ಚಿತ್ರದುರ್ಗ:
ಕೇಂದ್ರ ಸರ್ಕಾರದ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ವಿವಿಧ ಸಂಘಟನೆಗಳು ಬುಧವಾರ ಚಿತ್ರದುರ್ಗ ಜಿಲ್ಲೆ ಎಲ್ಲಾ ತಾಲೂಕುಗಳ ಬಂದ್‍ಗೆ ನೀಡಿದ್ದ ಕರೆ ಸಂಪೂರ್ಣವಾಗಿ ವಿಫಲವಾಯಿತು.
ಎ.ಐ.ಟಿ.ಯು.ಸಿ., ಐ.ಎನ್.ಟಿ.ಯು.ಸಿ., ಎ.ಐ.ಯು.ಟಿ.ಯು.ಸಿ., ಸಿ.ಐ.ಟಿ.ಯು., ಎ.ಐ.ಕೆ.ಎಸ್. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ವಿವಿಧ ಕಾರ್ಮಿಕ ಸಂಘಟನೆಗಳು, ಬೆಳಿಗಿನಿಂದಲೇ ಗಾಂಧಿವೃತ್ತದಲ್ಲಿ ಪ್ರತಿಭಟನೆಗಿಳಿದು ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗುತ್ತಿದ್ದಾಗ ಪೋಲಿಸರು ಬಂಧಿಸಿ ಸ್ವಲ್ಪ ಸಮಯದ ನಂತರ ಬಿಡುಗಡೆಗೊಳಿಸಿದ ಪರಿಣಾಮ ಬಂದ್ ಯಶಸ್ವಿಯಾಗಲಿಲ್ಲ.
ದಿನಿತ್ಯದಂತೆ ನಗರದಲ್ಲಿ ಎಲ್ಲಾ ಅಂಗಡಿಗಳು ತೆರೆದಿದ್ದು, ವ್ಯಾಪಾರ ವಹಿವಾಟು ಸುಲಲಿತವಾಗಿ ನಡೆಯಿತು. ಹೋಟೆಲ್‍ಗಳು ಮುಚ್ಚಿರಲಿಲ್ಲ. ಸರ್ಕಾರಿ ಹಾಗೂ ಖಾಸಗಿ ಬಸ್‍ಗಳು ಸಂಚರಿಸುತ್ತಿದ್ದರಿಂದ ಎಲ್ಲಿಯೂ ಪ್ರಯಾಣಿಕರಿಗೆ ತೊಂದರೆಯಾಗಲಿಲ್ಲ. ಶಾಲಾ-ಕಾಲೇಜುಗಳು ತೆರೆದಿದ್ದವು. ಗಾಂಧಿವೃತ್ತ, ಎಸ್.ಬಿ.ಎಂ. ವೃತ್ತ, ಜಿಲ್ಲಾಧಿಕಾರಿಗಳ ಕಚೇರಿ ವೃತ್ತದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಹಾಕಲಾಗಿತ್ತು.
ಎ.ಐ.ಟಿ.ಯು.ಸಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು, ವಿವಿಧ ಕಾರ್ಮಿಕ ಸಂಘಟನೆಗಳ ಸಂಚಾಲಕ ಟಿ.ಶಫಿವುಲ್ಲಾ, ಸಿ.ಕೆ.ಗೌಸ್‍ಪೀರ್ ಸೇರಿದಂತೆ ಮೂವತ್ತೈದಕ್ಕೂ ಹೆಚ್ಚು ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಗ್ರಾಮಾಂತರ ಠಾಣೆಗೆ ಕರೆದೊಯ್ದು, ಎರಡು ಮೂರು ತಾಸುಗಳ ನಂತರ ಬಿಡುಗಡೆಗೊಳಿಸಿದರು.
