ಚಿತ್ರದುರ್ಗ:
ಇದೇ 29ರಂದು ಚಿತ್ರದುರ್ಗ ನಗರಸಭೆಗೆ ಚುನಾವಣೆ ನಡೆಯಲಿದ್ದು, ವಿವಿಧ ರಾಜಕೀಯ ಪಕ್ಷಗಳಲ್ಲಿ ಟಿಕೆಟ್‍ಗಾಗಿ ಭಾರೀ ಕಸರತ್ತು ನಡೆದಿದ್ದರೆ, ಟಿಕೆಟ್ ಖಾತರಿ ಪಡಿಸಿಕೊಂಡ ಬಹುತೇಕ ಅಭ್ಯರ್ಥಿಗಳು ಕಳೆದ ನಾಲ್ಕೈದು ದಿನಗಳಿಂದ ತಮ್ಮ ತಮ್ಮ ವಾರ್ಡ್‍ಗಳಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.
ಪ್ರಮುಖ ಮೂರು ರಾಜಕೀಯ ಪಕ್ಷಗಳು ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿವೆ. ಇಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತು ಕಾಂಗ್ರೆಸ್‍ನಲ್ಲಿ ಟಿಕೆಟ್‍ಗಾಗಿ ಭಾರೀ ಪೈಪೋಟಿ ನಡೆದಿದೆ. ಕೆಲವು ವಾರ್ಡ್‍ಗಳಲ್ಲಿ ಪ್ರತಿಷ್ಠಿತರು ಅಖಾಡಕ್ಕೆ ಇಳಿಯಲು ಮುಂದಾಗಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಇನ್ನೂ ಟಿಕೆಟ್ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಕೆಲವು ಕಡೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಗೆಲ್ಲುವ ವಿಶ್ವಾಸವಿರುವ ಪ್ರಭಾವಿಗಳಿಗೆ ಆಯಾ ಪಕ್ಷದ ನಾಯಕರು ಟಿಕೆಟ್ ಖಾತರಿಯ ಮುನ್ಸೂಚನೆ ನೀಡಿರುವುದರಿಂದ ಅಭ್ಯರ್ಥಿಗಳು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.
ಬಿಜೆಪಿಯ ಪ್ರಭಾವಿ ಯುವ ಮುಖಂಡರಲ್ಲಿ ಒಬ್ಬರಾಗಿರುವ ಅನುಪಮ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮಾಜಿ ಸದಸ್ಯ ಎಸ್.ಬಾಸ್ಕರ್ ಅವರು ಈಗಾಗಲೇ 35ನೇ ವಾರ್ಡಿನಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
ಸ್ಥಳೀಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಜೊತೆ ಉತ್ತಮ ಒಡನಾಟವಿಟ್ಟುಕೊಂಡಿರುವ ಬಾಸ್ಕರ್ ಅವರಿಗೆ 35ನೇ ವಾರ್ಡಿನಲ್ಲಿ ಬಿಜೆಪಿ ಟಿಕೆಟ್ ಬಹುತೇಕ ಖಾತರಿಯಾಗಿದೆ. ಬಾಸ್ಕರ್ ಅವರ ತಂದೆ ಹೆಚ್.ಸೋಮಶೇಖರ್ ಅವರು ತಿಪ್ಪಾರೆಡ್ಡಿ ಅವರ ಬೆಂಬಲಿಗರಾಗಿದ್ದರು. ಅವರ ನಿಧನದ ಬಳಿಕವೂ ಸೋಮಶೇಖರ್ ಅವರ ಕುಟುಂಬದವರ ಜೊತೆ ಶಾಸಕರ ಭಾಂದವ್ಯ ಮುಂದುವರೆದಿದೆ. ಈ ಕಾರಣಕ್ಕಾಗಿಯೇ ಬಾಸ್ಕರ್ ಅವರಿಗೆ ಇಲ್ಲಿ ಟಿಕೆಟ್ ಖಾತರಿಯಾಗಿದೆ.
ಈ ಹಿನ್ನಲೆಯಲ್ಲಿ ಎಸ್.ಬಾಸ್ಕರ್ ಅವರು ತಮ್ಮ ಯುವಕರ ಪಡೆಯನ್ನು ಕಟ್ಟಿಕೊಂಡು ಸುತ್ತಾಡುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ವಾರ್ಡಿನ ವಿವಿಧ ಬೀದಿಗಳಲ್ಲಿ ಸ್ಥಳೀಯ ಯುವಕರು ಮತ್ತು ಮುಖಂಡರ ಜೊತೆಗೆ ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ.
