ತಿಪಟೂರು
ನಿಮ್ಮ ಮಾಸಿಕ ಆರೋಗ್ಯವೇ ನಿಮ್ಮ ಯಶಸ್ಸಿನ ಗುಟ್ಟು ಎಂದು ಸಂಸದರಾದ ಎಸ್.ಪಿ.ಮುದ್ದಹನುಮೇಗೌಡರು ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗ, ತುಮಕೂರು ಮನೋವಿಜ್ಞಾನ ಸಂಘ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಜಗತ್ತು ಸ್ಪರ್ಧಾತ್ಮಕ ಯುಗವಾಗಿದೆ.
ನಾವು ಮೊದಲು ನಮ್ಮ ಊರು, ತಾಲ್ಲೂಕು, ಜಿಲ್ಲೆ ಹೀಗೆ ರಾಜ್ಯ ದೇಶದಲ್ಲೆ ನಮ್ಮ ಸ್ಪರ್ಧೆ ಏರ್ಪಟ್ಟಿತ್ತು. ಇಂದಿನ ಜಾಗತಿಕ ಯುಗದಲ್ಲಿ ನಾವು ವಿಶ್ವದೊಂದಿಗೆ ಸ್ಪರ್ಧಿಸಿ ಗೆಲ್ಲಬೇಕಾಗಿದೆ. ಇದರಲ್ಲಿ ನಾವು ಗೆಲ್ಲಬೇಕಾದರೆ ನಮಗೆ ಸದೃಢವಾದ ಮನಸ್ಸಿರಬೇಕು. ಆದರೆ ನಾವಿಂದು ಹಲವಾರು ಒತ್ತಡಗಳಿಂದ ಇಲ್ಲಸಲ್ಲದ ರೋಗಗಳನ್ನು ಆವಾಹನೆ ಮಾಡಿಕೊಳ್ಳುತ್ತಿದ್ದೇವೆ. ಎಲ್ಲಾ ರೋಗಗಳಿಗೆ ತಾಯಿಯೆಂದರೆ ಒತ್ತಡ. ಆದ್ದರಿಂದ ನಾವು ಒತ್ತಡ ರಹಿತವಾದ ಮನಸ್ಥಿತಿಯನ್ನು ಬೆಳೆಸಿಕೊಂಡು ಉತ್ತಮವಾದ ಮಾನಸಿಕವಾದ ಆರೋಗ್ಯವನ್ನು ರೂಢಿಸಿಕೊಳ್ಳಲು ಯೋಗವು ಸಹಕಾರಿಯಾಗಿದೆ.
ಆದರೆ ನಾವಿಂದು ಯೋಗ ಮತ್ತು ಪ್ರಾಣಾಯಾಮಕ್ಕಾಗಿ ಸಮಯವನ್ನು ಮೀಸಲಿಡದೆ ಸಮಯವಿಲ್ಲ ಎನ್ನುತ್ತಿದ್ದೇವೆ. ಆದರೆ ಮುಂದೊಂದು ದಿನ ನಾವು ಮಾಡಿದ ತಪ್ಪಿನ ಅರಿವಾಗಿ ನಾವು ಎಚ್ಚೆತ್ತುಕೊಳ್ಳುತ್ತೇವೆ. ಆದ್ದರಿಂದ ರೋಗ ಬಂದ ಮೇಲೆ ಕಾಳಜಿ ತೆಗೆದುಕೊಳ್ಳದೆ ಅದು ಬರುವ ಮೊದಲೇ ತಡೆಗಟ್ಟುವುದು ಉತ್ತಮ. ಆದ್ದರಿಂದ ನೀವು ಉತ್ತಮವಾದ ಮನಸ್ಥಿತಿಯನ್ನು ಹೊಂದಿದರೆ ಏನನ್ನಾದರೂ ಸಾಧಿಸಬಹುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನಾವು ಉತ್ತಮ ಮನಸ್ಥಿತಿಯನ್ನು ಹೊಂದಲು ಪರಿಸರವು ಸಹಕಾರಿ. ಆದ್ದರಿಂದ ನಾವೆಲ್ಲರು ಪರಿಸರವನ್ನು ಉಳಿಸಿ ಬೆಳೆಸಬೇಕೆಂದು ಕರೆಕೊಟ್ಟರು.