ಒನಕೆ ಓಬವ್ವ ವೃತ್ತದಲ್ಲಿ ನಡೆದ ಮುಷ್ಕರವನ್ನುದ್ದೇಶಿಸಿ ಮಾತನಾಡಿದ ಎ.ಐ.ಟಿ.ಯು.ಸಿ. ಗೌರವಾಧ್ಯಕ್ಷ ಸಿ.ವೈ.ಶಿವರುದ್ರಪ್ಪ 2014 ರ ಲೋಕಸಭಾ ಚುನಾವಣಾ ಪೂರ್ವದಲ್ಲಿಯೇ ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ಜನತೆಯನ್ನು ನಂಬಿಸಿ ದ್ರೋಹವೆಸಗಿರುವ ದೇಶದ ಪ್ರಧಾನಿ ನರೇಂದ್ರಮೋದಿ ಈಗ ಪೌರತ್ವ ಕಾಯ್ದೆಯನ್ನು ಜಾರಿಗೆ ತಂದು ಜಾತಿ, ಧರ್ಮಗಳ ಮಧ್ಯೆ ಗಲಭೆಯುಂಟು ಮಾಡುತ್ತಿರುವುದರ ವಿರುದ್ದ ಮೊದಲು ಜನ ಜಾಗೃತರಾಗಬೇಕು ಎಂದು ಎಚ್ಚರಿಸಿದರು.
ಬಂಡವಾಳಶಾಹಿಗಳ ಪರ ಕಾನೂನುಗಳನ್ನು ಜಾರಿಗೆ ತರುತ್ತಿರುವ ಮೋದಿ ಅನ್ನದಾತ ರೈತ, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರ ಹಕ್ಕುಗಳನ್ನು ಮೊಟಕುಗೊಳಿಸುತ್ತಿದ್ದಾರೆ. ಕೋಮುವಾದಿ ಸಂಘಟನೆ ಎ.ಬಿ.ವಿ.ಪಿ.ಮೂಲಕ ಅಲ್ಲಲ್ಲಿ ಘರ್ಷಣೆಯುಂಟು ಮಾಡುತ್ತಿದ್ದಾರೆ. ವರ್ಷಕ್ಕೆ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ ಮೋದಿ ಇರುವ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಕಾರ್ಖಾನೆಗಳು ಮುಚ್ಚುತ್ತಿವೆ. ಪ್ರತಿಭಟನೆ ಮಾಡುವವರ ಹಕ್ಕುಗಳನ್ನು ಧಮನಗೊಳಿಸುತ್ತಿದ್ದಾರೆ.
ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಜೀವನ ಭದ್ರತೆಯಿಲ್ಲದೆ ಹತ್ತಾರು ವರ್ಷಗಳಿಂದಲೂ ಕಡಿಮೆ ಸಂಬಳಕ್ಕಾಗಿ ದುಡಿಯುತ್ತಿದ್ದಾರೆ. ಇಂತಹ ಅಪಾಯಕಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಕಿತ್ತೊಗೆಯಬೇಕಾಗಿದೆ ಎಂದು ಹೇಳಿದರು.
ನ್ಯಾಯವಾದಿ ಸಿ.ಶಿವುಯಾದವ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನ್ಯಾಯ ಅಕ್ರಮಗಳನ್ನು ಪ್ರಶ್ನಿಸಿ ಪ್ರತಿಭಟನೆಗಿಳಿದವರನ್ನು ಧಮನ ಮಾಡುವ ಕೆಲಸವಾಗುತ್ತಿದೆ. ಎಲ್ಲಿಯವರೆಗೂ ಪ್ರತಿಭಟನಾಕಾರರನ್ನು ಬಂಧಿಸುತ್ತಾರೋ ನೋಡೋಣ. ಹಂತ ಹಂತವಾಗಿ ವಿಧಾನಸೌಧಕ್ಕೂ ಮುತ್ತಿಗೆ ಹಾಕಲಾಗುವುದೆಂದು ಬೆದರಿಕೆ ಹಾಕಿದರು.ಎ.ಐ.ಟಿ.ಯು.ಸಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು, ಸಿ.ಕೆ.ಗೌಸ್‍ಪೀರ್, ಟಿ.ಶಫಿವುಲ್ಲಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಬಡಗಿ ಕೆಲಸಗಾರರ ಸಂಘದ ಅಧ್ಯಕ್ಷ ಎ.ಜಾಕೀರ್‍ಹುಸೇನ್ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಕಾರ್ಮಿಕರು ಹಾಗೂ ಕಾರ್ಮಿಕ ಮುಖಂಡರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
