ಹಾವೇರಿ:
ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ಅತ್ಯಂತ ಹೀನ ಕೃತ್ಯವಾಗಿದೆ. ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ದೂರುಗಳಲ್ಲಿ ಶೇ.60 ರಷ್ಟು ಹೆಣ್ಣು ಮಕ್ಕಳ ಸಾಗಾಣಿಕೆ ಪ್ರಕರಣಗಳಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಅವರು ಹೇಳಿದರು.
ಗುರುವಾರ ನಗರದ ದೇವರಾಜ ಅರಸು ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾದ “ಸಾಗಾಣಿಕೆ ಹಾಗೂ ವಾಣಿಜ್ಯಿಕ ಲೈಂಗಿಕ ಶೋಷಣೆ ಸಂತ್ರಸ್ತರ ಯೋಜನೆ 2015” ಕುರಿತ ಕಾರ್ಯಕ್ರಮ ಹಾಗೂ ಪೊಲೀಸ್ ದೂರು ಪ್ರಾಧಿಕಾರ ಮತ್ತು ಸಂತ್ರಸ್ತರ ಪರಿಹಾರ ಯೋಜನೆ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಿಳೆ ಮತ್ತು ಮಕ್ಕಳ ಸಾಗಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯಾವುದೋ ಆಮಿಷಕ್ಕೆ ಒಳಗಾಗಿ ಮಹಿಳೆಯರು ಶೋಷಣೆಗೊಳಲಾಗುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದನ್ವಯ 18 ವರ್ಷದೊಳಗಿನ ಹೆಣ್ಣುಮಕ್ಕಳು ಕಾಣೆಯಾದಲ್ಲಿ ಕಿಡ್ನಾಪ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುತ್ತಿದೆ. ಹೆಣ್ಣುಮಕ್ಕಳ ಅನುಕೂಲಕ್ಕಾಗಿ ಸರ್ಕಾರ ಮಹಿಳಾ ಪೊಲೀಸ್ ಠಾಣೆಗಳನ್ನು ತೆರೆದಿದೆ. ಈ ಠಾಣೆಗಳಲ್ಲಿ ಮಹಿಳಾ ಪೊಲೀಸರೇ ಕರ್ತವ್ಯ ನಿರ್ವಹಿಸುತ್ತಾರೆ. ದೌರ್ಜನ್ಯಕ್ಕೆ ಹಾಗೂ ಶೋಷಣೆಗೆ ಒಳಗಾದ ಮಹಿಳೆಯರು ಈ ಠಾಣೆಗಳಲ್ಲಿ ದೂರು ಸಲ್ಲಿಸಿ ನ್ಯಾಯ ಪಡೆದುಕೊಳ್ಳಬಹುದು ಎಂದು ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಮಾತ್ರ ದೂರ ಪ್ರಾಧಿಕಾರವಿದೆ. ಯಾವುದೇ ಇಲಾಖೆಗೂ ದೂರು ಪ್ರಾಧಿಕಾರಗಳಿಲ್ಲ, ಆದರೆ ಪೊಲೀಸ್ ಇಲಾಖೆಯಲ್ಲಿ ದೌರ್ಜನ್ಯ ನಡೆಯುತ್ತದೆ ಎಂಬ ಆರೋಪಗಳು ಬಂದ ಕಾರಣ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಪೊಲೀಸ್ ದೂರು ಪ್ರಾಧಿಕಾರ ರಚಿಸಲಾಗಿದೆ. ಜಿಲ್ಲಾ ಮಟ್ಟದ ಪೊಲೀಸ್ ದೂರು ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು ಪೊಲೀಸ್ ಅಧೀಕ್ಷಕರು ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ. ಜಿಲ್ಲಾ ಮಟ್ಟದ ದೂರುಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ದೂರು ಪ್ರಾಧಿಕಾರಕ್ಕೆ ತಮ್ಮ ದೂರುಗಳನ್ನು ಸಲ್ಲಿಸಬಹುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ವೈ.ಎಲ್. ಲಾಡಖಾನ್ ಅವರು ಮಾತನಾಡಿ, ಹಿಂದಿನ ಕಾಲದಲ್ಲಿ ನಗ, ನಾಣ್ಯ, ಬಂಗಾರ ಕಳ್ಳತನವಾಗುತ್ತಿತ್ತು. ಆದರೆ ಇಂದಿನ ಸಮಾಜದಲ್ಲಿ ಮನುಷ್ಯರ ಕಳ್ಳತನವಾಗುತ್ತಿದೆ. ಮಹಿಳೆ ಮತ್ತು ಮಕ್ಕಳನ್ನು ಅಪಹರಿಸಿ ದಾರಿತಪ್ಪಿಸಿ ವೇಶ್ಯಾವಾಟಿಕೆಗೆ ತಳ್ಳುತ್ತಿರುವುದು ವಿಷಾಧಕರ ಸಂಗತಿ ಎಂದು ಹೇಳಿದರು.