ಶಾಸಕ ಬಿ.ಸಿ.ನಾಗೇಶ್ ಮಾತನಾಡುತ್ತಾ ನಾವು ನಮ್ಮ ಮನಸ್ಸನ್ನು ಅರ್ಥಮಾಡಿಕೊಂಡು ಮಾನಸನ್ನು ನಿಗ್ರಹಿಸಿದರೆ ಜೀವನವನ್ನು ಗೆದ್ದಂತೆ ಎಂದರು. ನಮ್ಮ ಪುರಾತನ ಸಂಸ್ಕತಿಯಲ್ಲಿ ಇದ್ದ ಆಚಾರ ವಿಚಾರಗಳು ಇದಕ್ಕೆ ಪೂರಕವಾಗಿದ್ದವು. ಆದರೆ ವಿದೇಶಿಯರ ದಾಳಿಯಿಂದ ನಾವು ಇವುಗಳೆಲ್ಲವನ್ನು ಮೂಲೆಗೆ ತಳ್ಳಿದೆವು. ಆದರೆ ಇಂದಿನ ಪರಿಸ್ಥಿತಿಗೆ ಮತ್ತೆ ನಾವು ಯೋಗ, ಧ್ಯಾನ ಮತ್ತು ಆಧ್ಯಾತ್ಮದ ಮೊರೆಹೋಗುತ್ತಿದ್ದೇವೆ. ಇದರ ಜೊತೆಗೆ ನಾವು ಅನೇಕ ಆಸೆಗಳನ್ನು ಹೊತ್ತುಕೊಂಡು ಅವುಗಳನ್ನು ಪೂರೈಸಿಕೊಳ್ಳಲು ಅನೇಕ ಒತ್ತಡಗಳನ್ನು ನಮ್ಮ ಮನಸ್ಸಿನ ಮೇಲೆ ಹೇರಿ ಮನಸ್ಸಿಗೆ ಹೆಚ್ಚಿನ ಒತ್ತಡವನ್ನು ಕೊಡುತ್ತಿದ್ದೇವೆ. ಆದ್ದರಿಂದ ಮನಸ್ಸನ್ನು ನಿಗ್ರಹಿಸಿ ಉತ್ತಮವಾದ ಮಾನಸಿಕ ಆರೋಗ್ಯವನ್ನು ವೃದ್ಧಿಸಿಕೊಂಡು ಸಾಧನೆಯತ್ತ ಸಾಗಿ ಎಂದರು.
ಜಿಲ್ಲಾ ಕುಷ್ಠ ರೋಗ ನಿಯಂತ್ರಾಣಾಧಿಕಾರಿ ಡಾ|| ಚೇತನ್.ಎಂ ರವರು ಮಾತನಾಡುತ್ತಾ ಈ ಬಾರಿಯ ವಿಶ್ವ ಮಾಸಿಕ ಆರೋಗ್ಯ ದಿನದ ಘೊಷಣೆಯೆಂದರೆ “ಬದಲಾಗುತ್ತಿರುವ ವಿಶ್ವದಲ್ಲಿ ಯುವಜನತೆಯ ಮಾನಸಿಕ ಆರೋಗ್ಯ” ಎಂದಾಗಿದೆ. ಇಂದು ಜಗತ್ತಿನಲ್ಲಿ ಶೇಕಡ 10ರಷ್ಟು ಜನರು ವಿವಿಧ ತರಹದ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆದರೆ ಅವುಗಳನ್ನು ಸರಿಪಡಿಸಿಕೊಳ್ಳುವಲ್ಲಿ ಜನರು ಕಿಳರಿಮೆಯನ್ನು ಹೊಂದಿ ಚಿಕಿತ್ಸೆಯನ್ನು ಪಡೆಯಲು ಹಿಂಜರಿಯುತ್ತಿದ್ದಾರೆ. ಇನ್ನು ಕೆಲವರು ತಮ್ಮ ಕುಟುಂಬದಲ್ಲಿ ಮತ್ತು ಸ್ನೇಹಿತರಲ್ಲಿ ಸಮಸ್ಯೆಗಳನ್ನು ಹೇಳಿಕೊಂಡು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಿದ್ದಾರೆ. ಇಂದು 2 ಲಕ್ಷಕ್ಕೆ ಒಬ್ಬರಂತೆ ಮನೋವೈದ್ಯರಿದ್ದಾರೆ ಎಂದು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಕೆ.ಎಂ.ರಾಜಣ್ಣ ವಹಿಸಿದ್ದರು, ತಹಸೀಲ್ದಾರ್ ವಿ.ಮಂಜುನಾಥ್, ಡಾ|| ಶರತ್‍ವಿಶ್ವರಾಜ್, ಮನೋತಜ್ಞರು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ತುಮಕೂರು, ಚಿಕ್ಕರಾಜು ಅಧ್ಯಕ್ಷರು, ಮನೋವಿಜ್ಞಾನ ಸಂಘ, ತುಮಕೂರು, ಬಿಲ್ಲೇಮನೆ ಚಂದ್ರಶೇಖರ್, ಅಧ್ಯಕ್ಷರು, ಕಾಲೇಜು ವಿದ್ಯಾರ್ಥಿಗಳ ಪೋಷಕರ ಸಂಘ, ಉಪನ್ಯಾಸಕರುಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.