35ನೇ ವಾರ್ಡಿನ ವ್ಯಾಪ್ತಿಗೆ ಒಳಪಡುವ ಗಾಂಧಿನಗರ, ಕಂದಾಯಗಿರಿ ನಗರ, ಸಾಧಿಕ್ ನಗರ ಮತ್ತು ಐಯುಡಿಪಿ ಲೇಔಟ್‍ನಲ್ಲಿ ಬಾಸ್ಕರ್ ಅವರು ಮತಯಾಚನೆ ನಡೆಸಿದರು. ಸ್ಥಳೀಯ ಯುವಕರು ಮತ್ತು ಬಿಜೆಪಿಯ ಕಾರ್ಯಕರ್ತರು ಹೆಚ್ಚು ಲವಲವಿಕೆಯಿಂದ ಚುನಾವಣಾ ಪ್ರಚಾರದಲ್ಲಿ ವೇಳೆ ಪಾಲ್ಗೊಂಡಿದ್ದರು.
ವಾರ್ಡಿನ ಅಭಿವೃದ್ದಿಗೆ ಒತ್ತು:
ಈ ಬಾರಿಯ ಚುನಾವಣೆಯಲ್ಲಿ ಇಲ್ಲಿನ ಮತದಾರರು ಮತ್ತು ಯುವಕರ ಒತ್ತಾಸೆಯಂತೆ ಸ್ಪರ್ದಿಸಿದ್ದು, ಜನರು ತಮ್ಮ ಮೇಲೆ ವಿಶ್ವಾಸವಿಟ್ಟು ಬೆಂಬಲಿಸಿದರೆ ಇಡೀ 35ನೇ ವಾರ್ಡ್‍ನ್ನು ಒಂದು ಮಾರಿಯ ವಾರ್ಡ್ ರೀತಿಯಲ್ಲಿ ಅಭಿವೃದ್ದಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬಿಜೆಪಿ ಅಭ್ಯರ್ಥಿಯೂ ಆಗಿರುವ ಅನುಪಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಬಾಸ್ಕರ್ ಭರವಸೆ ನೀಡಿದರು.
ಗಾಂಧಿನಗರ, ಸಾಧಿಕ್‍ನಗರ ಮತ್ತು ಐಯುಡಿಪಿ ಲೇಔಟ್‍ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರು, ರಸ್ತೆ ಚರಂಡಿ ವ್ಯವಸ್ಥೆ, ಬೀದಿ ದೀಪಗಳ ವ್ಯವಸ್ಥೆಯೂ ಸೇರಿದಂತೆ ವಾರ್ಡಿಗೆ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸೌಲಬ್ಯಗಳನ್ನು ಒದಗಿಸಿಕೊಡಲು ಶಕ್ತಿ ಮೀರಿ ಶ್ರಮಿಸುವುದಾಗಿಯೂ ಅವರು ಹೇಳಿದರು.
ನನಗೆ ಬಡವರು, ನೊಂದವರ ಬಗ್ಗೆ ಕಾಳಜಿ ಇದೆ. ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿಯೂ ಇದೆ. ದೇವರು ನಮಗೆ ಎಲ್ಲವನ್ನೂ ಕೊಟ್ಟಿದ್ದಾನೆ. ದುಡ್ಡು ಮಾಡುವ ಅವಶ್ಯಕತೆ ನನಗಿಲ್ಲ. ಇದ್ದಷ್ಟು ದಿನ ಜನರಿಗೆ ಸಹಾಯ ಮಾಡಬೇಕು. ಬಡವರ ಸಮಸ್ಯೆಗಳಿಗೆ ಸ್ಪಂದಿಸಿ ನಗರದ ಅಭಿವೃದ್ದಿಯಲ್ಲಿ ನಾನೂ ಪಾಲ್ಗೊಳ್ಳಬೇಕು ಎನ್ನುವ ಆಸೆಯಿಂದ ಚುನಾವಣೆಗೆ ಸ್ಪರ್ದಿಸಿದ್ದೇನೆ. ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಬೆಂಬಲಿಸಿ ಗೆಲ್ಲಿಸಿದರೆ ಜನರ ಋಣ ತೀರಿಸುತ್ತೇನೆ ಎಂದು ಎಸ್.ಬಾಸ್ಕರ್ ಇದೇ ಸಂದರ್ಭದಲ್ಲಿ ಹೇಳಿದರು
ಮುಖಂಡರಾದ ಪುಟ್ಟಣ್ಣ, ರಮೇಶ್, ಮಂಜುನಾಥ್, ಸಂತೋಷ್‍ಕುಮಾರ್ ಸೇರಿದಂತೆ ವಾರ್ಡಿನ ಇತರೆ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರುಗಳು ಪ್ರಚಾರಸಭೆಯಲ್ಲಿ ಪಾಲ್ಗೊಂಡಿದ್ದರು.
