ಪಂಚಭೂತಗಳಿಗೆ ವಂಚನೆ ಮಾಡದವರು ಆದರ್ಶ ವ್ಯಕ್ತಿಗಳು

ಹುಳಿಯಾರು

    ಸತ್ಯ ಶುದ್ಧ ಕಾಯಕದಿಂದ ಬದುಕು ಕಟ್ಟಿಕೊಂಡಿರುವ, ಪಂಚಭೂತಗಳಿಗೆ ವಂಚನೆ ಮಾಡದಂತೆ ಬದುಕುತ್ತಿರುವ ವ್ಯಕ್ತಿಗಳನ್ನು ಯುವ ಸಮೂಹ ಆದರ್ಶ ವ್ಯಕ್ತಿಗಳನ್ನಾಗಿ ಸ್ವೀಕರಿಸಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು ಕಿವಿ ಮಾತು ಹೇಳಿದರು.

    ಹುಳಿಯಾರು ಹೋಬಳಿಯ ಯಳನಾಡು ಸರ್ಕಾರಿ ಪ್ರೌಢಶಾಲೆಗೆ ವಿಷ್ಣು ಸೇನಾ ಸಮಿತಿಯಿಂದ ಮೂಲ ಸೌಲಭ್ಯ ಕಲ್ಪಿಸುವ ಸಲುವಾಗಿ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರೊಂದಿಗೆ ಶಾಲೆಗೆ ದಿಡೀರ್ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕೆಲ ಕಿವಿ ಮಾತು ಹೇಳಿದರು.
ಮರಗಳನ್ನೆ ತಮ್ಮ ಮಕ್ಕಳೆಂದು ಭಾವಿಸಿ ನೂರಾರು ಸಾಲು ಮರಗಳನ್ನು ಬೆಳೆಸಿದ ಸಾಲುಮರದ ತಿಮ್ಮಕ್ಕ, ಅನಕ್ಷರಸ್ಥನಾದರೂ ನಿರರ್ಗಳವಾಗಿ ಸಾವಿರಾರು ಜುಂಜಪ್ಪನ ಕಾವ್ಯ ಹಾಡುವ ಮಧುಗಿರಿಯ ದಾಸಪ್ಪ ಇಂತಹವರು ಯುವ ಸಮೂಹದ ಆದರ್ಶರಾಗಬೇಕು. ಆದರೆ ಭ್ರಷ್ಟರು, ವಂಚಕರು, ಸುಳ್ಳರು, ಕಳ್ಳರು ಯುವ ಪೀಳಿಗೆಯ ಆದರ್ಶ ವ್ಯಕ್ತಿಗಳಾಗುತ್ತಿರುವುದು ನೋವಿನ ಸಂಗತಿ ಎಂದರು.

     ಪಟ್ಟಣದ ಮಕ್ಕಳಿಗೆ ಮನೆ, ಕಾನ್ವೆಂಟ್, ವಾಹನ ಇಷ್ಟೇ ನಿತ್ಯದ ಬದುಕಾಗಿದೆ. ಆದರೆ ಹಳ್ಳಿ ಮಕ್ಕಳು ಪರಿಸರದ ಜೊತೆ ಒಟನಾಟ ಇಟುಕೊಂಡವರಾಗಿದ್ದಾರೆ. ಹಾಗಾಗಿಯೇ ಹಳ್ಳಿ ಮಕ್ಕಳು ಮರಗಿಡಗಳ ಹೆಸರು, ಹಕ್ಕಿಪಕ್ಷಿಗಳ ಚಲನವಲನ ಎಲ್ಲವನ್ನೂ ಹೇಳುತ್ತಾರೆ. ಹಾಗಾಗಿ ಪಟ್ಟಣದ ಮಕ್ಕಳಿಗೆ ಹೋಲಿಸಿದರೆ ಹಳ್ಳಿ ಮಕ್ಕಳಲ್ಲಿ ಕ್ರಿಯೇಟಿವಿಟಿ ಹೆಚ್ಚಿದೆ. ಆದರೆ ಸಂಕುಚಿತ ಮನೋಭಾವದಿಂದ ಅವರು ಹೊರಬರಬೇಕಿದೆ ಎಂದರು.

     ರಾಜ್ಯ ವಿಷ್ಣು ಸೇವಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಮಾತನಾಡಿ, ಶಿಕ್ಷಣ ಪಡೆಯುವಾಗ ನಾವು ಪಟ್ಟ ಕಷ್ಟವನ್ನು ನಮ್ಮ ನಂತರದ ತಲೆಮಾರಿನ ವಿದ್ಯಾರ್ಥಿಗಳು ಪಡಬಾರದೆಂದು ರಾಜ್ಯದ ವಿವಿಧ ಹಳ್ಳಿಗಾಡಿನ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುತ್ತಿದ್ದೇವೆ. ಅದರಂತೆ ಯಳನಾಡು ಶಾಲೆಯ ಗ್ರಂಥಾಲಯಕ್ಕೆ ಮಕ್ಕಳ ಪುಸ್ತಕಗಳನ್ನು ಹಾಗೂ ಕಂಪ್ಯೂಟರ್ ಕೊಡಲು ನಿರ್ಧರಿಸಿದ್ದು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಸತ್ಪ್ರಜೆಯಾಗಿ ರೂಪುಗೊಂಡರೆ ನಮ್ಮ ನೆರವು ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರಲ್ಲದೆ ಪ್ರತಿಯೊಬ್ಬ ವಿದ್ಯಾರ್ಥಿಯೂ ದೊಡ್ಡವರಾದ ಮೇಲೆ ತಾವು ಓದಿದ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದರೆ ರಾಜ್ಯದ ಸರ್ಕಾರಿ ಶಾಲೆಗಳ ಚಿತ್ರಣವನ್ನೇ ಬದಲಾಯಿಸಬಹುದಾಗಿದ್ದು ಎಲ್ಲರೂ ಈ ನಿಟ್ಟಿನಲ್ಲಿ ಚಿಂತಿಸಬೇಕಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link