ಮಾದರಿ ಶಾಲೆ ಮಾರ್ಗದರ್ಶಿಯಾಗಿರ ಬೇಕು

ಹಾನಗಲ್ಲ :

             ಮಾದರಿ ಶಾಲೆ ಮಾರ್ಗದರ್ಶಿಯಾಗಿರ ಬೇಕು. ಅದು ಇನ್ನೊಬ್ಬರಿಗೆ ಉತ್ತಮ ಪರಿಣಾಮ ಬೀರಬೇಕು. ಅದಕ್ಕಾಗಿ ತಾಲೂಕಿನಲ್ಲಿ ಶಾಸಕರ ಮಾದರಿ ಶಾಲೆಗಳಿದ್ದು, ಹಾನಗಲ್ಲಿನ ಶಾಲೆಯನ್ನು ಮಾದರಿಯಾಗಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ದತ್ತು ತೆಗೆದುಕೊಂಡಿದ್ದಾರೆ.
             ಹಾನಗಲ್ಲಿನ ಹೃದಯ ಭಾಗದಲ್ಲಿರುವ ಶಾಸಕರ ಸರಕಾರಿ ಮಾದರಿ ಶಾಲೆ ಸುತ್ತಲು ಆರಕ್ಷಕ ಠಾಣೆ, ತಹಶೀಲ್ದಾರ ಕಛೆರಿ, ತಾಲೂಕು ಪಂಚಾಯತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ತೋಟಗಾರಿಕೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಹಲವು ವಿದ್ಯಾರ್ಥಿ ವಸತಿ ಕೇಂದ್ರಗಳಿಂದ ಸುತ್ತುವರೆದಿದೆ. ಇಂತಹ ಕೇಂದ್ರ ಸ್ಥಾನದಲ್ಲಿರುವ ಈ ಶಾಲೆ ಮಾದರಿಯಾಗಿರುವ ಬದಲು ಅನಾದರಕ್ಕೆ ಕಾರಣವಾಗಿತ್ತು. ಇಲ್ಲಿನ ವ್ಯವಸ್ಥೆಗಳು ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಕಲ್ಪಿಸುತ್ತಿರಲಿಲ್ಲ.
             ಆದರೆ ಹಾನಗಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ ಈ ಶಾಲೆಯನ್ನು ದತ್ತಕ ತೆಗೆದುಕೊಂಡು ಶಾಲೆಯ ಅಭಿವೃದ್ಧಿಗೆ ಒತ್ತಾಸೆ ವ್ಯಕ್ತಪಡಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಈ ಶಾಲೆಯ ಶಿಕ್ಷಕರು ಒಂದಷ್ಟು ವಂತಿಗೆ ನೀಡಿ, ಸರಕಾರದ ಅನುದಾನವನ್ನು ಬಳಸಿಕೊಂಡು ನಿಜವಾದ ಮಾದರಿ ಶಾಲೆ ಮಾಡುವಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ.
              ಈ ಶಾಲೆಗೆ ಈಗ ಬಂದು ನೋಡುವವರು ಈ ಶಾಲೆಯ ಮೈದಾನದಲ್ಲಿ ರೈಲು ಹೇಗೆ ಬಂತು ಎಂದು ಪ್ರಶ್ನಿಸುವಂತಿದೆ. ಶಾಲೆಯ ಕೊಠಡಿಗಳನ್ನು ರೈಲಿನ ಆಕಾರದಲ್ಲಿ ಬಣ್ಣ ಬಳಿದು ಅಕ್ಷರಶಃ ರೈಲು ಕಣ್ಣೆದುರಿಗೆ ಕಂಡಂತೆ ಭಾಸವಾಗುತ್ತದೆ. ವಿದ್ಯಾರ್ಥಿಗಳು ಕೊಠಡಿ ಪ್ರವೇಶಿಸುವಾಗ ರೈಲಿನ ಬಾಗಿಲ ಮೂಲಕ ಒಳ ಪ್ರವೇಶಿಸಿದ ಅನುಭವವಾಗುತ್ತದೆ.
               ಈ ಶಾಲೆಯಲ್ಲಿ 272 ಮಕ್ಕಳಿದ್ದಾರೆ. 1 ರಿಂದ 8 ನೇ ತರಗತಿವರೆಗೆ ವರ್ಗಗಳು ಇವೆ. 13 ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಶಾಲೆಯ ಅಂದಕ್ಕೆ ಆದ್ಯತೆ ನೀಡಲಾಗಿದೆ. ಅದರೊಂದಿಗೆ ಪಾಠ ಪ್ರವಚನಗಳೂ ಕೂಡ ತಾಲೂಕಿಗೆ ಮಾದರಿಯಾಗುವಂತೆ ನಡೆಯುವುದಾದರೆ ಸರಕಾರ ಘೋಶಿಸಿದ ಶಾಸಕರ ಸರಕಾರಿ ಮಾದರಿ ಶಾಲೆ ನಿಜಕ್ಕೂ ಅರ್ಥಪೂರ್ಣ ಎನಿಸುತ್ತದೆ. ಇಲ್ಲಿನ ಆಟದ ಮೈದಾನ ಸುಧಾರಣೆಯಾಗಬೇಕು. ಅಲ್ಲದೆ ಶಿಕ್ಷಕರು ಈಗ ಇನ್ನೂ ಹೆಚ್ಚಿನ ಕಲಿಕಾ ಆಸಕ್ತಿ ಹೊಂದಬೇಕಾಗಿದೆ.

                ಮಾದರಿ ಎಂದು ಕರೆಸಿಕೊಳ್ಳಬೇಕಾದರೆ ಅದು ಪರಿಶ್ರಮದಿಂದ ಮಾತ್ರ ಸಾಧ್ಯ. ಕೇವಲ ಪೀಠೋಪಕರಣ ಶಾಲೆಯ ಅಂದ ಚಂದ ಮಾತ್ರವಲ್ಲ ಮಕ್ಕಳ ಅಧ್ಯಯನಕ್ಕೆ ಒತ್ತು ನೀಡಬೇಕು. ಇದಕ್ಕೆ ಬೇಕಾಗುವ ಒಳ್ಳೆಯ ವಾತಾವರಣ ಸಿದ್ಧವಾಗಬೇಕು. ಎಲ್ಲದಕ್ಕು ಮುಖ್ಯವಾಗಿ ಈ ಶಾಲೆಯಲ್ಲಿರುವ ಎಲ್ಲ ಶಿಕ್ಷಕರು ಸ್ವಯಂ ಸ್ಪೂರ್ತಿಯಿಂದ ಗುರುವಿನ ಸ್ಥಾನವನ್ನು ನಿರ್ವಹಿಸಿದರೆ ಇದು ಅಸಾಧ್ಯವೇನೂ ಅಲ್ಲ.

Recent Articles

spot_img

Related Stories

Share via
Copy link