ದಾವಣಗೆರೆ:
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಮಾ.29, 30ರಂದು ಭಾರತದ ಇತಿಹಾಸ ಮತ್ತು ಇತಿಹಾಸ ರಚನಾಶಾಸ್ತ್ರ: ಇತಿಹಾಸ ಪುನರ್ ರಚನೆಯಲ್ಲಿರುವ ಸವಾಲುಗಳು ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ವಿಭಾಗದ ಮುಖ್ಯಸ್ಥ ಡಾ.ವೆಂಕಟರಾವ್ ಎಂ.ಪಾಲಾಟಿ ತಿಳಿಸಿದರು.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.29ರಂದು ಬೆಳಗ್ಗೆ 10.30ಕ್ಕೆ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ದಾವಣಗೆರೆ ವಿವಿ ಕುಲಪತಿ ಎಸ್.ವಿ.ಹಲಸೆ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಸಂಪಾದಿತ ಕೃತಿ ಬಿಡುಗಡೆ ಮಾಡಲಾಗುವುದು. ಆಂಧ್ರಪ್ರದೇಶದ ಕುಪ್ಪಂ ದ್ರಾವಿಡ ವಿವಿಯ ಇತಿಹಾಸ, ಪುರಾತತ್ವ ಮತ್ತು ಸಂಸ್ಕೃತಿ ವಿಭಾಗದ ಪ್ರಾಧ್ಯಾಪಕ ಡಾ.ಅರವಿಂದ ಕುಮಾರ ಆಶಯ ಭಾಷಣ ಮಾಡಲಿದ್ದಾರೆ. ಕುಲಸಚಿವ ಪಿ.ಕಣ್ಣನ್ ಉಪಸ್ಥಿತರಿರಲಿದ್ದಾರೆಂದು ಹೇಳಿದರು.
ಎರಡು ದಿನಗಳ ಕಾಲ ನಡೆಯುವ ವಿಚಾರ ಸಂಕಿರಣದಲ್ಲಿ ವಚನ ಚಳುವಳಿ-ಕೆಲವು ಹೊಳಹುಗಳು ಕುರಿತು ಹೈದ್ರಾಬಾದ್ ಕರ್ನಾಟಕ ವಿಮೋಚನ ಇತಿಹಾಸಕಾರ ಡಾ.ವಿ.ಸಿ.ಮಹಾಬಲೇಶ್ವರಪ್ಪ ಉಪನ್ಯಾಸ ನೀಡುವರು. ಇತಿಹಾಸ ರಚನಾಶಾಸ್ತ್ರದ ಪ್ರತಿಫಲನದಲ್ಲಿ ಮೈಸೂರು ಸಂಸ್ಥಾನ- ಒಂದು ವಿಶ್ಲೇಷಣೆ ಕುರಿತು ಬೆಂಗಳೂರು ವಿವಿ ಇತಿಹಾಸ ಪ್ರಾಧ್ಯಾಪಕ ಡಾ.ಅಶ್ವತ್ ನಾರಾಯಣ ವಿಷಯ ಮಂಡಿಸಲಿದ್ದಾರೆ.
ಪಶ್ಚಿಮ ಕರ್ನಾಟಕದ ಇತಿಹಾಸ ಲೇಖನಶಾಸ್ತ್ರದ ವಿಮರ್ಶೆ ಕುರಿತು ಮಂಗಳೂರು ವಿವಿಯ ಡಾ.ಉದಯ ಬಾರ್ಕೂರು ವಿಚಾರ ಮಂಡಿಸಲಿದ್ದಾರೆ. ಮಾ.30ರಂದು ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಇತಿಹಾಸ ಸಂಶೋಧಕ ಡಾ.ಎಂ.ಕೊಟ್ರೇಶ್ ಭಾಗವಹಿಸಲಿದ್ದಾರೆಂದು ಅವರು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ಪಿ.ನಾಗಭೂಷಣಗೌಡ, ಡಾ.ಹೆಚ್.ಎಸ್.ರಾಕೇಶ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
