ್‍ಗಳು ಒಪ್ಪಿಗೆ ಸಿಗದೆ ಜನ ಸಾಮಾನ್ಯರಿಗೆ ತೊಂದರೆಯಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಿವರವಾಗಿ ತಿಳಿಸಿ ಆಕ್ಷೇಪ ವ್ಯಕ್ತಪಡಿಸಿದರು.
ಈ ಹಿಂದೆ ಮಹಾನಗರಪಾಲಿಕೆಯ ಸಿಬ್ಬಂದಿ ಮತ್ತು ಇಬ್ಬರು ಕಂದಾಯಾಧಿಕಾರಿಗಳು ಡಿ.ಜಿ.ಫೈಲ್ಸ್‍ಗಳಿಗೆ ತಮ್ಮ ಅಧಿಕೃತ ದಾಖಲಾತಿಗೆ ಕ್ರಮವಹಿಸುವ ಪ್ರಕ್ರಿಯೆ ನಡೆಸುತ್ತಿದ್ದರು. ಚುನಾವಣಾ ನಿಮಿತ್ತ ಕಂಪ್ಯೂಟರ್ ಅಪರೇಟರ್‍ಗಳು ಮತ್ತು ಕಂದಾಯಾಧಿಕಾರಿಗಳಿಗೆ ಇದ್ದ ಪಾಸ್‍ವರ್ಡ್ ಸ್ಥಗಿತಗೊಳಿಸಿದ್ದು, ಚುನಾವಣೆ ಮುಗಿದು ಎಂಟು ದಿವಸಗಳಾದರೂ, ಅಧಿಕೃತವಾಗಿ ಡಿ.ಜಿ. ಕಡತ ಮುಕ್ತಾಯ (ಬಯೋಮೆಟ್ರಿಕ್) ಮಾಡುವ ಪ್ರಕ್ರಿಯೆಗಳು ಆರಂಭಗೊಂಡಿಲ್ಲ. ಇದು ಆಸ್ತಿ ತೆರಿಗೆದಾರರಿಗೆ ಪಾಲಿಕೆ ನೀಡುವ ತೊಂದರೆಯ ಒಂದು ಭಾಗವಾಗಿದೆ ಎಂದು ಸಾರ್ವಜನಿಕರು ಪರಿಗಣಿಸಿದ್ದು, ಪರಿಸ್ಥಿತಿ ಉಲ್ಬಣಗೊಳ್ಳುವ ಮುನ್ನ ಸಹಜ ಸ್ಥಿತಿಗೆ ಕಂದಾಯ ಶಾಖೆಯಲ್ಲಿ ಬಯೋಮೆಟ್ರಿಕ್ ಪ್ರಕ್ರಿಯೆಗಳು ಮೊದಲಿನಂತೆ ಆರಂಭಗೊಳ್ಳಲು ಅಧಿಕೃತ ಜ್ಞಾಪನಾಪತ್ರದ ಮೂಲಕ ಆದೇಶ ಮಾಡುವಂತೆ ಪಾಲಿಕೆಯ ಆಯುಕ್ತರಿಗೆ ಮನವಿಪತ್ರದ ಮೂಲಕ, ಮಹಾನಗರಪಾಲಿಕೆಯ ಆಸ್ತಿ ವಹಿದಾರರು ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕ ಸುರಕ್ಷಾ ಸಮಿತಿ ಒತ್ತಾಯಿಸಿದೆ.
ಈ ನಿಯೋಗದಲ್ಲಿ ಪ್ರಮುಖರಾದ ಸಾರ್ವಜನಿಕ ಸುರಕ್ಷಾ ಸಮಿತಿಯ ಜಿಲ್ಲಾಧ್ಯಕ್ಷರಾದ ಕೆ.ಪಿ.ಮಹೇಶ, ಪ್ರಮುಖರಾದ ಬನಶಂಕರಿಬಾಬು, ಕನ್ನಡ ಪ್ರಕಾಶ್, ಎಂ.ಎಸ್.ಚಂದ್ರು, ಮದನ್‍ಸಿಂಗ್, ಎನ್.ಗಣೇಶ್ ರವರುಗಳು ಹಾಜರಿದ್ದರು.