ವೇಶ್ಯಾವಾಟಿಕೆಯು ಅಂತರಾಷ್ಟ್ರೀಯ ಮಟ್ಟದ ವೃತ್ತಿಯಾಗಿ ಬೆಳೆದಿದೆ. ತಿಳಿದೋ ತಿಳಿಯದೆಯೋ ಈ ವೃತ್ತಿಯಲ್ಲಿ ತೊಡಗಿಕೊಂಡವರು ಆ ಜಗತ್ತಿನಿಂದ ಹೊರಬರುವುದು ಕಷ್ಟಸಾಧ್ಯ. ಲೈಂಗಿಕ ದೌರ್ಜನ್ಯ ಹಾಗೂ ಶೋಷಣೆಗೆ ಒಳಗಾದವರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸಮಾಜದಲ್ಲಿ ಗೌರಯುತವಾಗಿ ಬಾಳಲು ಅವಕಾಶ ನೀಡುವುದು ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶವಾಗಿದೆ.
ಜಿಲ್ಲಾ ನ್ಯಾಯಾಲಯದಲ್ಲಿ ಪೋಕ್ಸೋ ನ್ಯಾಯಾಲಯ ಸ್ಥಾಪನೆಯಾಗಿದೆ. ಜಿಲ್ಲಾ ಸತ್ರ ನ್ಯಾಯಾಧೀಶರು ವಿಶೇಷ ನ್ಯಾಯಾಧೀಶರಾಗಿದ್ದಾರೆ. ಲೈಂಗಿಕ ಶೋಷಣೆ ಸಂತ್ರಸ್ತರ ಯೋಜನೆ ಕುರಿತು ಪ್ರತಿ ಬುಧವಾರ ಮಾಹಿತಿ ಮಾಹಿತಿ ನೀಡಲಾಗುವುದು. ಲೈಂಗಿಕ ಶೋಷಣೆಗೊಳಾದ ಮಹಿಳೆಯರು ಮತ್ತು ಮಕ್ಕಳು ಘಟನೆ ನಡೆದ 24 ತಾಸಿನಲ್ಲಿ ಪೊಲೀಸ್ ಠಾಣೆ ದೂರು ದಾಖಲಿಸಬೇಕು. ದೂರು ಸಲ್ಲಿಸಿದಲ್ಲಿ ಅಂತವರಿಗೆ ನ್ಯಾಯ ಒದಗಿಸಲಾಗುವುದು. ದೌರ್ಜನ್ಯ ತಡೆಗಟ್ಟುವುದು ಸರ್ಕಾರದ ಒಂದು ಭಾಗಕ್ಕೆ ಸಂಬಂಧಿಸಿದ ವಿಷಯಲ್ಲ. ಸಮಾಜದ ಎಲ್ಲರೂ ಇಂತಹ ಘಟನೆಗಳ ವಿರುದ್ಧ ಹೋರಾಡಬೇಕು ಹಾಗೂ ಜಾಗೃತಿ ಮೂಡಿಸಲು ಕೈಜೋಡಿಸಬೇಕು. ಸಮಾಜದ ಕೆಳಸ್ಥರದವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಕಾನೂನು ಮಾಹಿತಿ ನೀಡುವ ಮೂಲಕ ಗ್ರಾಮೀಣ ಮಟ್ಟದಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ಸಿ.ನೀರಲಗಿ, ಕಾರ್ಯದರ್ಶಿ ದೇವರಾಜ ಎನ್.ನಾಯ್ಡು, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್. ಮಾಳಗೇರ, ಎ.ಎಸ್.ಐ ಉದಯ ಕುಲಕರ್ಣಿ ಅವರು ಉಪಸ್ಥಿತರಿದ್ದರು.
ಪ್ಯಾನಲ್ ವಕೀಲರಾದ ಎಂ.ಎಚ್.ವಾಲಿಕರ ಅವರು ಸೆಕ್ಸನ್ 357ಎ, ಪಿ.ಸಿ. ಮತ್ತು ಸಂತ್ರಸ್ಥರ ಪರಿಹಾರಧನ ಯೋಜನೆ ಕುರಿತು, ಆಶಾಕಿರಣ ಸಂಸ್ಥೆಯ ಅಧ್ಯಕ್ಷ ಮುತ್ತುರಾಜ ಮಾದರ ಸಾಗಾಣಿಕೆ ಹಾಗೂ ವಾಣಿಜ್ಯಕ ಲೈಂಗಿಕ ಶೋಷಣೆ ಸಂತ್ರಸ್ತರ ಯೋಜನೆ 2015ರ ಕುರಿತು ಹಾಗೂ ಪಿ.ಎಸ್.ಐ. ಮಾಲತೇಶ ಅವರು ಪೊಲೀಸ್ ದೂರು ಪ್ರಾಧಿಕಾರದ ರಚನೆ, ಮಹತ್ವ ಮತ್ತು ಅದರ ಕಾರ್ಯ ಚಟುವಟಿಕೆ ಕುರಿತು ಉಪನ್ಯಾಸ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮಾ ಕ.ಎಸ್. ಅವರು ಸ್ವಾಗತಿಸಿದರು. ವಿನಯ ಗುಡಗೂರ ನಿರೂಪಿಸಿದರು.